ವಾಂಖೇಡೆಯಲ್ಲಿ ರನ್ ಸುರಿಮಳೆ; ಡಿ ಕಾಕ್ ಸೆಂಚುರಿ, ಬಾಂಗ್ಲಾಗೆ ಕಠಿಣ ಗುರಿ..!

ಇಲ್ಲಿನ ವಾಂಖೇಡೆ ಮೈದಾನದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕ ಏಯ್ಡನ್ ಮಾರ್ಕ್‌ರಮ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಆದರೆ ಹರಿಣಗಳ ಪಡೆ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ರೀಜಾ ಹೆಂಡ್ರಿಕ್ಸ್ 12 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ರಾಸ್ಸಿ ವ್ಯಾನ್ ಡರ್ ಡುಸೇನ್ ಕೇವಲ ಒಂದು ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದರು.

ICC World Cup 2023 Quinton De Kock 174 Powers South Africa To 382 for 5 against Bangladesh kvn

ಮುಂಬೈ(ಅ.24): 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಹರಿಣಗಳ ಬ್ಯಾಟಿಂಗ್ ಪಡೆ ಮತ್ತೊಮ್ಮೆ ರನ್ ಮಳೆ ಹರಿಸಿದೆ. ಕ್ವಿಂಟನ್ ಡಿ ಕಾಕ್ ಬಾರಿಸಿದ ದಾಖಲೆಯ ಮೂರನೇ ಶತಕ ಹಾಗೂ ಹೆನ್ರಿಚ್ ಕ್ಲಾಸೇನ್, ಏಯ್ಡನ್ ಮಾರ್ಕ್‌ರಮ್ ಹಾಗೂ ಡೇವಿಡ್ ಮಿಲ್ಲರ್ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡವು 5 ವಿಕೆಟ್ ಕಳೆದುಕೊಂಡು 382 ರನ್ ಬಾರಿಸಿದ್ದು, ಬಾಂಗ್ಲಾದೇಶಕ್ಕೆ ಕಠಿಣ ಗುರಿ ನೀಡಿದೆ. 

ಇಲ್ಲಿನ ವಾಂಖೇಡೆ ಮೈದಾನದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕ ಏಯ್ಡನ್ ಮಾರ್ಕ್‌ರಮ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಆದರೆ ಹರಿಣಗಳ ಪಡೆ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ರೀಜಾ ಹೆಂಡ್ರಿಕ್ಸ್ 12 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ರಾಸ್ಸಿ ವ್ಯಾನ್ ಡರ್ ಡುಸೇನ್ ಕೇವಲ ಒಂದು ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದರು.

ಆಸರೆಯಾದ ಡಿ ಕಾಕ್-ಮಾರ್ಕ್‌ರಮ್ ಜತೆಯಾಟ: ಕೇವಲ 36 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಹರಿಣಗಳ ಪಡೆಗೆ ಮೂರನೇ ವಿಕೆಟ್‌ಗೆ ಕ್ವಿಂಟನ್ ಡಿ ಕಾಕ್ ಹಾಗೂ ಏಯ್ಡನ್ ಮಾರ್ಕ್‌ರಮ್ ಜವಾಬ್ದಾರಿಯುತ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಮೂರನೇ ವಿಕೆಟ್‌ಗೆ ಈ ಜೋಡಿ 137 ಎಸೆತಗಳನ್ನು ಎದುರಿಸಿ 131 ರನ್‌ಗಳ ಜತೆಯಾಟವಾಡುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡುವಲ್ಲಿ ಯಶಸ್ವಿಯಾದರು. ಉತ್ತಮವಾಗಿ ಆಡುತ್ತಿದ್ದ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಬಾಂಗ್ಲಾದೇಶ ನಾಯಕ ಶಕೀಬ್ ಅಲ್ ಹಸನ್ ಯಶಸ್ವಿಯಾದರು. ದಕ್ಷಿಣ ಆಫ್ರಿಕಾ ನಾಯಕ ಏಯ್ಡನ್ ಮಾರ್ಕ್‌ರಮ್‌ 69 ಎಸೆತಗಳನ್ನು ಎದುರಿಸಿ 7 ಬೌಂಡರಿ ಸಹಿತ 60 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಏಕದಿನ ವಿಶ್ವಕಪ್‌ನಲ್ಲಿ 3ನೇ ಶತಕ ಚಚ್ಚಿದ ಕ್ವಿಂಟನ್ ಡಿ ಕಾಕ್..! ಹೊಸ ದಾಖಲೆ ಬರೆದ ಓಪನ್ನರ್

ವಿಶ್ವಕಪ್ ಟೂರ್ನಿಯಲ್ಲಿ ಮೂರನೇ ಶತಕ ಚಚ್ಚಿದ ಡಿ ಕಾಕ್: ಈ ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನವೇ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿಯಾಗುವುದಾಗಿ ಘೋಷಿಸಿರುವ ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡಿ ಕಾಕ್, ಇದೀಗ ಮತ್ತೊಂದು ಶತಕ ಸಿಡಿಸಿ ಸಂಭ್ರಮಿಸಿದರು. ಕೇವಲ 101 ಎಸೆತಗಳನ್ನು ಎದುರಿಸಿದ ಡಿ ಕಾಕ್, ಈ ಆವೃತ್ತಿಯ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮೂರನೇ ಶತಕ ಬಾರಿಸಿ ಮಿಂಚಿದರು. ನಾಲ್ಕನೇ ವಿಕೆಟ್‌ಗೆ ಡಿ ಕಾಕ್ ಹಾಗೂ ಕ್ಲಾಸೆನ್ ಜೋಡಿ ಕೇವಲ 87 ಎಸೆತಗಳನ್ನು ಎದುರಿಸಿ 142 ರನ್‌ಗಳ ಜತೆಯಾಟವಾಡುವ ಮೂಲಕ ತಂಡದ ರನ್ ವೇಗಕ್ಕೆ ಚುರುಕು ಮುಟ್ಟಿಸಿದರು. ಅಂತಿಮವಾಗಿ ಡಿ ಕಾಕ್, 140 ಎಸೆತಗಳನ್ನು ಎದುರಿಸಿ 15 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ 174 ರನ್ ಬಾರಿಸಿ ಹಸನ್ ಮೊಹಮ್ಮದ್‌ಗೆ ವಿಕೆಟ್ ಒಪ್ಪಿಸಿದರು.

ರನ್ ಮಳೆ ಹರಿಸಿದ ಕ್ಲಾಸೇನ್-ಮಿಲ್ಲರ್: ಡಿ ಕಾಕ್ ವಿಕೆಟ್ ಪತನದ ಬಳಿಕ ಹೆನ್ರಿಚ್ ಕ್ಲಾಸೇನ್ ಹಾಗೂ ಡೇವಿಡ್ ಮಿಲ್ಲರ್ ಕೊನೆಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸುವ ಮೂಲಕ ತಂಡ ಬೃಹತ್ ಮೊತ್ತ ಕಲೆಹಾಕಲು ನೆರವಾದರು. ಈ ಜೋಡಿ 5ನೇ ವಿಕೆಟ್‌ಗೆ ಕೇವಲ 25 ಎಸೆತಗಳಲ್ಲಿ 65 ರನ್‌ಗಳ ಜತೆಯಾಟ ನಿಭಾಯಿಸಿತು. ವಾಂಖೇಡೆ ಮೈದಾನದಲ್ಲಿ ಸಿಕ್ಸರ್‌ಗಳ ಮಳೆ ಹರಿಸಿದ ಕ್ಲಾಸೇನ್ ಕೇವಲ 49 ಎಸೆತಗಳನ್ನು ಎದುರಿಸಿ 2 ಬೌಂಡರಿ ಹಾಗೂ 8 ಮುಗಿಲೆತ್ತರದ ಸಿಕ್ಸರ್‌ಗಳ ನೆರವಿನಿಂದ 90 ರನ್ ಬಾರಿಸಿ ಕೊನೆಯ ಓವರ್‌ನ ಎರಡನೇ ಎಸೆತದಲ್ಲಿ ವಿಕೆಟ್‌ ಒಪ್ಪಿಸಿ ಶತಕ ಬಾರಿಸುವ ಅವಕಾಶ ಕೈಚೆಲ್ಲಿದರು. ಇನ್ನು ಡೇವಿಡ್ ಮಿಲ್ಲರ್, ಕೇವಲ 15 ಎಸೆತಗಳಲ್ಲಿ ಒಂದು ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 34 ರನ್ ಬಾರಿಸಿ ಅಜೇಯರಾಗುಳಿದರು.
ಕೊನೆಯ 10 ಓವರ್‌ಗಳಲ್ಲಿ ದಕ್ಷಿಣ ಆಫ್ರಿಕಾ ತಂಡವು 144 ರನ್ ಕಲೆಹಾಕುವಲ್ಲಿ ಯಶಸ್ವಿಯಾಯಿತು.

Latest Videos
Follow Us:
Download App:
  • android
  • ios