ICC World Cup 2023: ವಿಶ್ವ ಸಮರಕ್ಕೆ 10 ಸೈನ್ಯಗಳು ಸನ್ನದ್ದ..!
ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ಬಾಂಗ್ಲಾದೇಶ, ಆಫ್ಘಾನಿಸ್ತಾನ ತಂಡಗಳು ವಿಶ್ವಕಪ್‌ಗೆ ನೇರ ಪ್ರವೇಶ ಪಡೆದರೆ, ಶ್ರೀಲಂಕಾ ಹಾಗೂ ನೆದರ್‌ಲೆಂಡ್ಸ್ ಅರ್ಹತಾ ಟೂರ್ನಿಯ ಫೈನಲ್ ಪ್ರವೇಶಿಸಿ, ಪ್ರಧಾನ ಟೂರ್ನಿಗೆ ಪ್ರವೇಶಿಸಿದವು. ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವೆಸ್ಟ್‌ಇಂಡೀಸ್ ಅರ್ಹತೆ ಪಡೆದಿಲ್ಲ. ಎಲ್ಲಾ 10 ತಂಡಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ ನೋಡಿ.
ಬೆಂಗಳೂರು(ಅ.03): 13ನೇ ಆವೃತ್ತಿಯ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಆರಂಭಕ್ಕೆ ಇನ್ನೆರಡೇ ದಿನ ಬಾಕಿ ಇದೆ. ಟೂರ್ನಿಯಲ್ಲಿ 10 ತಂಡಗಳು ಸೆಣಸಲಿದ್ದು, ಎಲ್ಲಾ ತಂಡಗಳು ಈಗಾಗಲೇ ಭರ್ಜರಿ ಸಿದ್ದತೆ ನಡೆಸಿವೆ. ಕೊನೆಯ ಹಂತದ ತಯಾರಿಗಾಗಿ ಅಭ್ಯಾಸ ಪಂದ್ಯಗಳನ್ನು ಆಡುತ್ತಿವೆ. ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ಬಾಂಗ್ಲಾದೇಶ, ಆಫ್ಘಾನಿಸ್ತಾನ ತಂಡಗಳು ವಿಶ್ವಕಪ್‌ಗೆ ನೇರ ಪ್ರವೇಶ ಪಡೆದರೆ, ಶ್ರೀಲಂಕಾ ಹಾಗೂ ನೆದರ್‌ಲೆಂಡ್ಸ್ ಅರ್ಹತಾ ಟೂರ್ನಿಯ ಫೈನಲ್ ಪ್ರವೇಶಿಸಿ, ಪ್ರಧಾನ ಟೂರ್ನಿಗೆ ಪ್ರವೇಶಿಸಿದವು. ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವೆಸ್ಟ್‌ಇಂಡೀಸ್ ಅರ್ಹತೆ ಪಡೆದಿಲ್ಲ. ಎಲ್ಲಾ 10 ತಂಡಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ ನೋಡಿ.
1. ಭಾರತ
ವಿಶ್ವ ರ್‍ಯಾಂಕಿಂಗ್: 01
ವಿಶ್ವಕಪ್ ಸಾಧನೆ: 1983, 2011ರಲ್ಲಿ ಚಾಂಪಿಯನ್
ನಾಯಕ: ರೋಹಿತ್ ಶರ್ಮಾ
ತವರಿನಲ್ಲಿ ನಡೆಯಲಿರುವ ವಿಶ್ವಕಪ್ ಗೆಲ್ಲಲು ಭಾರತವೇ ಫೇವರಿಟ್. 2011ರಲ್ಲಿ ಕೊನೆ ಬಾರಿಗೆ ವಿಶ್ವಕಪ್ ಗೆದ್ದಿದ್ದ ಭಾರತ, 2013ರ ಚಾಂಪಿಯನ್ಸ್ ಟ್ರೋಫಿ ನಂತರ ಯಾವುದೇ ಐಸಿಸಿ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿಲ್ಲ. ಪ್ರಶಸ್ತಿ ಬರ ನೀಗಿಸಿಕೊಳ್ಳಲು ಬಲಿಷ್ಠ ತಂಡ ಕಟ್ಟಿಕೊಂಡು ನಾಯಕ ರೋಹಿತ್ ಶರ್ಮಾ ಕಣಕ್ಕಿಳಿಯಲು ಅಣಿಯಾಗಿದ್ದಾರೆ. ಅಗ್ರ ಬ್ಯಾಟರ್‌ಗಳಾದ ರೋಹಿತ್, ಗಿಲ್, ಕೊಹ್ಲಿ ಉತ್ತಮ ಲಯದಲ್ಲಿದ್ದಾರೆ. ಶ್ರೇಯಸ್ ಅಯ್ಯರ್ ತಂಡಕ್ಕೆ ವಾಪಸಾಗಿರುವುದು, ರಾಹುಲ್ ಲಯಕ್ಕೆ ಮರಳಿರುವುದು ತಂಡದ ಬಲ ಹೆಚ್ಚಿಸಲಿದೆ. ಸಿರಾಜ್, ಬೂಮ್ರಾ ಬೌಲಿಂಗ್ ಪಡೆಯನ್ನು ಮುನ್ನಡೆಸಲಿದ್ದು, ಹಾರ್ದಿಕ್‌ರ ಆಲ್ರೌಂಡ್ ಆಟ ನಿರ್ಣಾಯಕವಾಗಲಿದೆ. ಕುಲ್ದೀಪ್ ಜೊತೆ ಹಳೆ ಹುಲಿ ಅಶ್ವಿನ್, ಎದುರಾಳಿಗಳನ್ನು ತಮ್ಮ ಸ್ಪಿನ್ ಬಲೆಗೆ ಸಿಕ್ಕಿಸಿದರೆ ಭಾರತದ ಓಟವನ್ನು ತಡೆಯುವುದು ಕಷ್ಟವಾಗಬಹುದು. ಜಡೇಜಾ ಅವರ ಬ್ಯಾಟಿಂಗ್ ಸುಧಾರಿಸಬೇಕಿದ್ದು, ರಾಹುಲ್ ಕೀಪಿಂಗ್‌ನಲ್ಲಿ ಮಾಡುತ್ತಿರುವ ತಪ್ಪುಗಳನ್ನು ತಿದ್ದಿಕೊಳ್ಳುವುದು ಅನಿವಾರ್ಯವೆನಿಸಿದೆ. ಮೇಲ್ನೋಟಕ್ಕೆ ಭಾರತ ಸಲೀಸಾಗಿ ಸೆಮಿಫೈನಲ್ ವರೆಗೂ ಸಾಗಲು ಯಾವುದೇ ಅಡ್ಡಿಯಾಗುವಂತೆ ಕಾಣುತ್ತಿಲ್ಲ.
ತಾರಾ ಆಟಗಾರರು: ಕೊಹ್ಲಿ, ಗಿಲ್, ಹಾರ್ದಿಕ್, ಬೂಮ್ರಾ, ಸಿರಾಜ್
2. ಪಾಕಿಸ್ತಾನ
ವಿಶ್ವ ರ್‍ಯಾಂಕಿಂಗ್: 02
ವಿಶ್ವಕಪ್ ಸಾಧನೆ: 1992ರಲ್ಲಿ ಚಾಂಪಿಯನ್
ನಾಯಕ: ಬಾಬರ್ ಆಜಂ
ಕಳೆದೊಂದು ವರ್ಷದಲ್ಲಿ ಉತ್ತಮ ಪ್ರದರ್ಶನ ನೀಡಿ ಬಹುತೇಕ ಸರಣಿಗಳಲ್ಲಿ ಗೆದ್ದಿರುವ ಪಾಕಿಸ್ತಾನ, ಕೆಲ ಪ್ರಮುಖ ಸಮಸ್ಯೆಗಳೊಂದಿಗೆ ವಿಶ್ವಕಪ್‌ಗೆ ಕಾಲಿಡಲಿದೆ. ಆರಂಭಿಕರಾದ ಫಖರ್ ಜಮಾನ್ ಹಾಗೂ ಇಮಾಮ್ ಉಲ್-ಹಕ್ ಫಾರ್ಮ್‌ನಲ್ಲಿಲ್ಲ. ತಂಡ ನಾಯಕ ಬಾಬರ್ ಹಾಗೂ ಮೊಹಮದ್ ರಿಜ್ವಾನ್ ಮೇಲೆ ಅತಿಯಾಗಿ ಅವಲಂಬಿತಗೊಂಡಿದೆ. ವೇಗಿ ನಸೀಂ ಶಾ ಅನುಪಸ್ಥಿತಿ ತಂಡವನ್ನು ಬಲವಾಗಿ ಕಾಡಬಹುದು. ಸ್ಪಿನ್ ಬೌಲಿಂಗ್ ಎದುರು ಬ್ಯಾಟರ್‌ಗಳು ಮಂಕಾಗುತ್ತಿರುವುದನ್ನು ಎದುರಾಳಿಗಳು ಅಸ್ತ್ರವಾಗಿ ಬಳಸಿಕೊಳ್ಳಬಹುದು.
ತಾರಾ ಆಟಗಾರರು: ರಿಜ್ವಾನ್, ಶಾಹೀನ್, ಶದಾಬ್
3. ಆಸ್ಟ್ರೇಲಿಯಾ
ವಿಶ್ವ ರ್‍ಯಾಂಕಿಂಗ್: 03
ವಿಶ್ವಕಪ್ ಸಾಧನೆ: 1987, 99, 2003, 07, 15ರಲ್ಲಿ ಚಾಂಪಿಯನ್
ನಾಯಕ: ಪ್ಯಾಟ್ ಕಮಿನ್ಸ್
ವಿಶ್ವಕಪ್ ಗೆಲ್ಲಬಲ್ಲ ಮತ್ತೊಂದು ನೆಚ್ಚಿನ ತಂಡಗಳಲ್ಲಿ ಆಸ್ಟ್ರೇಲಿಯಾ ಕೂಡ ಒಂದು. ವಿಶ್ವಕಪ್‌ಗೆ ಕಾಲಿಡುವ ಮೊದಲು ಸತತ 2 ಸರಣಿಗಳನ್ನು ಸೋತಿದ್ದರೂ, ದೊಡ್ಡ ಟೂರ್ನಿಗಳಲ್ಲಿ ಆಡಿದ, ಒತ್ತಡದ ಪರಿಸ್ಥಿತಿಗಳನ್ನು ನಿಭಾಯಿಸಿದ ಅನುಭವ ಆಸೀಸ್‌ಗೆ ಲಾಭವಾಗಲಿದೆ. ಮ್ಯಾಕ್ಸ್‌ವೆಲ್, ಕಮಿನ್ಸ್, ಸ್ಮಿತ್ ವಾಪಸಾಗಿರುವುದು ತಂಡದ ಬಲ ಹೆಚ್ಚಿಸಲಿದೆ. ಆದರೆ ತಂಡದ ಡೆತ್ ಓವರ್ಸ್ ಬೌಲಿಂಗ್ ತೀರಾ ಕಳಪೆಯಾಗಿದ್ದು, ಈ ವರ್ಷ 40ರಿಂದ 50ನೇ ಓವರ್ ನಡುವೆ ಅತಿಹೆಚ್ಚು ರನ್ ಬಿಟ್ಟುಕೊಟ್ಟ ತಂಡಗಳ ಪೈಕಿ ಆಸೀಸ್ ಸಹ ಒಂದು.
ತಾರಾ ಆಟಗಾರರು: ಸ್ಮಿತ್, ಲಬುಶೇನ್, ಸ್ಟಾರ್ಕ್
4. ದಕ್ಷಿಣ ಆಫ್ರಿಕಾ
ವಿಶ್ವ ರ್‍ಯಾಂಕಿಂಗ್: 04
ವಿಶ್ವಕಪ್ ಸಾಧನೆ: 4 ಬಾರಿ ಸೆಮಿಫೈನಲ್
ನಾಯಕ: ತೆಂಬ ಬವುಮಾ
ಪ್ರಚಂಡ ಲಯದಲ್ಲಿರುವ ದಕ್ಷಿಣ ಆಫ್ರಿಕಾ, 2023ರಲ್ಲಿ ಆಡಿದ 4 ಏಕದಿನ ಸರಣಿಗಳಲ್ಲಿ 3ರಲ್ಲಿ ಗೆದ್ದು, ಒಂದನ್ನು ಡ್ರಾ ಮಾಡಿಕೊಂಡಿದೆ. ಈ ವರ್ಷ ಆಡಿರುವ ಒಟ್ಟು 12 ಪಂದ್ಯಗಳಲ್ಲಿ 4ರಲ್ಲಿ 300ಕ್ಕಿಂತ ಹೆಚ್ಚು ರನ್ ಕಲೆಹಾಕಿದ್ದು, ಒಂದು ಪಂದ್ಯದಲ್ಲಿ 400 ರನ್ ಸಹ ದಾಟಿದೆ. ಹರಿಣಗಳ ಆಕ್ರಮಣಕಾರಿ ಆಟ ಎದುರಾಳಿಗಳನ್ನು ನಡುಗಿಸಿದ್ದು, ಕ್ಲಾಸೆನ್, ಮಿಲ್ಲರ್‌ರಂತಹ ವಿಶ್ವ ಶ್ರೇಷ್ಠ ಫಿನಿಶರ್‌ಗಳ ಬಲ ತಂಡಕ್ಕಿದೆ. ರಬಾಡ, ಎನ್‌ಗಿಡಿ ಬೌಲಿಂಗ್ ಪಡೆಯನ್ನು ಮುನ್ನಡೆಸಲಿದ್ದು ಯಾನ್ಸನ್ ಟ್ರಂಪ್‌ಕಾರ್ಡ್ ಆಗಬಹುದು. ಆದರೆ ನೋಕಿಯ ಅವರ ಅನುಪಸ್ಥಿತಿ ತಂಡವನ್ನು ಕಾಡುವ ಸಾಧ್ಯತೆ ಇದೆ.
ತಾರಾ ಆಟಗಾರರು: ಮಾರ್ಕ್‌ರಮ್, ಕ್ಲಾಸೆನ್, ಮಿಲ್ಲರ್
5. ಇಂಗ್ಲೆಂಡ್
ವಿಶ್ವ ರ್‍ಯಾಂಕಿಂಗ್: 05
ವಿಶ್ವಕಪ್ ಸಾಧನೆ: 2019ರಲ್ಲಿ ಚಾಂಪಿಯನ್
ನಾಯಕ: ಜೋಸ್ ಬಟ್ಲರ್
ಹಾಲಿ ವಿಶ್ವ ಚಾಂಪಿಯನ್ ಇಂಗ್ಲೆಂಡ್ ‘ಬಾಜ್‌ಬಾಲ್’ ಮಾದರಿಯ ಆಕ್ರಮಣಕಾರಿ ಆಟವನ್ನು ಈ ವಿಶ್ವಕಪ್‌ನಲ್ಲೂ ಪ್ರದರ್ಶಿಸಲು ಯೋಜನೆ ರೂಪಿಸಿದೆ. ಇದರ ಭಾಗವಾಗಿ ಬೆನ್ ಸ್ಟೋಕ್ಸ್ ನಿವೃತ್ತಿಯಿಂದ ಹೊರಬಂದು ತಂಡ ಕೂಡಿಕೊಂಡಿದ್ದು, ‘ಹೊಡಿ ಬಡಿ’ ಆಟದ ತಜ್ಞ ಹ್ಯಾರಿ ಬ್ರೂಕ್‌ಗೂ ಜಾಗ ಕಲ್ಪಿಸಲಾಗಿದೆ. ಬಟ್ಲರ್, ಬೇರ್‌ಸ್ಟೋವ್, ಮಲಾನ್, ಲಿವಿಂಗ್‌ಸ್ಟೋನ್, ರೂಟ್, ಅಲಿ ಹೀಗೆ ಸ್ಫೋಟಕ ಬ್ಯಾಟರ್‌ಗಳ ದಂಡೇ ಇದ್ದು, ವೋಕ್ಸ್, ಕರ್ರನ್‌ರಂತಹ ಆಲ್ರೌಂಡರ್‌ಗಳೂ ಇದ್ದಾರೆ. ಇಂಗ್ಲೆಂಡ್ ಈ ವರ್ಷ 6 ಬಾರಿ 300+ ರನ್ ಕಲೆಹಾಕಿ ಅತ್ಯುತ್ತಮ ಲಯದಲ್ಲಿದೆ.
ತಾರಾ ಆಟಗಾರರು: ಸ್ಟೋಕ್ಸ್, ರೂಟ್, ಅಲಿ.
6. ನ್ಯೂಜಿಲೆಂಡ್
ವಿಶ್ವ ರ್‍ಯಾಂಕಿಂಗ್: 06
ವಿಶ್ವಕಪ್ ಸಾಧನೆ: 2015, 19ರಲ್ಲಿ ರನ್ನರ್-ಅಪ್
ನಾಯಕ: ಕೇನ್ ವಿಲಿಯಮ್ಸನ್
ಪ್ರತಿ ಬಾರಿಯಂತೆ ಈ ಸಲವೂ ‘ಅಂಡರ್ ಡಾಗ್ಸ್’ ಖ್ಯಾತಿಯೊಂದಿಗೇ ನ್ಯೂಜಿಲೆಂಡ್ ತಂಡ ವಿಶ್ವಕಪ್‌ಗೆ ಕಾಲಿಡಲಿದೆ. ಈ ವರ್ಷ ತಂಡದ ಲಯ ಹೇಳಿಕೊಳ್ಳುವಂತಿಲ್ಲ. ಗೆದ್ದಿದ್ದಕ್ಕಿಂತ ಸೋತಿದ್ದೇ ಹೆಚ್ಚು. ಆದರೆ ನಾಯಕ ವಿಲಿಯಮ್ಸನ್ ತಂಡ ಕೂಡಿಕೊಂಡಿರುವುದು ಸಮತೋಲನ ತರಲಿದೆ. ಟಿಮ್ ಸೌಥಿ ಗಾಯಗೊಂಡಿರುವುದು ತಂಡಕ್ಕೆ ಹಿನ್ನಡೆ ಉಂಟು ಮಾಡಬಹುದು. ಡೆವೊನ್ ಕಾನ್‌ವೇ, ಟಾಮ್ ಲೇಥಮ್ ಆಟ ನಿರ್ಣಾಯಕವಾಗಲಿದ್ದು, ಆಲ್ರೌಂಡರ್‌ಗಳಾದ ಮಿಚೆಲ್, ನೀಶಮ್, ಸ್ಯಾಂಟ್ನರ್ ಸಹ ಪ್ರಮುಖ ಪಾತ್ರ ವಹಿಸಬೇಕಿದೆ.
ತಾರಾ ಆಟಗಾರರು: ಕಾನ್‌ವೇ, ಬೌಲ್ಟ್, ಲೇಥಮ್
7. ಶ್ರೀಲಂಕಾ
ವಿಶ್ವ ರ್‍ಯಾಂಕಿಂಗ್: 07
ವಿಶ್ವಕಪ್ ಸಾಧನೆ: 1996ರಲ್ಲಿ ಚಾಂಪಿಯನ್
ನಾಯಕ: ದಸುನ್ ಶಾನಕ
ಅರ್ಹತಾ ಟೂರ್ನಿಯಲ್ಲಿ ಚಾಂಪಿಯನ್ ಆಗಿ ವಿಶ್ವಕಪ್‌ಗೆ ಕಾಲಿಟ್ಟ ಶ್ರೀಲಂಕಾ, ಇತ್ತೀಚೆಗೆ ಸ್ಥಿರ ಪ್ರದರ್ಶನ ಕಾಯ್ದುಕೊಂಡಿದೆ. 2023ರಲ್ಲಿ ಆಡಿರುವ 22 ಪಂದ್ಯಗಳಲ್ಲಿ 14ರಲ್ಲಿ ಗೆದ್ದಿರುವ ಲಂಕಾ, ಬಹುತೇಕ ಪಂದ್ಯಗಳಲ್ಲಿ ಎದುರಾಳಿಯನ್ನು ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿದೆ. ತಂಡದಲ್ಲಿ ಅನನುಭವಿಗಳೇ ಹೆಚ್ಚಿದ್ದರೂ, ಪ್ರತಿಭೆಗೆ ಕೊರತೆಯಿಲ್ಲ. ಭಾರತೀಯ ಉಪಖಂಡದ ಪಿಚ್‌ಗಳು ಲಂಕಾಕ್ಕೆ ಹೊಸದಲ್ಲ. ಹೀಗಾಗಿ ಯಾವುದೇ ಎದುರಾಳಿ ಸಹ ಲಂಕಾವನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಬೌಲಿಂಗ್ ಜೊತೆ ಬ್ಯಾಟಿಂಗ್‌ನಲ್ಲೂ ಲಂಕಾ ಮೇಲುಗೈ ಸಾಧಿಸಿದರೆ ಕೆಲ ಅಚ್ಚರಿಯ ಫಲಿತಾಂಶಗಳನ್ನು ನಿರೀಕ್ಷಿಸಬಹುದು.
ತಾರಾ ಆಟಗಾರರು: ಕುಸಾಲ್ ಮೆಂಡಿಸ್, ಪತಿರನ, ತೀಕ್ಷಣ
8. ಬಾಂಗ್ಲಾದೇಶ
ವಿಶ್ವ ರ್‍ಯಾಂಕಿಂಗ್: 08
ವಿಶ್ವಕಪ್ ಸಾಧನೆ: 1 ಬಾರಿ ಕ್ವಾರ್ಟರ್‌ಫೈನಲ್
ನಾಯಕ: ಶಕೀಬ್-ಅಲ್-ಹಸನ್
ವಿಶ್ವಕಪ್‌ಗೆ ಕೆಲವೇ ದಿನ ಬಾಕಿ ಇದ್ದಾಗ ತಮೀಮ್ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಕಾರಣ ಶಕೀಬ್ ಹೆಗಲಿಗೆ ತಂಡ ಮುನ್ನಡೆಸುವ ಹೊಣೆ ನೀಡಲಾಗಿದೆ. ತಂಡದೊಳಿಗೆ ಇನ್ನೂ ಕೆಲ ಸಮಸ್ಯೆಗಳಿದ್ದು, ಇತ್ತೀಚಿನ ಏಷ್ಯಾಕಪ್‌ನಲ್ಲಿ ಬಾಂಗ್ಲಾ ಗುಂಪು ಹಂತದಲ್ಲೇ ಹೊರಬಿದ್ದಿತ್ತು. ಆದರೆ ಮೆಹಿದಿ ಹಸನ್, ತೌಹಿದ್ ಹೃದೊಯ್‌ರಂತಹ ಕೆಲ ಯುವ ಪ್ರತಿಭೆಗಳು ಭರವಸೆ ಮೂಡಿಸಿವೆ. ಹಿರಿಯ ವೇಗಿ ಮುಸ್ತಾಫಿಜುರ್, ಹಿರಿಯ ಬ್ಯಾಟರ್ ಮುಷ್ಫಿಕುರ್ ರಹೀಂ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿರುವ ಬಾಂಗ್ಲಾ, ತನ್ನ ಟ್ರಂಪ್‌ಕಾರ್ಡ್ ಶಕೀಬ್ ಮೇಲೆಯೇ ಹೆಚ್ಚು ಅವಲಂಬಿತಗೊಂಡಿದೆ ಎನ್ನುವುದರಲ್ಲಿ ಅನುಮಾನವಿಲ್ಲ.
ತಾರಾ ಆಟಗಾರರು: ಮುಷ್ಫಿಕುರ್, ಮುಸ್ತಾಫಿಜುರ್, ಲಿಟನ್
9. ಅಫ್ಘಾನಿಸ್ತಾನ
ವಿಶ್ವ ರ್‍ಯಾಂಕಿಂಗ್: 09
ವಿಶ್ವಕಪ್ ಸಾಧನೆ: ಗುಂಪು ಹಂತ
ನಾಯಕ: ಹಶ್ಮತ್ತುಲ್ಲಾ ಶಾಹೀದಿ
ಅಫ್ಘಾನಿಸ್ತಾನದ ಅಂಕಿ-ಅಂಶಗಳು ತಂಡದ ಪ್ರತಿಭೆಗಳ ಮಾಪನ ಖಂಡಿತ ಅಲ್ಲ. ವಿಶ್ವಕಪ್ ಟೂರ್ನಿಯು ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿರುವ ಕಾರಣ ಎಲ್ಲಾ ತಂಡಗಳ ವಿರುದ್ಧವೂ ಆಫ್ಘನ್ ಆಡಲಿದೆ. ಟೂರ್ನಿಯು ನಿರ್ಣಾಯಕ ಹಂತಕ್ಕೆ ತಲುಪಿದಾಗ ಕೆಲ ಆಘಾತಕಾರಿ ಫಲಿತಾಂಶಗಳಿಗೆ ಆಫ್ಘನ್ ಸಾಕ್ಷಿಯಾದರೆ ಯಾವುದೇ ಅಚ್ಚರಿಯಿಲ್ಲ. ತಂಡದಲ್ಲಿ ರಶೀದ್, ನಬಿ, ಮುಜೀಬ್‌ರಂತಹ ವಿಶ್ವಗುಣಮಟ್ಟದ ಸ್ಪಿನ್ನರ್‌ಗಳಿದ್ದಾರೆ. ಪಾಕಿಸ್ತಾನ, ನ್ಯೂಜಿಲೆಂಡ್, ನೆದರ್‌ಲೆಂಡ್ಸ್ ವಿರುದ್ಧ ಆಫ್ಘನ್ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಆಡಲಿದ್ದು, ಈ ಪಂದ್ಯಗಳು ಹೆಚ್ಚು ಕುತೂಹಲಕ್ಕೆ ಕಾರಣವಾಗಬಹುದು.
ತಾರಾ ಆಟಗಾರರು: ರಶೀದ್, ನಬಿ, ರಹಮಾನುಲ್ಲಾ
10. ನೆದರ್‌ಲೆಂಡ್ಸ್
ವಿಶ್ವ ರ್‍ಯಾಂಕಿಂಗ್: 14
ವಿಶ್ವಕಪ್ ಸಾಧನೆ: ಗುಂಪು ಹಂತ
ನಾಯಕ: ಸ್ಕಾಟ್ ಎಡ್ವರ್ಡ್ಸ್
ಅರ್ಹತಾ ಟೂರ್ನಿಯಲ್ಲಿ ಅಚ್ಚರಿ ಪ್ರದರ್ಶನ ನೀಡಿ, ಮಾಜಿ ಚಾಂಪಿಯನ್ ವೆಸ್ಟ್‌ಇಂಡೀಸ್ ಅನ್ನು ಹೊರಹಾಕಿದ ನೆದರ್‌ಲೆಂಡ್ಸ್ ವಿಶ್ವಕಪ್‌ನಲ್ಲೂ ಉತ್ತಮ ಆಟವಾಡುವ ನಿರೀಕ್ಷೆಯೊಂದಿಗೆ ಕಣಕ್ಕಿಳಿಯಲಿದೆ. ವಿಶ್ವಕಪ್ ಸಿದ್ಧತೆಗಾಗಿ ಒಂದು ತಿಂಗಳು ಮೊದಲೇ ಭಾರತಕ್ಕೆ ಆಗಮಿಸಿದ ಡಚ್ ಪಡೆ, ಬೆಂಗಳೂರಲ್ಲಿ ಶಿಬಿರವನ್ನು ನಡೆಸಿತ್ತು. ಸ್ಥಳೀಯ ಬೌಲರ್‌ಗಳ ಸಹಾಯ ಪಡೆದು, ಭಾರತೀಯ ಪಿಚ್‌ಗಳಿಗೆ ಅಗತ್ಯವಿರುವ ಆಟದ ಶೈಲಿಯನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಿದ ನೆದರ್‌ಲೆಂಡ್ಸ್ ಕರ್ನಾಟಕ ರಾಜ್ಯ ತಂಡದ ವಿರುದ್ಧ 2 ಅಭ್ಯಾಸ ಪಂದ್ಯವನ್ನೂ ಆಡಿತ್ತು.
ತಾರಾ ಆಟಗಾರರು: ಮ್ಯಾಕ್ಸ್ ಒ ಡೌಡ್, ಬಾರ್ರೆಸ್ಸಿ, ವಾನ್ ಡೆರ್ ಮರ್ವೆ