* ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ಇಂಗ್ಲೆಂಡ್ ಸವಾಲು* 2017ರ ವಿಶ್ವಕಪ್‌ನ ಫೈನಲ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಸೋತಿದ್ದ ಟೀಂ ಇಂಡಿಯಾ* ಫೈನಲ್ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಳ್ಳಲು ಸಜ್ಜಾದ ಮಿಥಾಲಿ ರಾಜ್ ಪಡೆ

ಮೌಂಟ್‌ ಮಾಂಗನುಯಿ(ಮಾ.15): ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ (ICC Women's World Cup) ಸೆಮಿಫೈನಲ್‌ ಸ್ಥಾನವನ್ನು ಗಟ್ಟಿಗೊಳಿಸುವ ನಿರೀಕ್ಷೆಯಲ್ಲಿರುವ ಕಳೆದ ಬಾರಿಯ ರನ್ನರ್‌-ಅಪ್‌ ಭಾರತ, ಬುಧವಾರ ಇಂಗ್ಲೆಂಡ್‌ ಸವಾಲನ್ನು ಎದುರಿಸಲಿದೆ. 2017ರ ವಿಶ್ವಕಪ್‌ನ ಫೈನಲ್‌ನಲ್ಲಿ ಇಂಗ್ಲೆಂಡ್‌ ವಿರುದ್ಧವೇ ಸೋತು ಚೊಚ್ಚಲ ಪ್ರಶಸ್ತಿ ಗೆಲ್ಲುವ ಅವಕಾಶ ಕಳೆದುಕೊಂಡಿದ್ದ ಮಿಥಾಲಿ ರಾಜ್‌ (Mithali Raj) ಪಡೆ ಈ ಪಂದ್ಯದಲ್ಲಿ ಸೇಡು ತೀರಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.

ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಗೆದ್ದ ಭಾರತ, ಬಳಿಕ ನ್ಯೂಜಿಲೆಂಡ್‌ ವಿರುದ್ಧ ಸೋತಿತ್ತು. ಆದರೆ 3ನೇ ಪಂದ್ಯದಲ್ಲಿ ವೆಸ್ಟ್‌ಇಂಡೀಸ್‌ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಟೀಂ ಇಂಡಿಯಾ ಆಂಗ್ಲರ ವಿರುದ್ಧವೂ ಅದೇ ಲಯ ಮುಂದುವಿರಿಸುವ ತವಕದಲ್ಲಿದೆ. ಸ್ಮೃತಿ ಮಂಧಾನ (Smriti Mandhana), ಹರ್ಮನ್‌ಪ್ರೀತ್‌ ಕೌರ್‌ (Harmanpreet Kaur) ಬ್ಯಾಟಿಂಗ್‌ನಲ್ಲಿ ಮಿಂಚುತ್ತಿದ್ದು, ಜೂಲನ್‌ ಗೋಸ್ವಾಮಿ, ರಾಜೇಶ್ವರಿ ಗಾಯಕ್ವಾಡ್‌, ಸ್ನೇಹ ರಾಣ ಬೌಲಿಂಗ್‌ನಲ್ಲಿ ಎದುರಾಳಿ ತಂಡಕ್ಕೆ ಮತ್ತೊಮ್ಮೆ ಕಂಟಕವಾಗಲು ಎದುರು ನೋಡುತ್ತಿದ್ದಾರೆ.

ಪೂಜಾ ವಸ್ತ್ರಾಕರ್‌ ಆಲ್ರೌಂಡ್‌ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಇನ್ನು, ಆಡಿರುವ ಎಲ್ಲಾ ಮೂರು ಪಂದ್ಯಗಳಲ್ಲಿ ಸೋಲನುಭವಿಸಿರುವ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ಮೊದಲ ಗೆಲುವಿನ ತವಕದಲ್ಲಿದೆ. ಸೆಮೀಸ್‌ ಆಸೆ ಜೀವಂತಗೊಳಿಸಲು ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.

ಪಂದ್ಯ ಆರಂಭ: ಬೆಳಗ್ಗೆ 6.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ವಿಶ್ವಕಪ್‌: ಇಂಗ್ಲೆಂಡ್‌ಗೆ ಹ್ಯಾಟ್ರಿಕ್‌ ಸೋಲು

ಮೌಂಟ್‌ ಮಾಂಗುನೂಯಿ: ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ಹ್ಯಾಟ್ರಿಕ್‌ ಸೋಲು ಅನುಭವಿಸಿದೆ. ಸೋಮವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್‌ 3 ವಿಕೆಟ್‌ ಸೋಲು ಅನುಭವಿಸಿತು. ದ.ಆಫ್ರಿಕಾಕ್ಕಿದು ಸತತ 3ನೇ ಗೆಲುವು. ತಂಡ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ.

ICC Women's World Cup: ಪಾಕಿಸ್ತಾನ ಬಗ್ಗುಬಡಿದು ಇತಿಹಾಸ ಬರೆದ ಬಾಂಗ್ಲಾದೇಶ..!

4 ಬಾರಿ ಚಾಂಪಿಯನ್‌ ಇಂಗ್ಲೆಂಡ್‌ ಮೊದಲು ಬ್ಯಾಟ್‌ ಮಾಡಿ 9 ವಿಕೆಟ್‌ಗೆ 235 ರನ್‌ ಗಳಿಸಿತು. ದ.ಆಫ್ರಿಕಾ ಪರ ಮಾರಿಯಾನೆ ಕಾಪ್‌ 45 ರನ್‌ಗೆ 5 ವಿಕೆಟ್‌ ಉರುಳಿಸಿದರು. ಬಳಿಕ ಲಾರಾ ವುಲ್ವಾರ್ಟ್‌ (77 ರನ್‌)ರ ಆಕರ್ಷಕ ಅರ್ಧಶತಕದ ನೆರವಿನಿಂದ ದ.ಆಫ್ರಿಕಾ 4 ಎಸೆತ ಬಾಕಿ ಇರುವಂತೆ ಜಯದ ದಡ ಸೇರಿತು. ಇಂಗ್ಲೆಂಡ್‌ ವಿರುದ್ಧ ದ.ಆಫ್ರಿಕಾಕ್ಕಿದು 2000ರ ನಂತರ ವಿಶ್ವಕಪ್‌ನಲ್ಲಿ ಮೊದಲ ಗೆಲುವು ಎನಿಸಿದರೆ, ಇಂಗ್ಲೆಂಡ್‌ ಮೊದಲ ಬಾರಿಗೆ ವಿಶ್ವಕಪ್‌ನಲ್ಲಿ ಸತತ 3 ಸೋಲು ಅನುಭವಿಸಿದೆ.

ವಿಶ್ವಕಪ್‌: ಬಾಂಗ್ಲಾದೇಶಕ್ಕೆ ಚೊಚ್ಚಲ ಜಯದ ಸಂಭ್ರಮ

ಹ್ಯಾಮಿಲ್ಟನ್‌: ಆರಂಭಿಕ ಆಟಗಾರ್ತಿ ಸಿದ್ರಾ ಅಮೀನ್‌(104)ರ ಶತಕದ ಹೊರತಾಗಿಯೂ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ 9 ರನ್‌ಗಳ ಸೋಲು ಅನುಭವಿಸಿತು. ಚೊಚ್ಚಲ ಬಾರಿಗೆ ವಿಶ್ವಕಪ್‌ನಲ್ಲಿ ಆಡುತ್ತಿರುವ ಬಾಂಗ್ಲಾ, ತನ್ನ ಮೊದಲ ಗೆಲುವನ್ನು ದಾಖಲಿಸಿತು.

ಗೆಲುವಿಗೆ 235 ರನ್‌ ಗುರಿ ಬೆನ್ನತ್ತಿದ್ದ ಪಾಕಿಸ್ತಾನ ಒಂದು ಹಂತದಲ್ಲಿ 183 ರನ್‌ಗೆ 2 ವಿಕೆಟ್‌ ಕಳೆದುಕೊಂಡು ಜಯದ ಹಾದಿಯಲ್ಲಿತ್ತು. ಆದರೆ 5 ರನ್‌ ಅಂತರದಲ್ಲಿ 5 ವಿಕೆಟ್‌ ಪತನಗೊಂಡಿದ್ದರಿಂದ 188 ರನ್‌ಗೆ 7 ವಿಕೆಟ್‌ ಕಳೆದುಕೊಂಡಿತು. ಅಂತಿಮವಾಗಿ 9 ವಿಕೆಟ್‌ಗೆ 225 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಟೂರ್ನಿಯಲ್ಲಿ ಪಾಕಿಸ್ತಾನಕ್ಕಿದು ಸತತ 4ನೇ ಸೋಲು. ಅಲ್ಲದೇ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನಕ್ಕಿದು ಸತತ 18ನೇ ಸೋಲು. ಮೊದಲ ಬ್ಯಾಟ್‌ ಮಾಡಿದ ಬಾಂಗ್ಲಾದೇಶ ಫರ್ಗಾನಾ ಹಕ್‌(71) ಅರ್ಧಶತಕದ ನೆರವಿನಿಂದ 7 ವಿಕೆಟ್‌ಗೆ 234 ರನ್‌ ಗಳಿಸಿತ್ತು.