* ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಭರ್ಜರಿ ಪ್ರದರ್ಶನ* ಮೊದಲು ಬ್ಯಾಟ್ ಮಾಡಿ 317 ರನ್‌ ಕಲೆಹಾಕಿರುವ ಮಿಥಾಲಿ ರಾಜ್ ಪಡೆ* ಕಠಿಣ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್‌ಗೆ ಶಾಕ್ ನೀಡಿದ ಸ್ನೆಹ್ ರಾಣಾ, ಮೆಘನಾ ಸಿಂಗ್

ಹ್ಯಾಮಿಲ್ಟನ್‌(ಮಾ.12): ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ ಐಸಿಸಿ ಮಹಿಳಾ ವಿಶ್ವಕಪ್ (ICC Women's World Cup) ಟೂರ್ನಿಯ ಪಂದ್ಯದಲ್ಲಿ ವಿಸ್ಪೋಟಕ ಆರಂಭ ಪಡೆದಿದ್ದ ವೆಸ್ಟ್ ಇಂಡೀಸ್ ರನ್ ವೇಗಕ್ಕೆ ಕಡಿವಾಣ ಹಾಕುವಲ್ಲಿ ಸ್ನೆಹ್ ರಾಣಾ (Sneh Rana) ಹಾಗೂ ಮೆಘನಾ ಸಿಂಗ್ (Meghna Singh) ಯಶಸ್ವಿಯಾಗಿದ್ದಾರೆ. ಭಾರತ ನೀಡಿದ್ದ ಸವಾಲಿನ ಗುರಿ ಬೆನ್ನತ್ತಿರುವ ವೆಸ್ಟ್ ಇಂಡೀಸ್ ತಂಡವು 24 ಓವರ್‌ಗಳ ಅಂತ್ಯದ ವೇಳೆಗೆ 6 ವಿಕೆಟ್ ಕಳೆದುಕೊಂಡು 138 ರನ್‌ ಬಾರಿಸಿದೆ.

ಇಲ್ಲಿನ ಸೆಡನ್ ಪಾರ್ಕ್‌ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ನೀಡಿದ್ದ 318 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡಕ್ಕೆ ಆರಂಭಿಕ ಬ್ಯಾಟರ್‌ಗಳಾದ ಡಿಯೇಂದ್ರಾ ಡೋಟ್ಟಿನ್‌ ಹಾಗೂ ಹೇಲೈ ಮ್ಯಾಥ್ಯೂಸ್ ಸ್ಪೋಟಕ ಆರಂಭ ಒದಗಿಸಿಕೊಟ್ಟರು. ಮೊದಲ ವಿಕೆಟ್‌ಗೆ ಈ ಜೋಡಿ ಕೇವಲ 12.1 ಓವರ್‌ಗಳಲ್ಲಿ 100 ರನ್‌ಗಳ ಜತೆಯಾಟವಾಡುವ ಮೂಲಕ ಭಾರತೀಯ ಬೌಲರ್‌ಗಳನ್ನು ಕಾಡಿದರು. ಅನುಭವಿ ಬೌಲರ್‌ ಜೂಲನ್ ಗೋಸ್ವಾಮಿ, ಪೂಜಾ ವಸ್ತ್ರಾಕರ್ ಆರಂಭದಲ್ಲೇ ಕೊಂಚ ದುಬಾರಿ ಎನಿಸಿದರು. ಆದರೆ ಸ್ನೆಹ್ ರಾಣಾ ಹಾಗೂ ಮೆಘಾನ ಸಿಂಗ್ ಮಿಂಚಿನ ದಾಳಿ ನಡೆಸುವ ಮೂಲಕ ವಿಂಡೀಸ್ ಬ್ಯಾಟರ್‌ಗಳನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು.

ಮೊದಲ ಓವರ್‌ನಲ್ಲೆ ಸ್ನೆಹ್ ರಾಣಾಗೆ ಒಲಿದ ವಿಕೆಟ್‌: ವೆಸ್ಟ್ ಇಂಡೀಸ್ ತಂಡದ ಸ್ಪೋಟಕ ಬ್ಯಾಟರ್‌ ಡಿಯೇಂದ್ರಾ ಡೋಟ್ಟಿನ್‌ ಕೇವಲ 46 ಎಸೆತಗಳನ್ನು ಎದುರಿಸಿ 10 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 62 ರನ್ ಬಾರಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದ್ದರು. ಈ ವೇಳೆ 13ನೇ ಓವರ್‌ನಲ್ಲಿ ದಾಳಿಗಿಳಿದ ಸ್ನೆಹ್ ರಾಣಾ ತಾವೆಸೆದ ಎರಡನೇ ಎಸೆದಲ್ಲೇ ಅರ್ಧಶತಕ ಬಾರಿಸಿದ್ದ ಡಿಯೇಂದ್ರಾ ಡೋಟ್ಟಿನ್‌ ಅವರ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಇದಾದ ಬಳಿಕ ಭಾರತೀಯ ಬೌಲರ್‌ಗಳು ಕಮ್‌ಬ್ಯಾಕ್‌ ಮಾಡುವಲ್ಲಿ ಯಶಸ್ವಿಯಾದರು. 

ICC Women's World Cup: ಮಂಧನಾ, ಕೌರ್ ಶತಕ, ವಿಂಡೀಸ್‌ಗೆ ಗೆಲ್ಲಲು ಕಠಿಣ ಗುರಿ ನೀಡಿದ ಭಾರತ

ದಿಢೀರ್ ಕುಸಿದ ವಿಂಡೀಸ್: ಒಂದು ಹಂತದಲ್ಲಿ 100 ರನ್‌ಗಳ ವರೆಗೆ ಯಾವುದೇ ವಿಕೆಟ್ ಕಳೆದುಕೊಳ್ಳದೇ ಸಾಗಿದ್ದ ವೆಸ್ಟ್ ಇಂಡೀಸ್ ತಂಡವು ತನ್ನ ಖಾತೆಗೆ 27 ರನ್ ಸೇರಿಸುವಷ್ಟರಲ್ಲಿ ಅಗ್ರಕ್ರಮಾಂಕದ ಐವರು ಆಟಗಾರ್ತಿಯರನ್ನು ಕಳೆದುಕೊಂಡು ಸೋಲಿನತ್ತ ಮುಖ ಮಾಡಿದೆ. ಸ್ನೆಹ್ ರಾಣಾ ಹಾಗೂ ಮೆಘನಾ ಸಿಂಗ್ ತಲಾ ಎರಡು ವಿಕೆಟ್ ಪಡೆದರೆ, ಕನ್ನಡತಿ ರಾಜೇಶ್ವರಿ ಗಾಯಕ್ವಾಡ್‌, ಪೂಜಾ ವಸ್ತ್ರಾಕರ್ ಒಂದು ವಿಕೆಟ್ ಕಬಳಿಸುವ ಮೂಲಕ ಕೆರಿಬಿಯನ್ ಪಡೆಗೆ ಶಾಕ್ ನೀಡಿದ್ದಾರೆ.

Scroll to load tweet…

ಸ್ಮೃತಿ ಮಂಧನಾ-ಹರ್ಮನ್‌ಪ್ರೀತ್ ಕೌರ್ ಶತಕ, ಬೃಹತ್ ಮೊತ್ತ ಕಲೆಹಾಕಿದ ಭಾರತ

ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ದ ಭರ್ಜರಿ ಗೆಲುವು ದಾಖಲಿಸಿದ್ದ ಮಿಥಾಲಿ ರಾಜ್ (Mithali Raj) ನೇತೃತ್ವದ ಟೀಂ ಇಂಡಿಯಾ, ಎರಡನೇ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್‌ಗೆ ಶರಣಾಗಿತ್ತು. ಹೀಗಾಗಿ ಅಂಕಪಟ್ಟಿಯಲ್ಲಿ ಅಗ್ರ ನಾಲ್ಕರೊಳಗೆ ಸ್ಥಾನ ಪಡೆಯಲು ಭಾರತ ತಂಡವು ಸ್ಥಾನ ಉಳಿಸಿಕೊಳ್ಳಬೇಕಿದ್ದರೆ ವಿಂಡೀಸ್ ಎದುರು ಭರ್ಜರಿ ಗೆಲುವು ದಾಖಲಿಸುವುದು ಸಾಕಷ್ಟು ಮಹತ್ವದ್ದಾಗಿತ್ತು. ಹೀಗಾಗಿ ವಿಂಡೀಸ್ ಎದುರು ಟಾಸ್ ಗೆದ್ದ ಮಿಥಾಲಿ ರಾಜ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಆರಂಭದಲ್ಲೇ ಯಾಶ್ತಿಕಾ ಭಾಟಿಯಾ ಹಾಗೂ ಮಂಧನಾ ಜೋಡಿ 49 ರನ್‌ಗಳ ಜತೆಯಾಟವಾಡಿತು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಸ್ಮೃತಿ ಮಂಧನಾ(123) ಹಾಗೂ ಹರ್ಮನ್‌ಪ್ರೀತ್ ಕೌರ್(109) ಆಕರ್ಷಕ ಶತಕ ಬಾರಿಸುವ ಮೂಲಕ ಭಾರತ ತಂಡ ಬೃಹತ್ ಮೊತ್ತ ಕಲೆಹಾಕಲು ನೆರವಾದರು. ನಿಗದಿತ 50 ಓವರ್‌ಗಳಲ್ಲಿ ಭಾರತ 8 ವಿಕೆಟ್ ಕಳೆದುಕೊಂಡು 317 ರನ್ ಬಾರಿಸಿದೆ.