* ವೆಸ್ಟ್‌ ಇಂಡೀಸ್ ವಿರುದ್ದ ಆಕರ್ಷಕ ಶತಕ ಚಚ್ಚಿದ ಸ್ಮೃತಿ ಮಂಧನಾ, ಹರ್ಮನ್‌ಪ್ರೀತ್ ಕೌರ್* ವಿಂಡೀಸ್ ಎದುರು 8 ವಿಕೆಟ್ ಕಳೆದುಕೊಂಡು 317 ರನ್‌ ಬಾರಿಸಿದ ಭಾರತ* ಶತಕದ ಜತೆಯಾಟ ನಿಭಾಯಿಸಿದ ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧನಾ

ಹ್ಯಾಮಿಲ್ಟನ್‌(ಮಾ.12): ಆರಂಭಿಕ ಬ್ಯಾಟರ್‌ ಸ್ಮೃತಿ ಮಂಧನಾ ಹಾಗೂ ಹರ್ಮನ್‌ಪ್ರೀತ್ ಕೌರ್ ಬಾರಿಸಿದ ಆಕರ್ಷಕ ಶತಕಗಳ ನೆರವಿನಿಂದ ವೆಸ್ಟ್ ಇಂಡೀಸ್ ವಿರುದ್ದ ಭಾರತ ಮಹಿಳಾ ಕ್ರಿಕೆಟ್‌ ತಂಡವು 8 ವಿಕೆಟ್ ಕಳೆದುಕೊಂಡು 317 ರನ್ ಬಾರಿಸಿದ್ದು, ಬಲಿಷ್ಠ ಕೆರಿಬಿಯನ್ ಪಡೆಗೆ ಕಠಿಣ ಗುರಿ ನೀಡಿದೆ. ಸ್ಮೃತಿ ಮಂಧನಾ ಮನಮೋಹಕ 123 ರನ್ ಬಾರಿಸಿದರೆ, ಹರ್ಮನ್‌ಪ್ರೀತ್ ಕೌರ್ 109 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಇಲ್ಲಿನ ಸೆಡನ್ ಪಾರ್ಕ್ ಮೈದಾನದಲ್ಲಿ ಟಾಸ್ ಗೆದ್ದ ಭಾರತ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನವನ್ನು ತೆಗೆದುಕೊಂಡರು. ಮೊದಲ ವಿಕೆಟ್‌ಗೆ ಸ್ಮೃತಿ ಮಂಧನಾ ಹಾಗೂ ಯಾಶ್ತಿಕಾ ಭಾಟಿಯಾ 49 ರನ್‌ಗಳ ಜತೆಯಾಟ ನಿಭಾಯಿಸಿದರು. ಸ್ಪೋಟಕ ಬ್ಯಾಟಿಂಗ್ ನಡೆಸಿದ ಯಾಶ್ತಿಕ ಭಾಟಿಯಾ ಕೇವಲ 21 ಎಸೆತಗಳನ್ನು ಎದುರಿಸಿ 6 ಬೌಂಡರಿ ಸಹಿತ 31 ರನ್‌ ಬಾರಿಸಿ ಸೇಲ್ಮನ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ನಾಯಕಿ ಮಿಥಾಲಿ ರಾಜ್ ಬ್ಯಾಟಿಂಗ್ ಕೇವಲ 5 ರನ್‌ಗಳಿಗೆ ಸೀಮಿತವಾಯಿತು. ಆಲ್ರೌಂಡರ್ ದೀಪ್ತಿ ಶರ್ಮಾ 21 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು.

ಮಂಧನಾ-ಕೌರ್ ಬ್ಯಾಟಿಂಗ್ ಜುಗಲ್ಬಂದಿ: ಟೀಂ ಇಂಡಿಯಾ 78 ರನ್‌ಗಳಿಗೆ ಮೂರು ವಿಕೆಟ್‌ ಕಳೆದುಕೊಂಡು ಕೆಲಕಾಲ ಆತಂಕಕ್ಕೆ ಒಳಗಾಗಿದ್ದ ಸಂದರ್ಭದಲ್ಲಿ ಸ್ಮೃತಿ ಮಂಧನಾ ಅವರನ್ನು ಕೂಡಿಕೊಂಡ ಹರ್ಮನ್‌ಪ್ರೀತ್‌ ಕೌರ್ ಆಕರ್ಷಕ ಜತೆಯಾಟದ ಮೂಲಕ ತಂಡಕ್ಕೆ ಆಸರೆಯಾದರು. ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಈ ಜೋಡಿ, ಪಿಚ್‌ಗೆ ಹೊಂದಿಕೊಳ್ಳುತ್ತಿದ್ದಂತೆಯೇ ಸ್ಪೋಟಕ ಬ್ಯಾಟಿಂಗ್ ಮೂಲಕ ರನ್‌ ವೇಗಕ್ಕೆ ಚುರುಕು ಮುಟ್ಟಿಸಿದರು. 4ನೇ ವಿಕೆಟ್‌ಗೆ ಈ ಜೋಡಿ 174 ಎಸೆತಗಳನ್ನು ಎದುರಿಸಿ 184 ರನ್‌ಗಳನ್ನು ಕಲೆಹಾಕಿತು. ಮಂಧನಾ 108 ಎಸೆತಗಳನ್ನು ಎದುರಿಸಿ ವೃತ್ತಿಜೀವನದ 5ನೇ ಶತಕ ಬಾರಿಸಿ ಸಂಭ್ರಮಿಸಿದರು. ಈ ಮೊದಲು 2017ರ ಏಕದಿನ ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ದವೇ ಶತಕ ಚಚ್ಚಿದ್ದ ಮಂಧನಾ, ಇದೀಗ ವಿಶ್ವಕಪ್‌ನ ಎರಡನೇ ಶತಕ ಕೂಡಾ ವಿಂಡೀಸ್ ವಿರುದ್ದವೇ ಬಾರಿಸಿದರು. ಅಂತಿಮವಾಗಿ ಸ್ಮೃತಿ ಮಂಧನಾ 119 ಎಸೆತಗಳನ್ನು ಎದುರಿಸಿ 13 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 123 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಇನ್ನು ಸ್ಮೃತಿ ಮಂಧನಾಗೆ ಉತ್ತಮ ಸಾಥ್ ನೀಡಿದ ಹರ್ಮನ್‌ಪ್ರೀತ್ ಕೌರ್‌ ಕೂಡಾ ಸ್ಪೋಟಕ ಬ್ಯಾಟಿಂಗ್ ಮೂಲಕ ಮಿಂಚಿದರು. 100 ಎಸೆತಗಳನ್ನು ಎದುರಿಸಿ ಕೌರ್ ವಿಶ್ವಕಪ್ ಟೂರ್ನಿಯಲ್ಲಿ 4ನೇ ಶತಕ ಬಾರಿಸಿದರು. ಮಹಿಳಾ ವಿಶ್ವಕಪ್‌ ಟೂರ್ನಿಯಲ್ಲಿ 3 ಶತಕ ಬಾರಿಸಿದ ಭಾರತದ ಮೊದಲ ಆಟಗಾರ್ತಿ ಎನ್ನುವ ಕೀರ್ತಿಗೆ ಮಂಧನಾ ಪಾತ್ರರಾದರು. ಈ ಮೊದಲು ಮಿಥಾಲಿ ರಾಜ್ ಹಾಗೂ ಸ್ಮೃತಿ ಮಂಧನಾ ತಲಾ ಎರಡು ಶತಕ ಬಾರಿಸಿದ್ದಾರೆ. ಅಂತಿಮವಾಗಿ ಹರ್ಮನ್‌ಪ್ರೀತ್ ಕೌರ್ 107 ಎಸೆತಗಳನ್ನು ಎದುರಿಸಿ 10 ಬೌಂಡರಿ ಹಾಗೂ 2 ಸಿಕ್ಸರ್‌ ಸಹಿತ 109 ರನ್‌ ಬಾರಿಸಿ ಅಲಿಸಾ ಅಲಿನಾಗೆ ವಿಕೆಟ್ ಒಪ್ಪಿಸಿದರು.

ಕೊನೆಯಲ್ಲಿ ದಿಢೀರ್ ವಿಕೆಟ್ ಪತನ: ಒಂದು ಹಂತದಲ್ಲಿ 290 ರನ್‌ಗಳವರೆಗೆ ಕೇವಲ 4 ವಿಕೆಟ್ ಕಳೆದುಕೊಂಡಿದ್ದ ಟೀಂ ಇಂಡಿಯಾ, ತನ್ನ ಖಾತೆಗೆ ಇನ್ನು 25 ರನ್‌ ಸೇರಿಸುವಷ್ಟರಲ್ಲಿ ಇನ್ನುಳಿದ 4 ವಿಕೆಟ್ ಕಳೆದುಕೊಂಡಿತು. ಮಂಧನಾ, ಪೂಜಾ ವಸ್ತ್ರಾಕರ್, ರಿಚಾ ಘೋಷ್ ಕೊನೆಯ ಮೂರು ಓವರ್‌ಗಳಲ್ಲಿ ವಿಕೆಟ್‌ ಕೈಚೆಲ್ಲಿದರು.