* ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆಯಿಟ್ಟ ಆಸ್ಟ್ರೇಲಿಯಾ* ವೆಸ್ಟ್ ಇಂಡೀಸ್ ಎದುರು ಸೆಮೀಸ್‌ನಲ್ಲಿ ಸುಲಭ ಗೆಲುವು ದಾಖಲಿಸಿದ ಆಸೀಸ್* ಆಕರ್ಷಕ ಶತಕ ಬಾರಿಸಿ ಮಿಂಚಿದ ಅಲಿಸಾ ಹೀಲಿ

ವೆಲ್ಲಿಂಗ್ಟನ್‌(ಮಾ.30): ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ (ICC Women's World Cup) ಲೀಗ್ ಹಂತದಲ್ಲಿ ಅಮೋಘ ಪ್ರದರ್ಶನ ತೋರುವುದರೊಂದಿಗೆ ಅಜೇಯವಾಗಿ ನಾಕೌಟ್ ಹಂತಕ್ಕೆ ಲಗ್ಗೆಯಿಟ್ಟಿದ್ದ ಮೆಗ್ ಲ್ಯಾನಿಂಗ್ ನೇತೃತ್ವದ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡವು (Australian Women's Cricket Team), ಇದೀಗ ಸೆಮಿಫೈನಲ್‌ನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 157 ರನ್‌ಗಳ ಅಂತರದಲ್ಲಿ ಮಣಿಸುವ ಮೂಲಕ ಭರ್ಜರಿಯಾಗಿಯೇ ಫೈನಲ್‌ಗೆ ಲಗ್ಗೆಯಿಟ್ಟಿದೆ.

ಇಲ್ಲಿನ ಬಾಸಿನ್ ರಿಸರ್ವ್‌ ಮೈದಾನದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆಸ್ಟ್ರೇಲಿಯಾ ತಂಡಕ್ಕೆ ಮಹತ್ವದ ಪಂದ್ಯದಲ್ಲಿ ಆರಂಭಿಕ ಬ್ಯಾಟರ್‌ಗಳಾದ ಅಲಿಸಾ ಹೀಲಿ ಹಾಗೂ ರಚೇಲ್‌ ಹೈನ್ಸ್‌ ದ್ವಿಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿ ಕೊಟ್ಟರು. ಈ ಜೋಡಿ ಮೊದಲ ವಿಕೆಟ್‌ಗೆ 32.4 ಓವರ್‌ಗಳಲ್ಲಿ 216 ರನ್‌ಗಳ ಜತೆಯಾಟ ನಿಭಾಯಿಸಿತು. ರಚೇಲ್‌ ಹೈನ್ಸ್‌ 100 ಎಸೆತಗಳನ್ನು ಎದುರಿಸಿ 9 ಬೌಂಡರಿ ಸಹಿತ 85 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು.

ಹೀಲಿ ಮನಮೋಹಕ ಶತಕ: ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟರ್‌ ಅಲಿಸಾ ಹೀಲಿ ಮನಮೋಹಕ ಶತಕ ಸಿಡಿಸುವ ಮೂಲಕ ಆಸ್ಟ್ರೇಲಿಯಾ ತಂಡವು ಬೃಹತ್ ಮೊತ್ತ ಕಲೆಹಾಕಲು ನೆರವಾದರು. ಅಲಿಸಾ ಹೀಲಿ ಒಟ್ಟು 107 ಎಸೆತಗಳನ್ನು ಎದುರಿಸಿ 17 ಬೌಂಡರಿ ಹಾಗೂ ಒಂದು ಸಿಕ್ಸರ್‌ ಸಹಿತ 129 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು. ಇದು ಏಕದಿನ ಕ್ರಿಕೆಟ್‌ನಲ್ಲಿ ಅಲಿಸಾ ಹೀಲಿ ಬಾರಿಸಿದ ನಾಲ್ಕನೇ ಶತಕವಾಗಿದೆ. ವಿಂಡೀಸ್‌ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಹೀಲಿ ಏಕದಿನ ವಿಶ್ವಕಪ್‌ನಲ್ಲಿ ಮೊದಲ ಶತಕ ಸಿಡಿಸಿ ಸಂಬ್ರಮಿಸಿದರು. 

Scroll to load tweet…

ಇನ್ನು ಇದಾದ ಬಳಿಕ ಗಾರ್ಡ್ನರ್‌(12), ಮೆಗ್‌ ಲ್ಯಾನಿಂಗ್(26*) ಹಾಗೂ ಬೆಥ್ ಮೂನಿ(43*) ಸಮಯೋಚಿತ ಬ್ಯಾಟಿಂಗ್ ನಡೆಸುವ ಮೂಲಕ ತಂಡದ ಮೊತ್ತವನ್ನು 305ರ ಗಡಿ ದಾಟಿಸಿದರು. ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದರಿಂದ ಓವರ್‌ಗಳ ಸಂಖ್ಯೆಯನ್ನು 45ಕ್ಕೆ ಮಿತಿಗೊಳಿಸಲಾಗಿತ್ತು. ಅಂತಿಮವಾಗಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು 45 ಓವರ್‌ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 305 ರನ್‌ ಬಾರಿಸಿತ್ತು.

ಐಸಿಸಿ ಟ್ರೋಫಿಗಳಲ್ಲಿ ಭಾರತಕ್ಕೆ ಶತ್ರು ಎದುರಾಳಿಯಲ್ಲ, 'ನೋ ಬಾಲ್'‌..!

ಇನ್ನು ಈ ಕಠಿಣ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಆರಂಭಿಕ ಬ್ಯಾಟರ್‌ ರಶಾದ ವಿಲಿಯಮ್ಸ್ ಖಾತೆ ತೆರೆಯುವ ಮುನ್ನವೇ ವಿಕೆಟ್ ಕೈಚೆಲ್ಲಿ ಪೆವಿಲಿಯನ್ ಸೇರಿದರು. ಇದಾದ ಬಳಿಕ ಎರಡನೇ ವಿಕೆಟ್‌ಗೆ ದಿಯೇಂದ್ರ ಡೊಟ್ಟಿನ್‌ ಹಾಗೂ ಹೀಲೆ ಮ್ಯಾಥ್ಯೂಸ್ ಕೆಲಕಾಲ ಉತ್ತಮ ಜತೆಯಾಟ ನಡೆಸುವ ಮುನ್ಸೂಚನೆ ನೀಡಿದರು. ಆದರೆ ದೊಟ್ಟಿನ್ 34 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಮೂರನೇ ವಿಕೆಟ್‌ಗೆ ಹೀಲೆ ಮ್ಯಾಥ್ಯೂಸ್ ಹಾಗೂ ನಾಯಕಿ ಸ್ಟಿಫನೆ ಟೇಲರ್‌ ಆಸೀಸ್ ಬೌಲರ್‌ಗಳೆದುರು ದಿಟ್ಟ ಪ್ರತಿರೋಧ ತೋರಿದರಾರೂ, ಅಪಾಯಕಾರಿಯಾಗುತ್ತಿದ್ದ ಈ ಜೋಡಿಯನ್ನು ಬೇರ್ಪಡಿಸಲು ಜೊನಾಸನ್ ಯಶಸ್ವಿಯಾದರು. ಈ ಜೋಡಿ ಬೇರ್ಪಡುತ್ತಿದ್ದಂತೆಯೇ ವೆಸ್ಟ್ ಇಂಡೀಸ್ ತಂಡವು ನಾಟಕೀಯ ಕುಸಿತವನ್ನು ಕಂಡಿತು.

Scroll to load tweet…

ಕೇವಲ 59 ರನ್‌ಗಳ ಅಂತರದಲ್ಲಿ 5 ವಿಕೆಟ್ ಪತನ: 91 ರನ್‌ಗಳವರೆಗೆ ಕೇವಲ 2 ವಿಕೆಟ್ ಕಳೆದುಕೊಂಡಿದ್ದ ವೆಸ್ಟ್ ಇಂಡೀಸ್ ತಂಡವು ಹೀಲೆ ಮ್ಯಾಥ್ಯೂಸ್ ವಿಕೆಟ್ ಕಳೆದುಕೊಳ್ಳುತ್ತಿದ್ದಂತೆಯೇ ನಾಟಕೀಯ ಕುಸಿತವನ್ನು ಕಂಡಿತು. ವಿಂಡೀಸ್ ತಂಡವು 148 ರನ್‌ ಗಳಿಸುವಷ್ಟರಲ್ಲಿ ಸರ್ವಪತನ ಕಂಡಿತು. ವೆಸ್ಟ್ ಇಂಡೀಸ್ ತಂಡದ ನಾಯಕಿ ಸ್ಟಿಫನೆ ಟೇಲರ್‌ 48 ರನ್ ಬಾರಿಸಿದ್ದೇ ವೆಸ್ಟ್ ಇಂಡೀಸ್ ಪರ ದಾಖಲಾದ ಗರಿಷ್ಠ ವೈಯುಕ್ತಿಕ ಸ್ಕೋರ್ ಎನಿಸಿತು.