* ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಸೆಮೀಸ್‌ನಲ್ಲಿಂದು ಭಾರತ-ಆಸ್ಟ್ರೇಲಿಯಾ ಫೈಟ್* ಸತತ ಎರಡನೇ ಬಾರಿಗೆ ಫೈನಲ್‌ಗೇರುವ ವಿಶ್ವಾಸದಲ್ಲಿ ಭಾರತ ಮಹಿಳಾ ತಂಡ* ಒಂದೂ ಸೋಲು ಕಾಣದೇ ಸೆಮಿಫೈನಲ್ ಪ್ರವೇಶಿಸಿರುವ ಆಸ್ಟ್ರೇಲಿಯಾ
ಕೇಪ್ಟೌನ್(ಫೆ.23): ಐಸಿಸಿ ಮಹಿಳಾ ಟಿ20 ವಿಶ್ವಕಪ್ನಲ್ಲಿ ಸತತ 2ನೇ ಬಾರಿ ಫೈನಲ್ ಪ್ರವೇಶಿಸುವ ನಿರೀಕ್ಷೆಯಲ್ಲಿರುವ ಭಾರತ ಗುರುವಾರ ಸೆಮಿಫೈನಲ್ನಲ್ಲಿ 5 ಬಾರಿ ಚಾಂಪಿಯನ್ ಆಸ್ಪ್ರೇಲಿಯಾ ವಿರುದ್ಧ ಸೆಣಸಲಿದೆ. ಕಳೆದ 5 ವರ್ಷಗಳಿಂದ ಅತ್ಯುತ್ತಮ ಪ್ರದರ್ಶನ ತೋರುತ್ತಿದ್ದರೂ ಭಾರತಕ್ಕೆ ಈವರೆಗೆ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಈ ಬಾರಿ ಪ್ರಶಸ್ತಿ ಬರವನ್ನು ನೀಗಿಸಲು ಎದುರು ನೋಡುತ್ತಿರುವ ಭಾರತ, ಅಂತಿಮ 4ರ ಘಟ್ಟದಲ್ಲಿ ಬಲಿಷ್ಠ ಆಸೀಸ್ಗೆ ಸೋಲುಣಿಸಬೇಕಿದೆ.
‘ಬಿ’ ಗುಂಪಿನಲ್ಲಿದ್ದ ಭಾರತ 3 ಗೆಲುವು, 1 ಸೋಲಿನೊಂದಿಗೆ 6 ಅಂಕ ಸಂಪಾದಿಸಿ 2ನೇ ಸ್ಥಾನ ಪಡೆದಿತ್ತು. ಅತ್ತ ಆಸೀಸ್ ಆಡಿದ ಎಲ್ಲಾ 4 ಪಂದ್ಯಗಳಲ್ಲಿ ಗೆದ್ದು ‘ಎ’ ಗುಂಪಿನಿಂದ ಅಜೇಯವಾಗಿಯೇ ಸೆಮೀಸ್ಗೇರಿದೆ. ಸತತ 3ನೇ ಬಾರಿ ಸೆಮೀಸ್ ತಲುಪಿರುವ ಭಾರತ ಕಳೆದ ಅವೃತ್ತಿ ಫೈನಲ್ನಲ್ಲಿ ಆಸೀಸ್ ವಿರುದ್ಧವೇ ಸೋಲುಂಡಿತ್ತು. ಆ ಸೋಲಿಗೆ ಸೇಡು ತೀರಿಸಿಕೊಳ್ಳಲು ಭಾರತ ಕಾಯುತ್ತಿದ್ದರೆ, ಆಸೀಸ್ ಸತತ 7ನೇ ಬಾರಿ ಪ್ರಶಸ್ತಿ ಸುತ್ತಿಗೇರುವ ತವಕದಲ್ಲಿದೆ.
ಭಾರತಕ್ಕೆ ಟೂರ್ನಿಯಲ್ಲಿ ಸ್ಮೃತಿ ಮಂಧನಾ, ರಿಚಾ ಘೋಷ್, ಜೆಮಿಮಾ ಬಿಟ್ಟರೆ ಉಳಿದವರಿಂದ ದೊಡ್ಡ ಕೊಡುಗೆ ಲಭಿಸಿಲ್ಲ. ನಾಯಕಿ ಹರ್ಮನ್‌ಪ್ರೀತ್, ಶಫಾಲಿ ವರ್ಮಾ ಇನ್ನಷ್ಟೇ ಅಬ್ಬರಿಸಬೇಕಿದೆ. ದೀಪ್ತಿ ಶರ್ಮಾ ಆಲ್ರೌಂಡ್ ಹೊಣೆಯನ್ನು ಸೂಕ್ತವಾಗಿ ನಿಭಾಯಿಸುತ್ತಿದ್ದರೂ ಪೂಜಾ ವಸ್ತ್ರಾಕರ್ ಅವರಿಂದ ಸೂಕ್ತ ಬೆಂಬಲ ಸಿಗುತ್ತಿಲ್ಲ. ಬೌಲಿಂಗ್ ವಿಭಾಗದಲ್ಲಿ ರೇಣುಕಾರನ್ನು ಭಾರತ ಹೆಚ್ಚಾಗಿ ನೆಚ್ಚಿಕೊಂಡಿದೆ. ಆದರೆ ಯಾವುದೇ ಕ್ಷಣದಲ್ಲೂ ಸ್ಫೋಟಿಸಬಲ್ಲ ಸಾಮರ್ಥ್ಯವಿರುವ ಆಸೀಸ್ ಬ್ಯಾಟರ್ಗಳನ್ನು ಕಟ್ಟಿಹಾಕಲು ಶಿಖಾ ಪಾಂಡೆ, ರಾಧಾ ಯಾದವ್, ರಾಜೇಶ್ವರಿ ಗಾಯಕ್ವಾಡ್ಗೆ ಸಾಧ್ಯವಾಗದಿದ್ದರೆ ಭಾರತಕ್ಕೆ ಗೆಲುವು ಕೈತಪ್ಪಬಹುದು. ಅತ್ತ ಆಸೀಸ್ ಎಲ್ಲಾ ವಿಭಾಗದಲ್ಲೂ ಬಲಿಷ್ಠವಾಗಿದ್ದು, ಪಂದ್ಯದಲ್ಲಿ ಗೆಲ್ಲುವ ಫೇವರಿಟ್ ಎನಿಸಿದೆ.
IPL ಟೂರ್ನಿಗೂ ಮುನ್ನ ಧೋನಿ ಪಡೆಗೆ ಗುಡ್ ನ್ಯೂಸ್, 14 ಕೋಟಿ ರುಪಾಯಿ ಸ್ಟಾರ್ ಆಟಗಾರ ಕಣಕ್ಕಿಳಿಯಲು ರೆಡಿ..!
ಡಾಟ್ಬಾಲ್ಗಳೇ ಭಾರತದ ಸಮಸ್ಯೆ!
ಟೂರ್ನಿಯುದ್ದಕ್ಕೂ ಭಾರತಕ್ಕೆ ಹೆಚ್ಚಾಗಿ ಸಮಸ್ಯೆಯಾಗಿದ್ದು ಡಾಟ್‌ಬಾಲ್‌ಗಳು. ಆಡಿರುವ 4 ಪಂದ್ಯಗಳಲ್ಲಿ ಭಾರತ ಒಟ್ಟು 77.1 ಓವರಲ್ಲಿ ಬ್ಯಾಟ್ ಮಾಡಿದ್ದು, ಈ ಪೈಕಿ 179 ಬಾಲ್‌ಗಳು ಅಂದರೆ ಸುಮಾರು 30 ಓವರ್‌ಗಳಲ್ಲಿ ಒಂದೂ ರನ್ ಗಳಿಸಿಲ್ಲ. ಡಾಟ್‌ಬಾಲ್‌ಗಳು ಹೆಚ್ಚುತ್ತಿರುವುದು ತಂಡಕ್ಕೆ ತಲೆನೋವು ತಂದಿದೆ ಎಂದು ಸ್ವತಃ ನಾಯಕಿ ಹರ್ಮನ್‌ಪ್ರೀತ್ ಐರ್ಲೆಂಡ್ ವಿರುದ್ಧದ ಪಂದ್ಯದ ಬಳಿಕ ಒಪ್ಪಿಕೊಂಡಿದ್ದರು.
ಆಸೀಸ್ ವಿರುದ್ಧ ಕಳಪೆ ದಾಖಲೆ
ಆಸ್ಪ್ರೇಲಿಯಾ ವಿರುದ್ಧ ಭಾರತ ಟಿ20ಯಲ್ಲಿ ತೀರಾ ಕಳಪೆ ದಾಖಲೆ ಹೊಂದಿದೆ. ಈವರೆಗೆ 30 ಪಂದ್ಯಗಳಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದು, ಕೇವಲ 7ರಲ್ಲಿ ಭಾರತ ಗೆಲುವು ಸಾಧಿಸಿದೆ. 22ರಲ್ಲಿ ಸೋಲುಂಡಿದ್ದು, ಒಂದು ಪಂದ್ಯ ಫಲಿತಾಂಶವಿಲ್ಲದೇ ರದ್ದುಗೊಂಡಿದೆ. 2021ರ ಮಾರ್ಚ್ ಬಳಿಕ ಮೂರೂ ಮಾದರಿ ಸೇರಿ ಆಸ್ಪ್ರೇಲಿಯಾ ಆಡಿರುವ ಒಟ್ಟು ಪಂದ್ಯಗಳಲ್ಲಿ ಕೇವಲ 2ರಲ್ಲಿ ಸೋತಿದೆ. ಆ ಎರಡೂ ಸೋಲು ಭಾರತ ವಿರುದ್ಧವೇ ದಾಖಲಾಗಿರುವುದು ಗಮನಾರ್ಹ.
ಪಂದ್ಯ ಆರಂಭ: ಸಂಜೆ 6.30ಕ್ಕೆ
ನೇರಪ್ರಸಾರ: ಸ್ಟಾರ್ಸ್ಪೋರ್ಟ್ಸ್
