ಕಿಂಬರ್ಲಿ(ಜ.18): ಐಸಿಸಿ ಅಂಡರ್‌ 19 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಗೆ ಶುಕ್ರವಾರ ಚಾಲನೆ ದೊರೆಯಿತು. ಹಾಲಿ ಚಾಂಪಿಯನ್‌ ಭಾರತ ತಂಡ, ಭಾನುವಾರ ತನ್ನ ಮೊದಲ ಪಂದ್ಯದಲ್ಲಿ ಶ್ರೀಲಂಕಾ ಸವಾಲನ್ನು ಎದುರಿಸಲಿದೆ. ವಿಶ್ವಕಪ್‌ ಆರಂಭಕ್ಕೂ ಮುನ್ನ ನಡೆದ ಪೂರ್ವಭಾವಿ ಅಭ್ಯಾಸ ಪಂದ್ಯದಲ್ಲಿ ಅದ್ಭುತ ಪ್ರದರ್ಶನದಿಂದ ಗಮನಸೆಳೆದಿರುವ ಪ್ರಿಯಂ ಗರ್ಗ್‌ ಪಡೆ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಶುಭಾರಂಭದ ವಿಶ್ವಾಸದಲ್ಲಿ ಕಣಕ್ಕಿಳಿಯುತ್ತಿದೆ. 

ಇದನ್ನೂ ಓದಿ: ಅಂಡರ್ 19 ವಿಶ್ವಕಪ್: ಭಾರತ ತಂಡದಲ್ಲಿ ಇಬ್ಬರು ಕನ್ನಡಿಗರಿಗೆ ಸ್ಥಾನ!

ಇನ್ನು ಶ್ರೀಲಂಕಾ ಕೂಡ ಭಾರತ ತಂಡಕ್ಕೆ ಪ್ರಬಲ ಪೈಪೋಟಿ ನೀಡುವ ಉತ್ಸಾಹದಲ್ಲಿದೆ. ಬ್ಲೂಮ್‌ಪೋನ್ಟೆನ್‌ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.

ಆಫ್ರಿಕಾ ವಿರುದ್ಧ ಆಫ್ಘನ್‌ಗೆ ಜಯ:
ಉದ್ಘಾಟನಾ ಪಂದ್ಯದಲ್ಲಿ ಅಚ್ಚರಿ ಫಲಿತಾಂಶ ಹೊರಬಿದ್ದಿದೆ. 2014ರ ಚಾಂಪಿಯನ್‌ ದಕ್ಷಿಣ ಆಫ್ರಿಕಾ ವಿರುದ್ಧ ಆಷ್ಘಾನಿಸ್ತಾನ ತಂಡ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಮೊದಲು ಬ್ಯಾಟ್‌ ಮಾಡಿದ ದ.ಆಫ್ರಿಕಾ, ಆಫ್ಘನ್‌ನ ಶಫಿಕುಲ್ಲಾ ಗಫಾರಿ (6-15) ದಾಳಿಗೆ ತತ್ತರಿಸಿ 29.1 ಓವರಲ್ಲಿ ಕೇವಲ 129 ರನ್‌ಗಳಿಗೆ ಆಲೌಟ್‌ ಆಯಿತು. 130 ರನ್‌ಗಳ ಗುರಿ ಬೆನ್ನತ್ತಿದ ಆಷ್ಘಾನಿಸ್ತಾನ ಇಮ್ರಾನ್‌ (57), ಇಬ್ರಾಹಿಂ ಜದ್ರಾನ್‌ (52) ಅರ್ಧಶತಕಗಳ ನೆರವಿನಿಂದ 25 ಓವರಲ್ಲಿ 3 ವಿಕೆಟ್‌ಗೆ 130 ರನ್‌ಗಳಿಸಿ ಜಯದ ನಗೆ ಬೀರಿತು.

ಸ್ಕೋರ್‌: ದಕ್ಷಿಣ ಆಫ್ರಿಕಾ 129/10, ಆಷ್ಘಾನಿಸ್ತಾನ 130/3