16ನೇ ಆವೃತ್ತಿಯ ಐಸಿಸಿ ಅಂಡರ್‌-19 ವಿಶ್ವಕಪ್‌ ಜಿಂಬಾಬ್ವೆ ಹಾಗೂ ನಮೀಬಿಯಾದಲ್ಲಿ ಆರಂಭಗೊಳ್ಳಲಿದೆ. ಈ ಬಾರಿ ಸೂಪರ್‌-6 ಹಂತದ ಹೊಸ ಮಾದರಿಯನ್ನು ಪರಿಚಯಿಸಲಾಗಿದ್ದು, 5 ಬಾರಿಯ ಚಾಂಪಿಯನ್ ಭಾರತ ತಂಡವು ತನ್ನ ಮೊದಲ ಪಂದ್ಯದಲ್ಲಿ ಅಮೆರಿಕವನ್ನು ಎದುರಿಸಲಿದೆ.  

ಬುಲಾವಾಯೋ: 16ನೇ ಆವೃತ್ತಿಯ ಐಸಿಸಿ ಅಂಡರ್‌-19 ವಿಶ್ವಕಪ್‌ ಗುರುವಾರದಿಂದ ಆರಂಭಗೊಳ್ಳಲಿದೆ. ಕ್ರಿಕೆಟ್‌ ಜಗತ್ತಿನ ಬಲಿಷ್ಠ ರಾಷ್ಟ್ರಗಳ ಭವಿಷ್ಯದ ಆಟಗಾರರು ಹಾಗೂ ಸಣ್ಣಪುಟ್ಟ ಕ್ರಿಕೆಟಿಂಗ್‌ ರಾಷ್ಟ್ರಗಳ ಪ್ರತಿಭೆಗಳ ನಡುವಿನ ಪೈಪೋಟಿ, ಪ್ರೇಕ್ಷಕರಿಗೆ ಸದಾ ರೋಚಕ ಅನುಭವವನ್ನು ನೀಡಲಿದೆ.

ಈ ಬಾರಿ ಟೂರ್ನಿಯ ಆತಿಥ್ಯವನ್ನು ಜಿಂಬಾಬ್ವೆ ಹಾಗೂ ನಮೀಬಿಯಾ ವಹಿಸಿಕೊಂಡಿವೆ. ಪ್ರತಿ ಸಲದಂತೆ ಈ ಸಲವೂ 50 ಓವರ್‌ ಮಾದರಿಯಲ್ಲಿ ಟೂರ್ನಿ ನಡೆಯಲಿದೆ. 

ಟೂರ್ನಿಯ ಮಾದರಿ ಹೇಗೆ?

16 ತಂಡಗಳು ಪಾಲ್ಗೊಳ್ಳಲಿದ್ದು, ತಲಾ 4 ತಂಡಗಳನ್ನು 4 ಗುಂಪುಗಳಾಗಿ ವಿಂಗಡಿಸಲಾಗಿದೆ. ಗುಂಪು ಹಂತದಲ್ಲಿ ಪ್ರತಿ ತಂಡ ಉಳಿದ 3 ತಂಡಗಳ ವಿರುದ್ಧ ಒಮ್ಮೆ ಸೆಣಸಲಿದೆ. ಗುಂಪಿನಲ್ಲಿ ಅಗ್ರ-3 ತಂಡಗಳು ಸೂಪರ್‌-6 ಹಂತಕ್ಕೆ ಪ್ರವೇಶಿಸಲಿವೆ. ‘ಎ’ ಹಾಗೂ ‘ಡಿ’ ಗುಂಪಿನ ತಂಡಗಳನ್ನು ಒಂದು ಗುಂಪಿನಲ್ಲಿ, ‘ಬಿ’ ಹಾಗೂ ‘ಸಿ’ ಗುಂಪಿನ ತಂಡಗಳನ್ನು ಮತ್ತೊಂದು ಗುಂಪಿನಲ್ಲಿ ಸೇರಿಸಲಾಗುತ್ತದೆ.

ಸೂಪರ್‌-6 ಹಂತದಲ್ಲಿ, ಪ್ರತಿ ತಂಡವೂ ಗುಂಪು ಹಂತದಲ್ಲಿ ತಾನು ಗಳಿಸಿದ ಅಂಕ, ಗೆದ್ದ ಪಂದ್ಯಗಳು, ಸೂಪರ್‌-6ನಲ್ಲಿರುವ ತನ್ನ ಎದುರಾಳಿ ತಂಡದ ವಿರುದ್ಧದ ನೆಟ್‌ ರನ್‌ರೇಟ್‌ರನ್ನು ಮುಂದುವರಿಸಲಿದೆ. ಸೂಪರ್‌-6ನಲ್ಲಿ ಪ್ರತಿ ತಂಡ 2 ಪಂದ್ಯಗಳನ್ನು ಆಡಲಿದೆ.

‘ಎ’ ಗುಂಪಿನಲ್ಲಿ ಮೊದಲ ಸ್ಥಾನ ಪಡೆದ ತಂಡ ಅಂದರೆ ‘ಎ’-1, ‘ಡಿ’-1 ವಿರುದ್ಧ ಆಡುವುದಿಲ್ಲ. ಬದಲಿಗೆ ‘ಡಿ’ 2 ಹಾಗೂ ‘ಡಿ’-3 ವಿರುದ್ಧ ಮಾತ್ರ ಆಡಲಿದೆ. ಅದೇ ರೀತಿ ‘ಬಿ’ 1 ತಂಡ, ‘ಸಿ’-2, ‘ಸಿ’-3 ವಿರುದ್ಧ ಮಾತ್ರ ಆಡಲಿದೆ.

ಸೂಪರ್‌-6ನಲ್ಲಿ ಎರಡೂ ಗುಂಪುಗಳಲ್ಲಿ ಅಗ್ರ-2 ಸ್ಥಾನಗಳನ್ನು ಪಡೆಯುವ ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸಲಿವೆ. ಫೆ.3 ಹಾಗೂ 4ರಂದು ಸೆಮಿಫೈನಲ್‌ಗಳು ನಡೆಯಲಿದ್ದು, ಫೆ.6ಕ್ಕೆ ಫೈನಲ್‌ ನಿಗದಿಯಾಗಿದೆ.

--

ವೈಭವ್‌ ಮೇಲೆ ಇಡೀ ಕ್ರಿಕೆಟ್‌ ಜಗತ್ತಿನ ಕಣ್ಣು!

5 ಬಾರಿ ಚಾಂಪಿಯನ್‌ ಭಾರತ ತಂಡ ‘ಬಿ’ ಗುಂಪಿನಲ್ಲಿ ಅಮೆರಿಕ, ನ್ಯೂಜಿಲೆಂಡ್‌ ಹಾಗೂ ಬಾಂಗ್ಲಾದೇಶ ಜೊತೆ ಸ್ಥಾನ ಪಡೆದಿದೆ. ಗುರುವಾರ ತನ್ನ ಮೊದಲ ಪಂದ್ಯವನ್ನು ಅಮೆರಿಕ ವಿರುದ್ಧ ಆಡಲಿದೆ. ಜ.17ರಂದು ಬಾಂಗ್ಲಾ, ಜ.24ಕ್ಕೆ ನ್ಯೂಜಿಲೆಂಡ್‌ ವಿರುದ್ಧ ಸೆಣಸಲಿದೆ. ಭಾರತ ತಂಡವನ್ನು ಮುಂಬೈನ ಆಯುಷ್‌ ಮ್ಹಾತ್ರೆ ಮುನ್ನಡೆಸಲಿದ್ದು, 14 ವರ್ಷದ ವೈಭವ್‌ ಸೂರ್ಯವಂಶಿ ಮೇಲೆ ಇಡೀ ಕ್ರಿಕೆಟ್‌ ಜಗತ್ತಿನ ಕಣ್ಣಿದೆ. ವೈಭವ್‌ರ ಪ್ರದರ್ಶನದ ಮೇಲೆ ಟೂರ್ನಿಯಲ್ಲಿ ಭಾರತದ ಫಲಿತಾಂಶ ನಿರ್ಧಾರವಾದರೂ ಅಚ್ಚರಿಯಿಲ್ಲ.

ಭಾರತ vs ಅಮೆರಿಕ ಮ್ಯಾಚ್ ಡೀಟೈಲ್ಸ್

ಪಂದ್ಯ ಆರಂಭ: ಮಧ್ಯಾಹ್ನ 1ಕ್ಕೆ, 

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌/ಜಿಯೋ ಹಾಟ್‌ಸ್ಟಾರ್‌