ನವದೆಹಲಿ(ಮೇ.22): ಇದೇ ವರ್ಷ ಅಕ್ಟೋಬರ್‌-ನವೆಂಬರ್‌ನಲ್ಲಿ ನಡೆಯಬೇಕಿರುವ ಟಿ20 ವಿಶ್ವಕಪ್‌ ಟೂರ್ನಿಯನ್ನು ಎಲ್ಲಿ ನಡೆಸಬೇಕು ಎನ್ನುವುದುನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಜೂ.1ರಂದು ನಿರ್ಧರಿಸುವ ಸಾಧ್ಯತೆ ಇದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. 

ನಿಗದಿತ ವೇಳಾಪಟ್ಟಿಯ ಪ್ರಕಾರ ಟೂರ್ನಿ ಭಾರತದಲ್ಲಿ ನಡೆಯಬೇಕಿದೆ. ಆದರೆ ದೇಶದಲ್ಲಿ ಕೊರೋನಾ ಸೋಂಕು ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಅಲ್ಲದೇ ಐಪಿಎಲ್‌ ಬಯೋ ಬಬಲ್‌ನೊಳಗೆ ಸೋಂಕು ಕಾಣಿಸಿಕೊಂಡ ಕಾರಣ, ಐಸಿಸಿ ಚುಟುಕು ವಿಶ್ವಕಪ್ ಟೂರ್ನಿಯನ್ನು ಭಾರತದಾಚೆ ನಡೆಸುವ ಬಗ್ಗೆ ಚಿಂತನೆ ನಡೆಸುತ್ತಿದೆ.  ಬಿಸಿಸಿಐಗೆ ಭಾರತದಲ್ಲೇ ಟೂರ್ನಿ ನಡೆಸಬೇಕು ಎನ್ನುವ ಗುರಿ ಇದೆ. ಒಂದೊಮ್ಮೆ ಭಾರತದಲ್ಲಿ ಟೂರ್ನಿಯನ್ನು ನಡೆಸಲು ಸಾಧ್ಯವಾಗದೆ ಇದ್ದರೆ, ಆತಿಥ್ಯ ಹಕ್ಕನ್ನು ತನ್ನಲ್ಲೇ ಉಳಿಸಿಕೊಂಡು ಟೂರ್ನಿಯನ್ನು ಯುಎಇನಲ್ಲಿ ನಡೆಸುವ ಆಯ್ಕೆಯನ್ನೂ ಬಿಸಿಸಿಐ ಇಟ್ಟುಕೊಂಡಿದೆ.

ಮೇ 29ಕ್ಕೆ ಐಪಿಎಲ್‌, ವಿಶ್ವಕಪ್‌ ಭವಿಷ್ಯ ನಿರ್ಧಾರ?

ಐಸಿಸಿ ಜೂನ್‌ 01ರಂದು ಟಿ20 ವಿಶ್ವಕಪ್‌ ಟೂರ್ನಿಯ ಕುರಿತಂತೆ ತೀರ್ಮಾನ ತೆಗೆದುಕೊಳ್ಳುವ ಮುನ್ನವೇ ಬಿಸಿಸಿಐ ಮೇ.29ರಂದು ಸಾಮಾನ್ಯ ಸಭೆಯನ್ನು ಕರೆದಿದೆ. ಈ ಸಭೆಯಲ್ಲಿ ಐಸಿಸಿ ಟಿ20 ವಿಶ್ವಕಪ್ ಹಾಗೂ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿರುವ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಆಯೋಜನೆಯ ಕುರಿತಂತೆ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಭಾರತದಲ್ಲಿ ಆಯೋಜನೆಗೊಂಡಿದ್ದ 14ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಕೊರೋನಾ ಹೆಮ್ಮಾರಿ ತನ್ನ ವಕ್ರದೃಷ್ಟಿಯನ್ನು ಬೀರಿತ್ತು. ಮೊದಲ 29 ಐಪಿಎಲ್ ಪಂದ್ಯಗಳು ಸರಾಗವಾಗಿ ನಡೆದಿದ್ದವು. ಆ ಬಳಿಕ ಬಯೋ ಬಬಲ್‌ನೊಳಗೆ ಕೋವಿಡ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಮೇ.4ರಂದು ಬಿಸಿಸಿಐ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona