ದುಬೈ(ಆ.18): ಪಾಕಿಸ್ತಾನದ ನಂಬಿಕಸ್ಥ ಬ್ಯಾಟ್ಸ್‌ಮನ್ ಬಾಬರ್ ಅಜಂ ಐಸಿಸಿ ನೂತನವಾಗಿ ಬಿಡುಗಡೆ ಮಾಡಿದ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್‌ನಲ್ಲಿ 5ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಇನ್ನು ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಮತ್ತೊಂದು ಸ್ಥಾನ ಕುಸಿದು 9ನೇ ಸ್ಥಾನ ತಲುಪಿದ್ದಾರೆ.

ಹೌದು, ಇಂಗ್ಲೆಂಡ್-ಪಾಕಿಸ್ತಾನ ನಡುವಿನ ಎರಡನೇ ಟೆಸ್ಟ್ ಮುಕ್ತಾಯವಾದ ಬೆನ್ನಲ್ಲೇ ಐಸಿಸಿ ಮತ್ತೊಮ್ಮೆ ಟೆಸ್ಟ್ ರ‍್ಯಾಂಕಿಂಗ್ ಪ್ರಕಟಿಸಿದೆ. ಮ್ಯಾಂಚೆಸ್ಟರ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ಅಜಂ, ಸೌಥಾಂಪ್ಟನ್ ಟೆಸ್ಟ್‌ನಲ್ಲಿ 47 ರನ್‌ ಗಳಿಸಿದ್ದರು. ಇದರೊಂದಿಗೆ ಐಸಿಸಿ ಬ್ಯಾಟ್ಸ್‌ಮನ್‌ಗಳ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ 5ನೇ ಸ್ಥಾನಕ್ಕೇರಿದ್ದಾರೆ. ಇದರ ಜತೆಗೆ ಐಸಿಸಿ ಮೂರು ಮಾದರಿಯಲ್ಲಿ ಟಾಪ್ 5 ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಆಟಗಾರ ಎನ್ನುವ ಗೌರವಕ್ಕೂ ಬಾಬರ್ ಅಜಂ ಪಾತ್ರರಾಗಿದ್ದಾರೆ. ಸದ್ಯ ಬಾಬರ್ ಅಜಂ ಟಿ20 ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿದ್ದರೆ, ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಬಳಿಕ ಮೂರನೇ ಸ್ಥಾನದಲ್ಲಿದ್ದಾರೆ.

ಖೇಲ್‌ ರತ್ನ ಪ್ರಶಸ್ತಿಗೆ ರೋಹಿತ್ ಶರ್ಮಾ ಸೇರಿದಂತೆ ನಾಲ್ವರ ಹೆಸರು ಶಿಫಾರಸು

ಇನ್ನು ಬೌಲರ್‌ಗಳ ವಿಭಾಗವನ್ನು ಗಮನಿಸುವುದಾದರೆ ಇಂಗ್ಲೆಂಡ್ ಅನುಭವಿ ವೇಗಿ ಸ್ಟುವರ್ಟ್ ಬ್ರಾಡ್ ಮತ್ತೊಂದು ಸ್ಥಾನ ಮೇಲೇರಿ ಎರಡನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಇನ್ನು ಎಂಟನೇ ಸ್ಥಾನದಲ್ಲಿದ್ದ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಒಂದು ಸ್ಥಾನ ಕುಸಿದು 9ನೇ ಸ್ಥಾನಕ್ಕೆ ಜಾರಿದ್ದಾರೆ.

ಐಸಿಸಿ ಟಾಪ್ 10 ರ‍್ಯಾಂಕಿಂಗ್ ಬ್ಯಾಟ್ಸ್‌ಮನ್‌ಗಳಿವರು:

1. ಸ್ಟೀವ್ ಸ್ಮಿತ್
2. ವಿರಾಟ್ ಕೊಹ್ಲಿ
3. ಮಾರ್ನಸ್ ಲಬುಶೇನ್
4. ಕೇನ್ ವಿಲಿಯಮ್ಸನ್
5. ಬಾಬರ್ ಅಜಂ
6. ಡೇವಿಡ್ ವಾರ್ನರ್
7. ಬೆನ್ ಸ್ಟೋಕ್ಸ್
8. ಚೇತೇಶ್ವರ್ ಪೂಜಾರ
9. ಜೋ ರೂಟ್
10. ಅಜಿಂಕ್ಯ ರಹಾನೆ

ಐಸಿಸಿ ಟಾಪ್ 10 ರ‍್ಯಾಂಕಿಂಗ್ ಬೌಲರ್‌ಗಳಿವರು
1. ಪ್ಯಾಟ್ ಕಮಿನ್ಸ್
2. ಸ್ಟುವರ್ಟ್ ಬ್ರಾಡ್
3. ನೀಲ್ ವ್ಯಾಗ್ನರ್
4. ಟಿಮ್ ಸೌಥಿ
5. ಜೇಸನ್ ಹೋಲ್ಡರ್
6. ಕಗಿಸೋ ರಬಾಡ
7. ಮಿಚೆಲ್ ಸ್ಟಾರ್ಕ್
8. ಮೊಹಮ್ಮದ್ ಅಬ್ಬಾಸ್
9. ಜಸ್ಪ್ರೀತ್ ಬುಮ್ರಾ
10. ಟ್ರೆಂಟ್ ಬೌಲ್ಟ್