ಐಸಿಸಿ ಟಿ20 ರ‍್ಯಾಂಕಿಂಗ್‌ನಲ್ಲಿ ವೃತ್ತಿಜೀವನದಲ್ಲಿನ ಗರಿಷ್ಠ ರೇಟಿಂಗ್ ಅಂಕ ಸಂಪಾದಿಸಿದ ಸೂರ್ಯಕುಮಾರ್ ಯಾದವ್ಅಗ್ರಸ್ಥಾನದಲ್ಲೇ ಮುಂದುವರೆದ ಮುಂಬೈ ಮೂಲದ ಸೂರ್ಯಕುಮಾರ್ಇನ್ನು 4ನೇ ಸ್ಥಾನಕ್ಕೆ ಜಾರಿದ ಪಾಕಿಸ್ತಾನ ನಾಯಕ ಬಾಬರ್ ಅಜಂ
ದುಬೈ(ನ.23): ಟೀಂ ಇಂಡಿಯಾ ಸೂಪರ್ ಸ್ಟಾರ್ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್, ಭರ್ಜರಿ ಲಯದಲ್ಲಿದ್ದು, ಐಸಿಸಿ ಟಿ20 ರ‍್ಯಾಂಕಿಂಗ್‌ನಲ್ಲಿ ವೃತ್ತಿಜೀವನದಲ್ಲಿನ ಗರಿಷ್ಠ ರೇಟಿಂಗ್ ಅಂಕ ಸಂಪಾದಿಸುವುದರೊಂದಿಗೆ ಅಗ್ರ ಸ್ಥಾನದಲ್ಲೇ ಮುಂದುವರೆದಿದ್ದಾರೆ. ಇನ್ನು ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟರ ಮೊಹಮ್ಮದ್ ರಿಜ್ವಾನ್ ಎರಡನೇ ಸ್ಥಾನದಲ್ಲೇ ಉಳಿದುಕೊಂಡಿದ್ದಾರೆ. ನ್ಯೂಜಿಲೆಂಡ್ ಎದುರಿನ ಎರಡನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಆಕರ್ಷಕ ಶತಕ ಸಿಡಿಸಿದ್ದು, ಅವರ ನಂ.1 ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿದೆ.
ಸೂರ್ಯಕುಮಾರ್ ಯಾದವ್, ನ್ಯೂಜಿಲೆಂಡ್ ವಿರುದ್ದದ ಎರಡನೇ ಟಿ20 ಪಂದ್ಯದಲ್ಲಿ ಕೇವಲ 51 ಎಸೆತಗಳಲ್ಲಿ ಅಜೇಯ 111 ರನ್ ಸಿಡಿಸುವ ಮೂಲಕ ಟೀಂ ಇಂಡಿಯಾ 65 ರನ್‌ಗಳ ಜಯ ಸಾಧಿಸಲು ಮಹತ್ತರ ಪಾತ್ರವಹಿಸಿದ್ದರು. ಇದರೊಂದಿಗೆ ಸೂರ್ಯ 895 ರೇಟಿಂಗ್ ಅಂಕಗಳನ್ನು ತಮ್ಮದಾಗಿಸಿಕೊಂಡಿದ್ದರು. ಆದರೆ ಮೂರನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದರಿಂದಾಗಿ 5 ರೇಟಿಂಗ್ ಕಳೆದುಕೊಂಡು 890 ಅಂಕ ಸಂಪಾದಿಸಿದ್ದಾರೆ. ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೂರನೇ ಟಿ20 ಪಂದ್ಯವು ಮಳೆಯಿಂದಾಗಿ ಟೈನಲ್ಲಿ ಅಂತ್ಯವಾಗಿತ್ತು.
ನ್ಯೂಜಿಲೆಂಡ್ ಎದುರಿನ ಮೂರು ಪಂದ್ಯಗಳ ಟಿ20 ಸರಣಿಯ ಪೈಕಿ ಮೊದಲ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ಹೀಗಾಗಿ ಉಳಿದೆರಡು ಪಂದ್ಯಗಳಿಂದ ಸೂರ್ಯಕುಮಾರ್ ಯಾದವ್ ಒಟ್ಟು 124 ರನ್ ಕಲೆ ಹಾಕಿದ್ದರು. ಕಿವೀಸ್ ಎದುರಿನ ಎರಡನೇ ಟಿ20 ಪಂದ್ಯದಲ್ಲಿ ಸೂರ್ಯ ಶತಕ ಸಿಡಿಸುವ ಮೂಲಕ, ರೋಹಿತ್ ಶರ್ಮಾ ಬಳಿಕ ಕ್ಯಾಲೆಂಡರ್ ವರ್ಷವೊಂದರಲ್ಲಿ ಎರಡು ಅಂತಾರಾಷ್ಟ್ರೀಯ ಟಿ20 ಶತಕ ಸಿಡಿಸಿದ ಭಾರತದ ಎರಡನೇ ಬ್ಯಾಟರ್ ಎನ್ನುವ ಹಿರಿಮೆಗೆ ಪಾತ್ರರಾಗಿದ್ದರು. ಈ ಮೊದಲು ರೋಹಿತ್ ಶರ್ಮಾ 2018ರ ಕ್ಯಾಲೆಂಡರ್ ವರ್ಷವೊಂದರಲ್ಲಿ ಎರಡು ಶತಕ ಸಿಡಿಸಿದ್ದರು.
ನ್ಯೂಜಿಲೆಂಡ್ ಕೇಂದ್ರಿಯ ಗುತ್ತಿಗೆಯಿಂದ ಹೊರಬಿದ್ದ ಮಾರ್ಟಿನ್ ಗಪ್ಟಿಲ್..! ಮುಗಿಯಿತಾ ಕ್ರಿಕೆಟ್ ಬದುಕು?
ಮುಂಬೈ ಮೂಲದ ಸೂರ್ಯಕುಮಾರ್ ಯಾದವ್, ಸದ್ಯ ಟಿ20 ಕ್ರಿಕೆಟ್‌ನಲ್ಲಿ ರೆಡ್ ಹಾಟ್ ಫಾರ್ಮ್‌ನಲ್ಲಿದ್ದು, ಟಿ20 ವಿಶ್ವಕಪ್ ಟೂರ್ನಿಯಲ್ಲಿ 239 ರನ್ ಸಿಡಿಸಿ, ಟೂರ್ನಿಯ ಮೂರನೇ ಗರಿಷ್ಠ ರನ್ ಸ್ಕೋರರ್ ಎನಿಸಿಕೊಂಡಿದ್ದರು. ಸೂರ್ಯಕುಮಾರ್ ಯಾದವ್ ಈ ಕ್ಯಾಲೆಂಡರ್ ವರ್ಷವೊಂದರಲ್ಲಿ 31 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿ 1,164 ರನ್ ಬಾರಿಸಿ ಗಮನ ಸೆಳೆದಿದ್ದಾರೆ. ಈ ಮೂಲಕ ಕ್ಯಾಲೆಂಡರ್ ವರ್ಷವೊಂದರಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಸಾವಿರ ರನ್ ಬಾರಿಸಿದ ಭಾರತದ ಮೊದಲ ಹಾಗೂ ಏಕೈಕ ಬ್ಯಾಟರ್ ಎನ್ನುವ ಹಿರಿಮೆಗೆ ಸೂರ್ಯ ಪಾತ್ರರಾಗಿದ್ದರು.
ಇನ್ನುಳಿದಂತೆ ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ 836 ರೇಟಿಂಗ್ ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲೇ ಮುಂದುವರೆದಿದ್ದಾರೆ. ಆದರೆ ಪಾಕಿಸ್ತಾನದ ನಾಯಕ ಬಾಬರ್ ಅಜಂ 778 ರೇಟಿಂಗ್ ಅಂಕಗಳೊಂದಿಗೆ 4ನೇ ಸ್ಥಾನಕ್ಕೆ ಜಾರಿದ್ದಾರೆ. ಇನ್ನು ನ್ಯೂಜಿಲೆಂಡ್ ಆರಂಭಿಕ ಬ್ಯಾಟರ್ ಡೆವೊನ್ ಕಾನ್‌ವೇ, ಭಾರತ ಎದುರಿನ ಸರಣಿಯಲ್ಲಿ 84 ರನ್ ಬಾರಿಸುವ ಮೂಲಕ ಮೂರನೇ ಸ್ಥಾನಕ್ಕೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ನ್ಯೂಜಿಲೆಂಡ್ ಮತ್ತೋರ್ವ ಬ್ಯಾಟರ್ ಗ್ಲೆನ್ ಫಿಲಿಫ್ಸ್ ಎರಡು ಸ್ಥಾನ ಜಿಗಿತ ಕಂಡು 7ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.
ಇನ್ನು ಟಿ20 ಬೌಲಿಂಗ್ ಶ್ರೇಯಾಂಕದ ಟಾಪ್ 10 ಪಟ್ಟಿಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಇನ್ನು ಟೀಂ ಇಂಡಿಯಾ ಸ್ವಿಂಗ್ ಸ್ಪೆಷಲಿಸ್ಟ್ ಭುವನೇಶ್ವರ್ ಕುಮಾರ್, ಎರಡು ಸ್ಥಾನ ಜಿಗಿತ ಕಂಡು 11ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಇನ್ನು ನ್ಯೂಜಿಲೆಂಡ್ ಅನುಭವಿ ವೇಗಿ ಟಿಮ್ ಸೌಥಿ ಎರಡು ಸ್ಥಾನ ಜಿಗಿದು 14ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.
