ICC T20 World Cup 2022 ಟೂರ್ನಿಯ ಬಹುಮಾನ ಮೊತ್ತ ಪ್ರಕಟ; ಚಾಂಪಿಯನ್ ತಂಡಕ್ಕೆ ಸಿಗಲಿದೆ ಕೋಟಿ ಕೋಟಿ ಬಹುಮಾನ
ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಬಹುಮಾನ ಮೊತ್ತ ಪ್ರಕಟ
ಟಿ20 ವಿಶ್ವಕಪ್ ಚಾಂಪಿಯನ್ ತಂಡಕ್ಕೆ ಸಿಗಲಿದೆ ಕೋಟಿ ಕೋಟಿ ಬಹುಮಾನ
ಅಕ್ಟೋಬರ್ 16ರಿಂದ ಆಸ್ಟ್ರೇಲಿಯಾದಲ್ಲಿ ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್
ಮೆಲ್ಬೊರ್ನ್(ಸೆ.30): ಬಹುನಿರೀಕ್ಷಿತ ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದ್ದು, ಅಕ್ಟೋಬರ್ 16ರಿಂದ ಆಸ್ಟ್ರೇಲಿಯಾದಲ್ಲಿ ಚುಟುಕು ಕ್ರಿಕೆಟ್ ಮಹಾ ಸಂಗ್ರಾಮ ನಡೆಯಲಿದೆ. ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯು(ಐಸಿಸಿ), ಟಿ20 ವಿಶ್ವಕಪ್ ಟೂರ್ನಿಯ ಬಹುಮಾನ ಮೊತ್ತವನ್ನು ಪ್ರಕಟಿಸಿದೆ. ಈ ಬಾರಿ ಐಸಿಸಿ ಟಿ20 ವಿಶ್ವಕಪ್ ಚಾಂಪಿಯನ್ ಆಗುವ ತಂಡವು ಬರೋಬ್ಬರಿ 1.6 ಮಿಲಿಯನ್ ಅಮೆರಿಕನ್ ಡಾಲರ್(ಸುಮಾರು 13 ಕೋಟಿ ರುಪಾಯಿ) ನಗದು ಬಹುಮಾನ ಪಡೆಯಲಿದೆ.
ಟಿ20 ವಿಶ್ವಕಪ್ ವಿಜೇತ ತಂಡವು 1.6 ಮಿಲಿಯನ್ ಡಾಲರ್ ಬಹುಮಾನ ಪಡೆದರೆ, ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವ ತಂಡವು ಚಾಂಪಿಯನ್ ತಂಡವು ಪಡೆಯುವ ಬಹುಮಾನದ ಅರ್ಧದಷ್ಟು ನಗದು ಬಹುಮಾನ(ಆರೂವರೆ ಕೋಟಿ ರುಪಾಯಿ) ಪಡೆಯಲಿದೆ ಎಂದು ತಿಳಿಸಿದೆ. ಸುಮಾರು ಒಂದು ತಿಂಗಳು ಕಾಲ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 16 ತಂಡಗಳು ಪಾಲ್ಗೊಳ್ಳುತ್ತಿದ್ದು, ಒಟ್ಟಾರೆ 5.6 ಮಿಲಿಯನ್ ಡಾಲರ್(45.57 ಕೋಟಿ ರುಪಾಯಿ)ಗಳ ಪೈಕಿ ಸೆಮಿಫೈನಲ್ ಪ್ರವೇಶಿಸುವ ಪ್ರತಿ ತಂಡಗಳು ತಲಾ 4,00,000 ಡಾಲರ್‌ಗಳನ್ನು (3 ಕೋಟಿ 25 ಲಕ್ಷ) ಪಡೆಯಲಿವೆ. ಇನ್ನು ಸೂಪರ್ 12 ಹಂತದಲ್ಲೇ ಮುಗ್ಗರಿಸುವ 8 ತಂಡಗಳು ತಲಾ 70,000 ಡಾಲರ್ (56 ಲಕ್ಷ) ಬಹುಮಾನ ಪಡೆಯಲಿವೆ.
T20 World Cup: ಜಸ್‌ಪ್ರೀತ್ ಬುಮ್ರಾ ಟಿ20 ವಿಶ್ವಕಪ್‌ನಿಂದ ಔಟ್
ಕಳೆದ ವರ್ಷದಂತೆ ಈ ವರ್ಷ ಕೂಡಾ ಐಸಿಸಿ ಪುರುಷರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೂಪರ್ 12 ಹಂತದಲ್ಲಿ 30 ಪಂದ್ಯಗಳು ನಡೆಯಲಿದ್ದು, ಪ್ರತಿ ಪಂದ್ಯದಲ್ಲಿ ವಿಜೇತರಾಗುವ ತಂಡವು ತಲಾ 40,000 ಯುಎಸ್ ಡಾಲರ್(32.5 ಲಕ್ಷ ರುಪಾಯಿ) ಬಹುಮಾನವನ್ನು ತನ್ನದಾಗಿಸಿಕೊಳ್ಳಲಿವೆ. ಈಗಾಗಲೇ ಸೂಪರ್ 12 ಹಂತಕ್ಕೆ ಆಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ನ್ಯೂಜಿಲೆಂಡ್, ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ನೇರ ಅರ್ಹತೆಯನ್ನು ಪಡೆದುಕೊಂಡಿವೆ ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇನ್ನುಳಿದ ಎಂಟು ತಂಡಗಳಾದ ನಮಿಬಿಯಾ, ಶ್ರೀಲಂಕಾ, ನೆದರ್‌ಲೆಂಡ್ಸ್ ತಂಡಗಳು ಗ್ರೂಪ್ 'ಎ' ಹಾಗೂ ವೆಸ್ಟ್ ಇಂಡೀಸ್, ಸ್ಕಾಟ್ಲೆಂಡ್, ಐರ್ಲೆಂಡ್ ಮತ್ತು ಜಿಂಬಾಬ್ವೆ ತಂಡಗಳು ಗ್ರೂಪ್ 'ಬಿ'ನಲ್ಲಿ ಸ್ಥಾನ ಪಡೆದಿದ್ದು, ಅರ್ಹತಾ ಸುತ್ತಿನ ಕಾದಾಟದಲ್ಲಿ ಪ್ರತಿಗುಂಪಿನಲ್ಲಿ ಅಗ್ರ ಸ್ಥಾನ ಪಡೆಯುವ ಎರಡು ತಂಡಗಳಂತೆ ಒಟ್ಟು 4 ತಂಡಗಳು ಸೂಪರ್ 12 ಹಂತಕ್ಕೆ ಲಗ್ಗೆಯಿಡಲಿವೆ.
ಅರ್ಹತಾ ಸುತ್ತಿನಲ್ಲಿ ಪಾಲ್ಗೊಂಡ ತಂಡವು ಪ್ರತಿ ಪಂದ್ಯದ ಗೆಲುವಿಗೆ 40,000 ಡಾಲರ್(32.5 ಲಕ್ಷ ರುಪಾಯಿ) ನಗದು ಬಹುಮಾನ ಪಡೆಯಲಿವೆ. ಅರ್ಹತಾ ಸುತ್ತಿನಲ್ಲಿ ಒಟ್ಟು 12 ಪಂದ್ಯಗಳು ಜರುಗಲಿವೆ. ಇನ್ನು ಅರ್ಹತಾ ಸುತ್ತಿನಲ್ಲಿಯೇ ಹೊರಬೀಳುವ 4 ತಂಡಗಳು ತಲಾ 32 ಲಕ್ಷ ರುಪಾಯಿ ಬಹುಮಾನ ಪಡೆಯಲಿವೆ.
ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಅಕ್ಟೋಬರ್ 16ರಿಂದ ಆರಂಭವಾಗಿ ನವೆಂಬರ್ 13ರ ವರೆಗೆ ಜರುಗಲಿದೆ. ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ಹಾಗೂ ಪಾಕಿಸ್ತಾನ ತಂಡಗಳು ಈ ಬಾರಿ ಪ್ರಶಸ್ತಿ ಗೆಲ್ಲಬಲ್ಲ ನೆಚ್ಚಿನ ತಂಡಗಳಾಗಿ ಗುರುತಿಸಿಕೊಂಡಿವೆ.