T20 World Cup: ಇಂಡೋ-ಪಾಕ್ ಕದನದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ..!
ಟಿ20 ವಿಶ್ವಕಪ್‌ನಲ್ಲಿಂದು ಭಾರತ-ಪಾಕಿಸ್ತಾನ ಮುಖಾಮುಖಿ
ಟಾಸ್ ಗೆದ್ದ ಟೀಂ ಇಂಡಿಯಾ ಬೌಲಿಂಗ್ ಆಯ್ಕೆ
7 ಬ್ಯಾಟರ್ ಓರ್ವ ಆಲ್ರೌಂಡರ್ ಮೂವರು ವೇಗಿಗಳೊಂದಿಗೆ ಕಣಕ್ಕೆ
ಮೆಲ್ಬರ್ನ್(ಅ.23): ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಬಹುನಿರೀಕ್ಷಿತ ಹೈವೋಲ್ಟೇಜ್ ಪಂದ್ಯ ಎನಿಸಿಕೊಂಡಿರುವ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಮೆಲ್ಬೊರ್ನ್ ಕ್ರಿಕೆಟ್ ಮೈದಾನ ಆತಿಥ್ಯ ವಹಿಸಿದೆ.
ಕ್ರಿಕೆಟ್ ಜಗತ್ತಿನ ಎರಡು ಬದ್ದ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಜಿದ್ದಾಜಿದ್ದಿನ ಪೈಪೋಟಿಯ ಪಂದ್ಯವನ್ನು ಕಣ್ತುಂಬಿಕೊಳ್ಳಲು ಸುಮಾರು 90 ಸಾವಿರಕ್ಕೂ ಅಧಿಕ ಅಭಿಮಾನಿಗಳು ಮೆಲ್ಬರ್ನ್ ಮೈದಾನದಲ್ಲಿ ಜಮಾಯಿಸಿದ್ದು, ರೋಚಕ ಪಂದ್ಯವನ್ನು ಎದುರು ನೋಡುತ್ತಿದ್ದಾರೆ.
ಸರಿಯಾಗಿ ಒಂದು ವರ್ಷದ ಹಿಂದೆ ಅಂದರೆ ಅ.24, 2021ರಂದು ಟಿ20 ವಿಶ್ವಕಪ್‌ನಲ್ಲಿ ಉಭಯ ತಂಡಗಳು ಪರಸ್ಪರ ಎದುರಾಗಿದ್ದವು. ಮೊದಲ ಬಾರಿಗೆ ವಿಶ್ವಕಪ್‌ನಲ್ಲಿ ಭಾರತವನ್ನು ಸೋಲಿಸಿ ಪಾಕಿಸ್ತಾನ ಸಂಭ್ರಮಿಸಿತ್ತು. ಆ ಸೋಲಿನ ಸೇಡಿಗೆ ಟೀಂ ಇಂಡಿಯಾ ಕಾಯುತ್ತಿದೆ. ಇತ್ತೀಚೆಗಷ್ಟೇ ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ 2 ಪಂದ್ಯಗಳನ್ನು ಆಡಿದ್ದ ಭಾರತ ಒಂದರಲ್ಲಿ ಗೆದ್ದು ಮತ್ತೊಂದರಲ್ಲಿ ಸೋಲುಂಡಿತ್ತು.
ಇದೀಗ ಹೊಸ ಉತ್ಸಾಹ, ಹೊಸ ಯೋಜನೆ, ತಂತ್ರಗಾರಿಕೆಯೊಂದಿಗೆ ಎರಡೂ ತಂಡಗಳು ಕಣಕ್ಕಿಳಿಯಲು ಸಜ್ಜಾಗಿವೆ. ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸದೆ ಇದ್ದರೆ, ಅಭಿಮಾನಿಗಳಿಗೆ ಭರಪೂರ ಮನರಂಜನೆ ಸಿಗುವುದರಲ್ಲಿ ಅನುಮಾನವಿಲ್ಲ.
ಪಿಚ್ ರಿಪೋರ್ಚ್
ಎಂಸಿಜಿ ಪಿಚ್ ಬ್ಯಾಟಿಂಗ್ ಯೋಗ್ಯವಾಗಿದ್ದರೂ ವೇಗಿಗಳು ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆ ಹೆಚ್ಚು. ಇಲ್ಲಿ ಕೊನೆ 3 ಟಿ20 ಪಂದ್ಯಗಳಲ್ಲಿ 28ರಲ್ಲಿ 23 ವಿಕೆಟ್‌ಗಳು ವೇಗಿಗಳ ಪಾಲಾಗಿವೆ. ಇಲ್ಲಿನ ಸರಾಸರಿ ಮೊದಲ ಇನ್ನಿಂಗ್‌್ಸ ಮೊತ್ತ 145. ಕಳೆದ 3 ಪಂದ್ಯಗಳಲ್ಲೂ ಚೇಸಿಂಗ್ ಮಾಡಿದ ತಂಡ ಜಯಿಸಿದೆ.
ತಂಡಗಳು ಹೀಗಿವೆ
ಭಾರತ: ರೋಹಿತ್ ಶರ್ಮಾ(ನಾಯಕ), ಕೆ ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಆರ್ಶದೀಪ್ ಸಿಂಗ್.
ಪಾಕಿಸ್ತಾನ: ಬಾಬರ್ ಆಜಂ(ನಾಯಕ), ಮೊಹಮ್ಮದ್ ರಿಜ್ವಾನ್, ಶಾನ್ ಮಸೂದ್, ಹೈದರ್ ಅಲಿ, ಇಫ್ತಿಕಾರ್ ಅಹಮ್ಮದ್, ಆಸಿಫ್ ಅಲಿ, ಮೊಹಮ್ಮದ್ ನವಾಜ್, ಶಾದಾಬ್ ಖಾನ್, ನಸೀಂ ಶಾ, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್.
ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಹಾಟ್‌ಸ್ಟಾರ್
ಸ್ಥಳ: ಎಂಸಿಜಿ