T20 World Cup: ನಿಸ್ಸಾಂಕ ಆಕರ್ಷಕ ಫಿಫ್ಟಿ; ಇಂಗ್ಲೆಂಡ್‌ಗೆ ಸ್ಪರ್ಧಾತ್ಮಕ ಗುರಿ ನೀಡಿದ ಲಂಕಾ..!
ಇಂಗ್ಲೆಂಡ್‌ಗೆ ಗೆಲ್ಲಲು 142 ರನ್‌ಗಳ ಸಾಧಾರಣ ಗುರಿ ನೀಡಿದ ಶ್ರೀಲಂಕಾ
ಸಿಡ್ನಿ ಮೈದಾನದಲ್ಲಿ ಲಂಕಾ-ಇಂಗ್ಲೆಂಡ್ ಗೆಲುವಿಗಾಗಿ ಸೆಣಸಾಟ
ಈ ಪಂದ್ಯ ಜಯಿಸಿದರಷ್ಟೇ ಇಂಗ್ಲೆಂಡ್ ಸೆಮೀಸ್‌ಗೆ ಲಗ್ಗೆಯಿಡಲಿದೆ
ಸಿಡ್ನಿ(ನ.05): ಆರಂಭಿಕ ಬ್ಯಾಟರ್ ಪಥುಮ್ ನಿಸ್ಸಾಂಕ(67) ಬಾರಿಸಿದ ಆಕರ್ಷಕ ಅರ್ಧಶತಕದ ನೆರವಿನಿಂದ ಶ್ರೀಲಂಕಾ ತಂಡವು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 141 ರನ್ ಬಾರಿಸಿದ್ದು, ಇಂಗ್ಲೆಂಡ್‌ಗೆ ಗೆಲ್ಲಲು ಸವಾಲಿನ ಗುರಿ ನೀಡಿದೆ. ಟಿ20 ವಿಶ್ವಕಪ್ ಟೂರ್ನಿಯ ಗ್ರೂಪ್ 1 ವಿಭಾಗದಿಂದ ಸೆಮೀಸ್‌ಗೇರಲು ಇಂಗ್ಲೆಂಡ್ ತಂಡಕ್ಕೆ ಈ ಪಂದ್ಯದಲ್ಲಿ ಗೆಲುವು ಸಾಧಿಸುವುದು ಅನಿವಾರ್ಯವಾಗಿದೆ. ಈ ಪಂದ್ಯ ಗೆದ್ದರಷ್ಟೇ ಜೋಸ್ ಬಟ್ಲರ್ ಪಡೆ ಟೂರ್ನಿಯಲ್ಲಿ ಎರಡನೇ ತಂಡವಾಗಿ ಸೆಮೀಸ್‌ಗೆ ಲಗ್ಗೆಯಿಡಲಿದೆ.
ಇಲ್ಲಿನ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ದಶುನ್ ಶನಕಾ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಈಗಾಗಲೇ ಸೆಮೀಸ್ ರೇಸ್‌ನಿಂದ ಹೊರಬಿದ್ದಿರುವ ಶ್ರೀಲಂಕಾ ತಂಡವು ಆರಂಭದಿಂದಲೇ ಆಕ್ರಮಣಕಾರಿಯಾಟಕ್ಕೆ ಮೊರೆಹೋಯಿತು. ಮೊದಲ ವಿಕೆಟ್‌ಗೆ ಪಥುಮ್ ನಿಸ್ಸಾಂಕ ಹಾಗೂ ಕುಸಾಲ್ ಮೆಂಡಿಸ್ ಜೋಡಿ ಕೇವಲ 4 ಓವರ್ ಅಂತ್ಯದ ವೇಳೆಗೆ 39 ರನ್‌ಗಳ ಜತೆಯಾಟವಾಡಿತು. ಕುಸಾಲ್ ಮೆಂಡಿಸ್ 14 ಎಸೆತಗಳಲ್ಲಿ 18 ರನ್ ಬಾರಿಸಿ ಕ್ರಿಸ್ ವೋಕ್ಸ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಧನಂಜಯ ಡಿ ಸಿಲ್ವಾ(9) ಹಾಗೂ ಚರಿತ್ ಅಸಲಂಕಾ(8) ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದರು.
ನಿಸ್ಸಾಂಕ ಆಕರ್ಷಕ ಫಿಫ್ಟಿ: ಲಂಕಾದ ಆರಂಭಿಕ ಬ್ಯಾಟರ್ ಪಥುಮ್ ನಿಸ್ಸಾಂಕ ಆರಂಭದಿಂದಲೇ ಮೈಚಳಿ ಬಿಟ್ಟು ಬ್ಯಾಟ್ ಬೀಸುವ ಮೂಲಕ ರನ್ ವೇಗಕ್ಕೆ ಚುರುಕು ಮುಟ್ಟಿಸಿದರು. ಆದರೆ ಕೇವಲ 12 ರನ್‌ಗಳ ಅಂತರದಲ್ಲಿ ಅಸಲಂಕಾ ಹಾಗೂ ಡಿ ಸಿಲ್ವಾ ವಿಕೆಟ್ ಕಳೆದುಕೊಂಡಿದ್ದರಿಂದ ಆ ಬಳಿಕ ಎಚ್ಚರಿಕೆಯ ಬ್ಯಾಟಿಂಗ್‌ಗೆ ಮುಂದಾದರು. ಪಥುಮ್ ನಿಸ್ಸಾಂಕ ಕೇವಲ 33 ಎಸೆತಗಳನ್ನು ಎದುರಿಸಿ ಟಿ20 ಕ್ರಿಕೆಟ್ ವೃತ್ತಿಜೀವನದ 9ನೇ ಹಾಗೂ ಪ್ರಸಕ್ತ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಯ ಎರಡನೇ ಟಿ20 ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಅಂತಿಮವಾಗಿ ನಿಸ್ಸಾಂಕ 45 ಎಸೆತಗಳನ್ನು ಎದುರಿಸಿ 2 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 67 ರನ್ ಬಾರಿಸಿ ಆದಿಲ್ ರಶೀದ್‌ಗೆ ವಿಕೆಟ್ ಒಪ್ಪಿಸಿದರು.
T20 World Cup ಇಂಗ್ಲೆಂಡ್ ಎದುರು ಟಾಸ್ ಗೆದ್ದ ಲಂಕಾ ಬ್ಯಾಟಿಂಗ್ ಆಯ್ಕೆ
ಕಮ್‌ಬ್ಯಾಕ್ ಮಾಡಿದ ಇಂಗ್ಲೆಂಡ್: ಒಂದು ಹಂತದಲ್ಲಿ ಶ್ರೀಲಂಕಾ ತಂಡವು ಮೊದಲ 10 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 80 ರನ್ ಗಳಿಸುವ ಮೂಲಕ ಬೃಹತ್ ಮೊತ್ತದತ್ತ ದಾಪುಗಾಲಿಡುತ್ತಿತ್ತು. ಆದರೆ ದ್ವಿತಿಯಾರ್ಧದಲ್ಲಿ ಇಂಗ್ಲೆಂಡ್ ಬೌಲರ್‌ಗಳು ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾದರು. ಹೀಗಾಗಿ ಕೊನೆಯ 60 ಎಸೆತಗಳಲ್ಲಿ ಇಂಗ್ಲೆಂಡ್ ಬೌಲರ್‌ಗಳು 6 ವಿಕೆಟ್ ಕಬಳಿಸುವುದರ ಜತೆಗೆ ಕೇವಲ 61 ರನ್ ನೀಡುವ ಮೂಲಕ ಲಂಕಾ ರನ್ ವೇಗಕ್ಕೆ ಕಡಿವಾಣ ಹಾಕಿದರು. ಅದರಲ್ಲೂ ಕೊನೆಯ 5 ಓವರ್‌ಗಳಲ್ಲಿ ಲಂಕಾ ತಂಡವು 25 ರನ್ ಕಲೆಹಾಕಲಷ್ಟೇ ಶಕ್ತವಾಯಿತು.
ಸಂಕ್ಷಿಪ್ತ ಸ್ಕೋರ್
ಶ್ರೀಲಂಕಾ:
ಪಥುಮ್ ನಿಸ್ಸಾಂಕ: 67
ಭನುಕಾ ರಾಜಪಕ್ಸಾ: 22
ಮಾರ್ಕ್ ವುಡ್: 26/3
(* ಶ್ರೀಲಂಕಾ ಬ್ಯಾಟಿಂಗ್ ಮುಕ್ತಾಯದ ವೇಳೆಗೆ)