ಕರಾಚಿ(ಡಿ.02): ಕೊರೋನಾ ಹಿನ್ನೆಲೆಯಲ್ಲಿ ಈಗಾಗಲೇ ಟಿ20 ವಿಶ್ವಕಪ್‌ ಒಂದು ವರ್ಷ ಮುಂದೂಡಿಕೆಯಾಗಿದೆ. ಇದೀಗ ಇದೇ ಕೊರೋನಾ ಕಾರಣದಿಂದ 2021ರಲ್ಲಿ ಭಾರತದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್‌ ಟೂರ್ನಿ, ಯುಎಇಗೆ ಸ್ಥಳಾಂತರವಾಗಲಿದೆ ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಸಿಇಒ ವಾಸೀಂ ಖಾನ್‌ ಹೇಳಿದ್ದಾರೆ. 

ಭಾರತದಲ್ಲಿ ಕೋವಿಡ್‌ ತನ್ನ 2ನೇ ಅಲೆ ಆರಂಭಿಸುವ ಸೂಚನೆಯಿದ್ದು, ನಿಧಾನವಾಗಿ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಕಾರಣದಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಟಿ20 ವಿಶ್ವಕಪ್‌ ಟೂರ್ನಿಯನ್ನು ಭಾರತದ ಬದಲಿಗೆ ಯುಎಇ ಅಂಗಣದಲ್ಲಿ ನಡೆಸಲಿದೆ ಎಂದು ವಾಸೀಂ ಖಾನ್‌ ಹೇಳಿದ್ದಾರೆ.

ಕೊರೋನಾ ಭೀತಿ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಬಿಸಿಸಿಐ, ಇಂಡಿಯನ್‌ ಪ್ರೀಮಿಯರ್‌ ಲೀಗ್‌ 13ನೇ ಆವೃತ್ತಿಯನ್ನು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ) ನಲ್ಲಿ ಯಶಸ್ವಿಯಾಗಿ ನಡೆಸಲಾಗಿತ್ತು. ಈ ಸಲುವಾಗಿ ಯುಎಇನ ಶಾರ್ಜಾ, ದುಬೈ ಮತ್ತು ಅಬುಧಾಬಿಯ ಕ್ರೀಡಾಂಗಣಗಳಲ್ಲಿ ಬಯೋ-ಸೆಕ್ಯುರ್‌ ವಾತಾವರಣ ನಿರ್ಮಾಣ ಮಾಡಿ, ಪ್ರೇಕ್ಷಕರಿಲ್ಲದೇ ಖಾಲಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಯೋಜಿಸಲಾಗಿತ್ತು. ಐಪಿಎಲ್‌ ಆಯೋಜಿಸಿದ ರೀತಿಯಲ್ಲೇ ಟಿ20 ವಿಶ್ವಕಪ್‌ ನಡೆಸಲಾಗುವುದು ಎನ್ನಲಾಗುತ್ತಿದೆ.

ಕೊಹ್ಲಿ ಸಾಧನೆಗೆ ಮತ್ತೊಂದು ಗರಿ; ಸಚಿನ್ ವಿಶ್ವದಾಖಲೆ ವಿರಾಟ್ ಪಾಲು..!

ಭಾರತದಲ್ಲಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ಆಯೋಜನೆ ಬಗ್ಗೆ ಇನ್ನು ಸ್ಪಷ್ಟತೆ ಲಭ್ಯವಾಗಿಲ್ಲ. ಏಕೆಂದರೆ ಅಲ್ಲಿ ಕೊರೋನಾ ಹಾವಳಿ ಹೆಚ್ಚಾಗುತ್ತಿದೆ. ಆಟಗಾರರು ಇಲ್ಲಿ ಪಂದ್ಯಗಳನ್ನು ಆಡುವುದರಿಂದ ಅಪಾಯ ಹೆಚ್ಚಾಗಲಿದೆ. ಹೀಗಾಗಿ ಟೂರ್ನಿಯನ್ನು ಯುಎಇಯಲ್ಲಿ ನಡೆಸಲಾಗುವುದು ಎಂದು ಕ್ರಿಕೆಟ್‌ ಭಾಝ್‌ ಯೂಟ್ಯೂಬ್‌ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ವಾಸೀಂ ಖಾನ್‌ ಹೇಳಿದ್ದಾರೆ.

ಪಾಕ್‌ಗೆ ವೀಸಾ ಸಿಗಲ್ಲ ಎಂಬ ಆತಂಕ:

ಭಾರತದಲ್ಲಿ ಟಿ20 ವಿಶ್ವಕಪ್‌ ಟೂರ್ನಿ ನಡೆದರೆ, ಪಾಕಿಸ್ತಾನ ಆಟಗಾರರಿಗೆ ವೀಸಾ ಸಮಸ್ಯೆ ಉಂಟಾಗಲಿದೆ. ವೀಸಾ ಸಿಗುವುದಿಲ್ಲ ಎನ್ನುವ ಆತಂಕದಲ್ಲಿ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಟಿ20 ವಿಶ್ವಕಪ್‌ ಯುಎಇಗೆ ಸ್ಥಳಾಂತರವಾಗಲಿದೆ ಎಂಬ ವದಂತಿಯನ್ನು ಹಬ್ಬಿಸುತ್ತಿದೆ ಎನ್ನಲಾಗಿದೆ. ಈ ನಡುವೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ, ಟಿ20 ವಿಶ್ವಕಪ್‌ಗೆ ಭಾರತದ ವೀಸಾ ಪಡೆಯಲು ಐಸಿಸಿಗೆ ಮನವಿ ಮಾಡಿದೆ. ಭಾರತ ಮತ್ತು ಪಾಕಿಸ್ತಾನ ನಡುವಣ ರಾಜಕೀಯ ಬಿಕ್ಕಟ್ಟಿನ ಬಗ್ಗೆ ವಿವರಿಸಿ ಪಿಸಿಬಿ ಮುಖ್ಯಸ್ಥ ಎಹ್ಸಾನ್‌ ಮಣಿ ಐಸಿಸಿಗೆ ಪತ್ರ ಬರೆದಿದ್ದಾರೆ. ಟೂರ್ನಿಯಲ್ಲಿ ಪಾಲ್ಗೊಳ್ಳಲು ಐಸಿಸಿ ಮತ್ತು ಬಿಸಿಸಿಐ ಪಾಕಿಸ್ತಾನ ತಂಡಕ್ಕೆ ವೀಸಾ ಸಿಗಲಿದೆ ಎಂದು ಪತ್ರ ಬರೆದುಕೊಡುವ ಅಗತ್ಯವಿದೆ ಎಂದು ಎಹ್ಸಾನ್‌ ಮಣಿ ಹೇಳಿದ್ದಾರೆ.