T20 World Cup: ನ್ಯೂಜಿಲೆಂಡ್ ಎದುರು ಟೀಂ ಇಂಡಿಯಾ ಸೋಲಿಗೆ ಕಾರಣವೇನು..?
ಬೆಂಗಳೂರು: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ (ICC T20 World Cup) ವಿರಾಟ್ ಕೊಹ್ಲಿ (Virat Kohli) ನೇತೃತ್ವದ ಟೀಂ ಇಂಡಿಯಾ (Team India), ನ್ಯೂಜಿಲೆಂಡ್ ಎದುರು 8 ವಿಕೆಟ್‌ಗಳ ಹೀನಾಯ ಸೋಲು ಕಂಡಿದೆ. ಈ ಸೋಲಿನೊಂದಿಗೆ ಟೀಂ ಇಂಡಿಯಾದ ಸೆಮೀಸ್ ಕನಸು ಬಹುತೇಕ ಭಗ್ನವಾದಂತೆ ಆಗಿದೆ. ಇದೀಗ ಕಿವೀಸ್ (New Zealand Cricket Team) ಎದುರು ಟೀಂ ಇಂಡಿಯಾ ಸೋತಿದ್ದೆಲ್ಲಿ?, ಟೀಂ ಇಂಡಿಯಾ ಸೋಲಿಗೆ ಕಾರಣವೇನು ಎನ್ನುವುದನ್ನು ನೋಡುವುದಾದರೇ..
1. ನಿರ್ಣಾಯಕ ಪಂದ್ಯದಲ್ಲಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಅನಗತ್ಯ ಬದಲಾವಣೆ:
ಟೀಂ ಇಂಡಿಯಾ ಬ್ಯಾಟಿಂಗ್ ಕ್ರಮಾಂಕದಲ್ಲಿ ಅನಿರೀಕ್ಷಿತ ಬದಲಾವಣೆ ಮಾಡಲು ಹೋಗಿ ಕೈ ಸುಟ್ಟುಕೊಂಡಿತು. ರೋಹಿತ್ 3ನೇ ಕ್ರಮಾಂಕದಲ್ಲಿ ಹಾಗೂ ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿಳಿದು ವೈಫಲ್ಯ ಅನುಭವಿಸಿದರು.
2. ಕಿವೀಸ್ ವಿರುದ್ದ ಉತ್ತಮ ದಾಖಲೆ ಹೊಂದಿದ್ದರೂ ಅಶ್ವಿನ್‌ಗೆ ಸಿಗಲಿಲ್ಲ ಸ್ಥಾನ
ಟೀಂ ಇಂಡಿಯಾ ಅನುಭವಿ ಅಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ನ್ಯೂಜಿಲೆಂಡ್ ಎದುರು ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ್ದಾರೆ. ಹೀಗಿದ್ದೂ ಅನುಭವಿ ಸ್ಪಿನ್ನರ್ ಅವರನ್ನು ಕಡೆಗಣಿಸಿದ್ದು ತಂಡಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತು.
3. ಮುಳುವಾಯಿತು ಅತಿಯಾದ ಎಚ್ಚರಿಕೆಯ ಆಟ:
ಮಹತ್ವದ ಪಂದ್ಯದಲ್ಲಿ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಗಿದ್ದು, ಟೀಂ ಇಂಡಿಯಾ ಪಾಲಿಗೆ ದೊಡ್ಡ ಹಿನ್ನೆಡೆಯಾಗಿ ಪರಿಣಮಿಸಿತು. ಆರಂಭಿಕ ವಿಕೆಟ್ ಪತನದ ಬಳಿಕ ಪಂದ್ಯದ 7ನೇ ಓವರ್‌ನಿಂದ 16ನೇ ಓವರ್‌ವರೆಗೂ ಟೀಂ ಇಂಡಿಯಾ ಒಂದೇ ಒಂದು ಬೌಂಡರಿ ಬಾರಿಸಲು ಯಶಸ್ವಿಯಾಗಲಿಲ್ಲ.
4. ಟಾಸ್ ಸೋಲು ಕೂಡಾ ಟೀಂ ಇಂಡಿಯಾ ಹಿನ್ನಡೆಯನ್ನುಂಟು ಮಾಡಿತು.
ಪಾಕಿಸ್ತಾನ ವಿರುದ್ದದ ಪಂದ್ಯದಲ್ಲೂ ಟಾಸ್ ಸೋತಿದ್ದ ವಿರಾಟ್ ಕೊಹ್ಲಿ ಎರಡನೇ ಪಂದ್ಯದಲ್ಲಿ ಕಿವೀಸ್ ಎದುರು ಟಾಸ್ ಗೆಲ್ಲುವಲ್ಲಿ ವಿಫಲರಾದರು. ಪಿಚ್ ಪರಿಸ್ಥಿತಿಯನ್ನು ಅವಲೋಕಿಸಿದ್ದ ಕಿವೀಸ್ ನಾಯಕ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡರು. ಟಾಸ್ ಸೋತಿದ್ದು, ಕೊಹ್ಲಿ ಮನೋಭಾವ ಕುಸಿಯುವಂತೆ ಮಾಡಿತು.
5. ಅತಿಯಾದ ಕ್ರಿಕೆಟ್‌ನಿಂದ ದಣಿದಿರುವ ಆಟಗಾರರು
ಟೀಂ ಇಂಡಿಯಾ ನಿರಂತರ ಕ್ರಿಕೆಟ್‌ನಿಂದ ದಣಿದು ಹೋಗಿದ್ದಾರೆ. ದೀರ್ಘಕಾಲಿಕ ಇಂಗ್ಲೆಂಡ್ ಪ್ರವಾಸ, ಒಂದು ತಿಂಗಳ ಕಾಲ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಂಡು ಕೇವಲ ಒಂದು ವಾರದ ಅಂತರದಲ್ಲಿ ಟಿ20 ಟೂರ್ನಿಗೆ ಕಣಕ್ಕಿಳಿದಿದ್ದರು. ಬಿಡುವಿರದ ಕ್ರಿಕೆಟ್ ಆಡಿ ಟೀಂ ಇಂಡಿಯಾ ಆಟಗಾರರು ದಣಿದಿದ್ದೂ ಸಹಾ ಭಾರತ ತಂಡದ ಸೋಲಿಗೆ ಕಾರಣ.
6. ಮೊನಚು ಕಳೆದುಕೊಂಡ ಬೌಲಿಂಗ್ ಪಡೆ:
ಟೀಂ ಇಂಡಿಯಾ ಬೌಲರ್‌ಗಳು ಈ ಎರಡು ಪಂದ್ಯಗಳಲ್ಲೂ ಮೊನಚಾದ ಬೌಲಿಂಗ್ ದಾಳಿ ನಡೆಸುವಲ್ಲಿ ವಿಫಲವಾಗಿದ್ದೂ ಸಹಾ ಭಾರತ ಸೋಲಿಗೆ ಕಾರಣಗಳಲ್ಲಿ ಒಂದು ಪಾಕ್ ವಿರುದ್ದ ಒಂದೇ ಒಂದು ವಿಕೆಟ್ ಕಬಳಿಸಲು ಭಾರತೀಯ ಬೌಲರ್‌ಗಳಿಗೆ ಸಾಧ್ಯವಾಗಿರಲಿಲ್ಲ. ಇನ್ನು ಕಿವೀಸ್ ಎದುರು ಬುಮ್ರಾ 2 ವಿಕೆಟ್ ಕಬಳಿಸಿದ್ದು ಬಿಟ್ಟರೆ, ಉಳಿದ್ಯಾವ ಆಟಗಾರರು ಯಶಸ್ವಿಯಾಗಲಿಲ್ಲ.