T20 World Cup ಪಾಕ್ ಎದುರು ಟಾಸ್ ಗೆದ್ದ ಬಾಂಗ್ಲಾದೇಶ ಬ್ಯಾಟಿಂಗ್ ಆಯ್ಕೆ
ಅಡಿಲೇಡ್ ಓವಲ್ ಮೈದಾನದಲ್ಲಿಂದು ಪಾಕಿಸ್ತಾನ-ಬಾಂಗ್ಲಾದೇಶ ಮುಖಾಮುಖಿ
ಸೆಮೀಸ್ ಪ್ರವೇಶಿಸಲು ಉಭಯ ತಂಡಗಳ ಪಾಲಿಗೆ ಮಹತ್ವದ ಪಂದ್ಯ
ಪಂದ್ಯ ರದ್ದಾದರೇ ಪಾಕಿಸ್ತಾನಕ್ಕಿದೆ ಸೆಮೀಸ್‌ಗೇರುವ ಅವಕಾಶ
ಅಡಿಲೇಡ್(ನ.06): ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದ ವರ್ಚುವಲ್ ನಾಕೌಟ್ ಎನಿಸಿಕೊಂಡಿರುವ ಪಂದ್ಯದಲ್ಲಿಂದು ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಬಾಂಗ್ಲಾದೇಶ ತಂಡವು ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದೆ. ಬಾಂಗ್ಲಾದೇಶ ತಂಡದಲ್ಲಿ ಮೂರು ಮಹತ್ವದ ಬದಲಾವಣೆ ಮಾಡಲಾಗಿದೆ.
ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಮಹತ್ವದ ಪಂದ್ಯಕ್ಕೆ ಇಲ್ಲಿನ ಅಡಿಲೇಡ್ ಓವಲ್ ಮೈದಾನ ಆತಿಥ್ಯ ವಹಿಸಿದೆ. ಬದ್ಧವೈರಿ ಭಾರತ ಹಾಗೂ ಬಳಿಕ ಜಿಂಬಾಬ್ವೆ ವಿರುದ್ಧ ಆಘಾತಕಾರಿ ಸೋಲುಂಡರೂ ಇನ್ನೂ ಸೆಮೀಸ್ ರೇಸ್‌ನಲ್ಲಿ ಉಳಿದುಕೊಂಡಿರುವ ಪಾಕಿಸ್ತಾನ, ಇದೀಗ ನಿರ್ಣಾಯಕ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಸೆಣಸಾಡುತ್ತಿದೆ. ಸದ್ಯ ದಕ್ಷಿಣ ಆಫ್ರಿಕಾ ತಂಡದ ಸೋಲಿನೊಂದಿಗೆ ಇದೀಗ ಎರಡೂ ತಂಡಗಳಿಗೆ ಸೆಮೀಸ್ ಬಾಗಿಲು ತೆರೆದಿದ್ದು, ಹೀಗಾಗಿ ಉಭಯ ತಂಡಗಳಿಂದಲೂ ತೀವ್ರ ಪೈಪೋಟಿ ನಿರೀಕ್ಷಿಸಲಾಗಿದೆ.
ಟೂರ್ನಿಯ ಆರಂಭದಲ್ಲಿ ಪಾಕ್ ಪ್ರಶಸ್ತಿ ಗೆಲ್ಲುವ ಫೇವರಿಟ್ ಎಂದು ಬಿಂಬಿತವಾಗಿದ್ದರೂ ತಂಡದಿಂದ ನಿರೀಕ್ಷಿತ ಪ್ರದರ್ಶನ ಇನ್ನೂ ಹೊರಬಂದಿಲ್ಲ. ಅತ್ತ ಬಾಂಗ್ಲಾ ಸಂಘಟಿತ ಹೋರಾಟ ಪ್ರದರ್ಶಿಸುತ್ತಿದ್ದರೂ ಗೆಲುವು ದಕ್ಕುತ್ತಿಲ್ಲ. ಆದರೆ ಆಘಾತಕಾರಿ ಫಲಿತಾಂಶಕ್ಕೆ ಹೆಸರುವಾಸಿಯಾಗಿರುವ ಬಾಂಗ್ಲಾದೇಶ, ಪಾಕಿಸ್ತಾನವನ್ನು ಸೋಲಿಸಿ ಟೂರ್ನಿಯಿಂದಲೇ ಹೊರದಬ್ಬಿದರೂ ಅಚ್ಚರಿಯಿಲ್ಲ. ಬಾಂಗ್ಲಾಕ್ಕೂ ಗೆಲುವು ಅನಿವಾರ‍್ಯವಾಗಿರುವ ಕಾರಣ ಪಂದ್ಯ ಕುತೂಹಲ ಸೃಷ್ಟಿಸಿದೆ.
T20 World Cup ನೆದರ್‌ಲೆಂಡ್ಸ್ ಎದುರು ಸೋತು ಹೊರಬಿದ್ದ ದಕ್ಷಿಣ ಆಫ್ರಿಕಾ, ಟೀಂ ಇಂಡಿಯಾ ಸೆಮೀಸ್‌ಗೆ ಲಗ್ಗೆ..!
ಸದ್ಯ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ತಲಾ 4 ಪಂದ್ಯಗಳನ್ನಾಡಿದ್ದು ಎರಡು ಗೆಲುವು ಹಾಗೂ 2 ಸೋಲುಗಳೊಂದಿಗೆ ತಲಾ 4 ಅಂಕಗಳನ್ನು ಗಳಿಸಿವೆ. ನೆಟ್ ರನ್‌ರೇಟ್ ಆಧಾರದಲ್ಲಿ ಸದ್ಯ ಪಾಕಿಸ್ತಾನ ತಂಡವು 3ನೇ ಸ್ಥಾನದಲ್ಲಿದ್ದು, ಬಾಂಗ್ಲಾದೇಶ ತಂಡವು 5ನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿದ ತಂಡವು ಅಧಿಕೃತವಾಗಿ ಗ್ರೂಪ್ 2 ವಿಭಾಗದಿಂದ ಎರಡನೇ ತಂಡವಾಗಿ ಸೆಮಿಫೈನಲ್‌ಗೆ ಲಗ್ಗೆಯಿಡಲಿದೆ.
ತಂಡಗಳು ಹೀಗಿವೆ ನೋಡಿ
ಪಾಕಿಸ್ತಾನ: ಮೊಹಮ್ಮದ್ ರಿಜ್ವಾನ್(ವಿಕೆಟ್ ಕೀಪರ್), ಬಾಬರ್ ಅಜಂ(ನಾಯಕ), ಮೊಹಮ್ಮದ್ ಹ್ಯಾರಿಸ್, ಶಾನ್ ಮಸೂದ್, ಇಫ್ತಿಕರ್ ಅಹಮದ್, ಮೊಹಮ್ಮದ್ ನವಾಜ್, ಶಾದಾಬ್ ಖಾನ್, ಮೊಹಮ್ಮದ್ ವಾಸೀಂ ಜೂನಿಯರ್, ನಸೀಂ ಶಾ, ಹ್ಯಾರಿಸ್ ರೌಫ್, ಶಾಹೀನ್ ಅಫ್ರಿದಿ.
ಬಾಂಗ್ಲಾದೇಶ: ನಜ್ಮುಲ್ ಹೊಸೈನ್ ಶಾಂಟೋ, ಸೌಮ್ಯ ಸರ್ಕಾರ್, ಲಿಟನ್ ದಾಸ್, ಶಕೀಬ್ ಅಲ್ ಹಸನ್(ನಾಯಕ), ಅಫಿಫ್ ಹೊಸೈನ್, ನೂರುಲ್ ಹಸನ್(ವಿಕೆಟ್ ಕೀಪರ್), ಮೊಸದ್ದೆಕ್ ಹೊಸೈನ್, ಟಸ್ಕಿನ್ ಅಹಮದ್, ನಸುಮ್ ಅಹಮದ್, ಎಬೊದೆತ್ ಹೊಸೈನ್, ಮುಷ್ತಾಫಿಜುರ್ ರೆಹಮಾನ್.