Asianet Suvarna News Asianet Suvarna News

T20 World Cup: ಬಲಿಷ್ಠ ಇಂಗ್ಲೆಂಡ್ ಗೆಲ್ಲಲು ಸಾಧಾರಣ ಗುರಿ ನೀಡಿದ ಬಾಂಗ್ಲಾ

* ಇಂಗ್ಲೆಂಡ್ ಎದುರು ಕೇವಲ 124 ರನ್ ಗಳಿಸಿದ ಬಾಂಗ್ಲಾದೇಶ

* ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ ಅಗ್ರಕ್ರಮಾಂಕದ ಮೂವರು ಬ್ಯಾಟರ್‌ಗಳು

* 3 ವಿಕೆಟ್ ಕಬಳಿಸಿ ಮಿಂಚಿದ ವೇಗಿ ಟೈಮಲ್ ಮಿಲ್ಸ್‌

ICC T20 World Cup Bangladesh Set 125 runs Easy target to England in Abu Dhabi kvn
Author
Abu Dhabi - United Arab Emirates, First Published Oct 27, 2021, 5:28 PM IST

ಅಬುಧಾಬಿ(ಅ.27): ಎಡಗೈ ವೇಗಿ ಟೈಮಲ್ ಮಿಲ್ಸ್ (Tymal Mills), ಮೋಯಿನ್ ಅಲಿ (Moeen Ali) ಹಾಗೂ ಲಿಯಾಮ್ ಲಿವಿಂಗ್‌ಸ್ಟೋನ್‌ (Liam Livingstone) ಮಾರಕ ದಾಳಿಗೆ ತತ್ತರಿಸಿದ ಬಾಂಗ್ಲಾದೇಶ ತಂಡವು 9 ವಿಕೆಟ್ ಕಳೆದುಕೊಂಡು ಕೇವಲ 124 ರನ್‌ ಬಾರಿಸಿದ್ದು, ಇಂಗ್ಲೆಂಡ್‌ ಗೆಲ್ಲಲು ಸಾಧಾರಣ ಗುರಿ ನೀಡಿದೆ.

ಟಾಸ್ ಗೆದ್ದ ಬಾಂಗ್ಲಾದೇಶ ತಂಡವು (Bangladesh Cricket Team) ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಪಂದ್ಯದ ಮೂರನೇ ಓವರ್‌ನಲ್ಲೇ ಮೋಯಿನ್ ಅಲಿ ಸತತ ಎರಡು ಎಸೆತಗಳಲ್ಲಿ 2 ವಿಕೆಟ್‌ ಕಬಳಿಸುವ ಮೂಲಕ ಬಾಂಗ್ಲಾದೇಶಕ್ಕೆ ಆರಂಭಿಕ ಶಾಕ್ ನೀಡಿದರು. ಬಾಂಗ್ಲಾ ಆರಂಭಿಕ ಬ್ಯಾಟ್ಸ್‌ಮನ್ ಲಿಟನ್ ದಾಸ್ 9 ರನ್‌ ಬಾರಿಸಿದರೆ, ಮತ್ತೋರ್ವ ಆರಂಭಿಕ ಬ್ಯಾಟ್ಸ್‌ಮನ್‌ ಮೊಹಮ್ಮದ್ ನಯೀಮ್‌ ಆಟ 5ಕ್ಕೆ ಸೀಮಿತವಾಯಿತು. ಇನ್ನು ಶಕೀಬ್ ಅಲ್ ಹಸನ್ (Shakib Al Hasan) ಕೂಡಾ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಶಕೀಬ್ 7 ಎಸೆತಗಳನ್ನು ಎದುರಿಸಿ ಕೇವಲ 4 ರನ್ ಬಾರಿಸಿ ಕ್ರಿಸ್‌ ವೋಕ್ಸ್‌ಗೆ ವಿಕೆಟ್‌ ಒಪ್ಪಿಸಿದರು. ಈ ವೇಳೆ ಬಾಂಗ್ಲಾ 5.2 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 26 ರನ್‌ ಬಾರಿಸಿತ್ತು.

ಕೊಂಚ ಆಸರೆಯಾದ ಮುಷ್ಫಿಕುರ್-ಮೊಹಮದುಲ್ಲಾ: ಒಂದು ಹಂತದಲ್ಲಿ ಸತತ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಬಾಂಗ್ಲಾದೇಶಕ್ಕೆ ಮಧ್ಯಮ ಕ್ರಮಾಂಕದಲ್ಲಿ ಅನುಭವಿ ಬ್ಯಾಟರ್‌ ಮುಷ್ಫಿಕುರ್ ರಹೀಮ್ (Mushfiqur Rahim) ಹಾಗೂ ಮೊಹಮದುಲ್ಲಾ ಆಸರೆಯಾದರು. ಈ ಜೋಡಿ ನಾಲ್ಕನೇ ವಿಕೆಟ್‌ಗೆ 37 ರನ್‌ಗಳ ಅಲ್ಪ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಮುಷ್ಫಿಕುರ್ 29 ರನ್ ಬಾರಿಸಿ ಲಿಯಾಮ್ ಲಿವಿಂಗ್‌ಸ್ಟೋನ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಇನ್ನು ಮೊಹಮದುಲ್ಲಾಗೂ ಲಿವಿಂಗ್‌ಸ್ಟೋನ್ ಪೆವಿಲಿಯನ್ ಹಾದಿ ತೋರಿಸಿದರು. ಬಾಂಗ್ಲಾ ನಾಯಕ ಮೊಹಮದುಲ್ಲಾ 24 ಎಸೆತಗಳನ್ನು ಎದುರಿಸಿ 19 ರನ್‌ ಗಳಿಸಿ ವಿಕೆಟ್ ಒಪ್ಪಿಸಿದರು.

T20 World Cup: ಇಂಗ್ಲೆಂಡ್ ಎದುರು ಟಾಸ್ ಗೆದ್ದ ಬಾಂಗ್ಲಾದೇಶ ಬ್ಯಾಟಿಂಗ್‌ ಆಯ್ಕೆ

ರನ್ ಕಾಣಿಕೆ ನೀಡಿದ ಬಾಲಂಗೋಚಿಗಳು: ಬಾಂಗ್ಲಾದೇಶ ಕ್ರಿಕೆಟ್ ತಂಡದ ಕೆಳ ಕ್ರಮಾಂಕದ ಬ್ಯಾಟರ್‌ಗಳು ಉಪಯುಕ್ತ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾದರು. ಅದರಲ್ಲೂ ವಿಕೆಟ್ ಕೀಪರ್ ಬ್ಯಾಟರ್ ನುರುಲ್ ಹಸನ್ 16 ರನ್‌ ಬಾರಿಸಿದರೆ, ಮೆಹದಿ ಹಸನ್ 11 ರನ್ ಗಳಿಸಿದರು. ಇನ್ನು ನಸುಮ್ ಅಹಮ್ಮದ್ 9 ಎಸೆತಗಳಲ್ಲಿ 1 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ಅಜೇಯ 19 ರನ್‌ಗಳಿಸುವ ಮೂಲಕ ತಂಡದ ಮೊತ್ತವನ್ನು 120ರ ಗಡಿ ದಾಟಿಸಿದರು. 

ಇಂಗ್ಲೆಂಡ್ ತಂಡದ ಪರ ಟೈಮಲ್ ಮಿಲ್ಸ್‌ 3 ವಿಕೆಟ್ ಪಡೆದರೆ, ಮೋಯಿನ್ ಅಲಿ ಹಾಗೂ ಲಿಯಾಮ್ ಲಿವಿಂಗ್‌ಸ್ಟೋನ್ ತಲಾ 2 ವಿಕೆಟ್ ಪಡೆದರು. ಇನ್ನು ಕ್ರಿಸ್‌ ವೋಕ್ಸ್‌ ಒಂದು ವಿಕೆಟ್ ಪಡೆದರು.

ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಬಾಂಗ್ಲಾದೇಶ ಹಾಗೂ ಇಂಗ್ಲೆಂಡ್ ಕ್ರಿಕೆಟ್ ತಂಡಗಳು ಸೆಣಸಾಟ ನಡೆಸುತ್ತಿವೆ. ಈ ಹಿಂದಿನ ಹಲವು ಪಂದ್ಯಗಳಲ್ಲಿ ಬಲಿಷ್ಠ ತಂಡಗಳಿಗೆ ಸೋಲಿನ ಶಾಕ್ ನೀಡಿರುವ ಮೊಹಮದುಲ್ಲಾ ನೇತೃತ್ವದ ಬಾಂಗ್ಲಾದೇಶ ಕ್ರಿಕೆಟ್ ತಂಡವು ಈ ಅಲ್ಪ ಮೊತ್ತವನ್ನು ರಕ್ಷಿಸಿಕೊಳ್ಳಲಿದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.

ಸಂಕ್ಷಿಪ್ತ ಸ್ಕೋರ್:

ಬಾಂಗ್ಲಾದೇಶ: 124/9

ಮುಷ್ಫಿಕುರ್ ರಹೀಮ್: 30

ಟೈಮಲ್ ಮಿಲ್ಸ್‌: 27/3

Follow Us:
Download App:
  • android
  • ios