Asianet Suvarna News Asianet Suvarna News

T20 World Cup: ಸೂಪರ್ 12 ಸುತ್ತಿಗೆ ಬಾಂಗ್ಲಾದೇಶ, ಸ್ಕಾಟ್ಲೆಂಡ್ ಲಗ್ಗೆ

* ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೂಪರ್ 12 ಹಂತಕ್ಕೇರಿದ ಬಾಂಗ್ಲಾ, ಸ್ಕಾಟ್ಲೆಂಡ್‌

* ಆಲ್ರೌಂಡ್ ಪ್ರದರ್ಶನ ತೋರಿದ ಬಾಂಗ್ಲಾದ ಅನುಭವಿ ಆಟಗಾರ ಶಕೀಬ್ ಅಲ್ ಹಸನ್

* ಅರ್ಹತಾ ಸುತ್ತಿನಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಬಾಂಗ್ಲಾದೇಶ

ICC T20 World Cup Bangladesh and Scotland qualified for Super 12 Stage kvn
Author
Oman, First Published Oct 22, 2021, 8:32 AM IST
  • Facebook
  • Twitter
  • Whatsapp

ಒಮಾನ್(‌ಮಾ.22): ಐಸಿಸಿ ಟಿ20 ವಿಶ್ವಕಪ್‌ನ (ICC T20 World Cup) ಸೂಪರ್‌-12 ಹಂತಕ್ಕೆ ಮೂರು ತಂಡಗಳು ಪ್ರವೇಶ ಖಚಿತಪಡಿಸಿಕೊಂಡಿವೆ. ಇನ್ನೊಂದು ತಂಡ ಮುನ್ನಡೆಯುವುದು ಬಾಕಿ ಇದೆ. ಬುಧವಾರ ‘ಎ’ ಗುಂಪಿನಿಂದ ಶ್ರೀಲಂಕಾ ಕ್ರಿಕೆಟ್ ತಂಡ (Sri Lanka Cricket) ಸೂಪರ್‌-12ಗೆ ಲಗ್ಗೆಯಿಟ್ಟಿತ್ತು. ಶುಕ್ರವಾರ ಬಾಂಗ್ಲಾದೇಶ (Bangladesh) ಹಾಗೂ ಸ್ಕಾಟ್ಲೆಂಟ್‌ (Scotland) ತಂಡಗಳು ಪ್ರಧಾನ ಸುತ್ತಿಗೆ ಅರ್ಹತೆ ಪಡೆದವು.

ಶುಕ್ರವಾರದ ನಮೀಬಿಯಾ (Namibia)-ಐರ್ಲೆಂಡ್‌ (Ireland) ನಡುವಿನ ಪಂದ್ಯದಲ್ಲಿ ಗೆಲ್ಲುವ ತಂಡ 4ನೇ ತಂಡವಾಗಿ ಸೂಪರ್‌-12ಗೆ ಲಗ್ಗೆ ಇಡಲಿದೆ. ‘ಎ’ ಗುಂಪಿನಿಂದ ನೆದರ್‌ಲೆಂಡ್ಸ್‌, ‘ಬಿ’ ಗುಂಪಿನಿಂದ ಪಪುವಾ ನ್ಯೂಗಿನಿ ಈಗಾಗಲೇ ಸೂಪರ್‌-12ರ ರೇಸ್‌ನಿಂದ ಹೊರಬಿದ್ದಿವೆ. ಗುರುವಾರ ಪುಪುವಾ ನ್ಯೂಗಿನಿ ವಿರುದ್ಧ 84 ರನ್‌ಗಳಿಂದ ಭರ್ಜರಿಯಾಗಿ ಗೆದ್ದ ಬಾಂಗ್ಲಾ ಸೂಪರ್‌-12ರ ಸುತ್ತು ಪ್ರವೇಶಿಸಿತು. ಬಾಂಗ್ಲಾ ಮೊದಲ ಪಂದ್ಯದಲ್ಲಿ ಸ್ಕಾಟ್ಲೆಂಡ್‌ ವಿರುದ್ಧ ಆಘಾತಕಾರಿ ಸೋಲುಂಡರೂ ಬಳಿಕ ಒಮಾನ್‌, ನ್ಯೂಗಿನಿ ವಿರುದ್ಧ ಗೆಲ್ಲುವಲ್ಲಿ ಯಶಸ್ವಿಯಾಯಿತು. ಗುರುವಾರ ಮೊದಲು ಬ್ಯಾಟ್‌ ಮಾಡಿದ ಬಾಂಗ್ಲಾ 7 ವಿಕೆಟ್‌ ನಷ್ಟಕ್ಕೆ 181 ರನ್‌ ಗಳಿಸಿತು. ನಾಯಕ ಮಹ್ಮೂದುಲ್ಲಾ 50(28 ಎಸೆತ), ಶಕೀಬ್‌ ಅಲ್ ಹಸನ್‌ 46 ರನ್‌ ಸಿಡಿಸಿದರು. 

T20 World Cup: 2 ಸ್ಥಾನಗಳಿಗಿಂದು 3 ತಂಡಗಳ ನಡುವೆ ಫೈಟ್‌!

ಕಠಿಣ ಗುರಿ ಬೆನ್ನತ್ತಿದ ನ್ಯೂಗಿನಿ 27 ರನ್‌ ಗಳಿಸುವಾಗಲೇ 7 ವಿಕೆಟ್‌ ಕಳೆದುಕೊಂಡಿತ್ತು. ಬಳಿಕ 19.3 ಓವರಲ್ಲಿ 97 ರನ್‌ಗೆ ಆಲೌಟಾಗಿ  ಸೋಲೊಪ್ಪಿಕೊಂಡಿತು. ಬೌಲಿಂಗ್‌ನಲ್ಲೂ ಮಿಂಚಿದ ಶಕೀಬ್‌ ಕೇವಲ 9 ರನ್‌ ನೀಡಿ 4 ವಿಕೆಟ್‌ ಕಿತ್ತರು. ಒಮಾನ್ ವಿರುದ್ದವೂ ಆಲ್ರೌಂಡ್‌ ಪ್ರದರ್ಶನ ತೋರುವ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿ ಬಾಚಿಕೊಂಡಿದ್ದ ಶಕೀಬ್‌ ಅಲ್ ಹಸನ್‌, ಪಪುವಾ ನ್ಯೂಗಿನಿ ವಿರುದ್ದ ಗೆಲ್ಲಲೇಬೇಕಾದ ಪಂದ್ಯದಲ್ಲಿ ಮತ್ತೊಮ್ಮೆ ಅಮೋಘ ಪ್ರದರ್ಶನ ತೋರುವ ಮೂಲಕ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಶಾಹಿದ್ ಅಫ್ರಿದಿ ದಾಖಲೆ ಸರಿಗಟ್ಟಿದ ಶಕೀಬ್ ಅಲ್ ಹಸನ್‌: ಹೌದು, ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಶಕೀಬ್ ಅಲ್‌ ಹಸನ್‌ (Shakib Al Hasan) ಮಿಂಚಿನ ಬೌಲಿಂಗ್ ಪ್ರದರ್ಶನ ಮತ್ತೊಮ್ಮೆ ಮುಂದುವರೆದಿದೆ. ಒಮಾನ್ (Oman) ವಿರುದ್ದ 3 ವಿಕೆಟ್‌ ಕಬಳಿಸಿದ್ದ ಶಕೀಬ್, ಇದೀಗ ಪಪುವಾ ನ್ಯೂಗಿನಿ ವಿರುದ್ದ 4 ವಿಕೆಟ್‌ ಕಬಳಿಸುವುದರೊಂದಿಗೆ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನಕ್ಕೇರಿದ್ದಾರೆ. ಈ ಮೊದಲು ಪಾಕಿಸ್ತಾನದ ಶಾಹಿದ್ ಅಫ್ರಿದಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ 39 ವಿಕೆಟ್ ಕಬಳಿಸಿದ್ದರು. ಇದೀಗ ಶಕೀಬ್ ಸಹಾ 39 ವಿಕೆಟ್ ಕಬಳಿಸುವ ಮೂಲಕ ಅಫ್ರಿದಿ ದಾಖಲೆ ಸರಿಗಟ್ಟಿದ್ದಾರೆ. ಸೂಪರ್ 12 ಹಂತದಲ್ಲಿ ಶಕೀಬ್ ಇನ್ನೂ ಕನಿಷ್ಠ 5 ಪಂದ್ಯಗಳನ್ನು ಆಡಲಿದ್ದು, ವಿಶ್ವದಾಖಲೆ ಬರೆಯಲು ಸಜ್ಜಾಗಿದ್ದಾರೆ.

ಒಮಾನ್ ಎದುರು ಸ್ಕಾಟ್ಲೆಂಡ್‌ಗೆ 8 ವಿಕೆಟ್‌ ಜಯ

ಗುರುವಾರ ನಡೆದ 2ನೇ ಪಂದ್ಯದಲ್ಲಿ ಸ್ಕಾಟ್ಲೆಂಡ್‌ ತಂಡ ಒಮಾನ್‌ ವಿರುದ್ಧ 8 ವಿಕೆಟ್‌ಗಳ ಗೆಲುವು ಸಾಧಿಸಿತು. ಅರ್ಹತಾ ಸುತ್ತಿನಲ್ಲಿ ಹ್ಯಾಟ್ರಿಕ್‌ ಗೆಲುವಿನೊಂದಿಗೆ ‘ಬಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಸೂಪರ್‌-12 ಹಂತ ಪ್ರವೇಶಿಸಿತು. 

ಮೊದಲ ಪಂದ್ಯದಲ್ಲಿ ಬಾಂಗ್ಲಾಗೆ ಶಾಕ್‌ ನೀಡಿ ಕ್ರೀಡಾಭಿಮಾನಿಗಳ ಮನಗೆದ್ದಿದ್ದ ಸ್ಕಾಟ್ಲೆಂಡ್‌, 2ನೇ ಪಂದ್ಯದಲ್ಲಿ ಪಪುವಾ ನ್ಯೂಗಿನಿ ವಿರುದ್ಧ ಜಯಿಸಿತ್ತು. ಗುರುವಾರ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಒಮಾನ್‌ 20 ಓವರಲ್ಲಿ 122 ರನ್‌ ಗಳಿಸಿ ಆಲೌಟ್‌ ಆಯಿತು. ಆಖಿಬ್‌ ಇಲ್ಯಾಸ್‌ 37, ನಾಯಕ ಮಖ್ಸೂದ್‌ 34 ರನ್‌ ಬಾರಿಸಿದರು. ಎಚ್ಚರಿಕಯೆ ಆಟವಾಡಿದ ಸ್ಕಾಟ್ಲೆಂಡ್‌ 17 ಓವರಲ್ಲಿ 2 ವಿಕೆಟ್‌ ಕಳೆದುಕೊಂಡು ಗೆಲುವು ಸಾಧಿಸಿತು. ನಾಯಕ ಕೈಲ್‌ ಕೋಟ್ಜಿ 41 ರನ್‌ ಗಳಿಸಿದರು.

Follow Us:
Download App:
  • android
  • ios