* ಟಿ20 ವಿಶ್ವಕಪ್‌ ಅರ್ಹತಾ ಸುತ್ತಿನಲ್ಲಿಂದು ಮಹತ್ವದ ಪಂದ್ಯಗಳು ನಡೆಯಲಿವೆ* ಸೂಪರ್ 12 ಹಂತಕ್ಕೇರಲು 2 ಸ್ಥಾನಕ್ಕಾಗಿ 3 ತಂಡಗಳ ನಡುವೆ ಪೈಪೋಟಿ* ಸ್ಕಾಟ್ಲೆಂಡ್‌, ಬಾಂಗ್ಲಾದೇಶ ಹಾಗೂ ಒಮಾನ್‌ ತಂಡಗಳ ನಡುವೆ ಫೈಟ್

ಅಲ್‌ ಅಮೆರತ್(ಅ.21)‌: ಐಸಿಸಿ ಟಿ20 ವಿಶ್ವಕಪ್‌ನ (ICC T20 World Cup) ಅರ್ಹತಾ ಸುತ್ತಿನ ‘ಬಿ’ ಗುಂಪಿನಿಂದ ಸೂಪರ್‌-12 ಹಂತಕ್ಕೆ ಪ್ರವೇಶಿಸಲು 3 ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಗುಂಪಿನಿಂದ 2 ತಂಡಗಳು ಮಾತ್ರ ಸೂಪರ್‌-12 ಹಂತಕ್ಕೆ ಪ್ರವೇಶಿಸಬಹುದಾಗಿದ್ದು, ಸ್ಕಾಟ್ಲೆಂಡ್‌, ಒಮಾನ್‌ ಹಾಗು ಬಾಂಗ್ಲಾದೇಶ ಕ್ರಿಕೆಟ್ ತಂಡಗಳು(Bangladesh Cricket Team) ರೇಸ್‌ನಲ್ಲಿವೆ. 

ಗುರುವಾರ ಸ್ಕಾಟ್ಲೆಂಡ್‌ಗೆ ಒಮಾನ್‌ (Oman) ಎದುರಾಗಲಿದ್ದು, ಬಾಂಗ್ಲಾದೇಶಕ್ಕೆ ಪಪುವಾ ನ್ಯೂಗಿನಿ (papua new guinea) ಸವಾಲೆಸೆಯಲಿದೆ. ಸ್ಕಾಟ್ಲೆಂಡ್‌(scotland) ಆಡಿರುವ ಎರಡೂ ಪಂದ್ಯಗಳಲ್ಲಿ ಗೆದ್ದು ಗುಂಪಿನಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಒಮಾನ್‌ ಹಾಗೂ ಬಾಂಗ್ಲಾ ತಲಾ ಒಂದು ಜಯದೊಂದಿಗೆ ಕ್ರಮವಾಗಿ 2 ಹಾಗೂ 3ನೇ ಸ್ಥಾನದಲ್ಲಿವೆ. ನ್ಯೂಗಿನಿ ವಿರುದ್ಧ ದೊಡ್ಡ ಜಯದೊಂದಿಗೆ ಬಾಂಗ್ಲಾ ನೆಟ್‌ ರನ್‌ರೇಟ್‌ ಉತ್ತಮಪಡಿಸಿಕೊಳ್ಳುವ ಗುರಿ ಹೊಂದಿದೆ. ಸ್ಕಾಟ್ಲೆಂಡ್‌ ಉತ್ತಮ ಲಯದಲ್ಲಿದ್ದು, ಹ್ಯಾಟ್ರಿಕ್‌ ಜಯದೊಂದಿಗೆ ಸೂಪರ್‌-12ಗೇರುವ ನೆಚ್ಚಿನ ತಂಡ ಎನಿಸಿದೆ.

ನನ್ನ ಕುಟುಂಬ ಎರಡು ತಂಡಗಳನ್ನು ಬೆಂಬಲಿಸಬೇಕು : ಹೀಗೆಂದ ಭಾರತೀಯ ಮೂಲದ ಒಮನ್ ಆಟಗಾರ ಯಾರು?

ಒಂದು ವೇಳೆ ಮೊದಲ ಪಂದ್ಯದಲ್ಲಿ ಪಪುವಾ ನ್ಯೂಗಿನಿ ಎದುರು ಬಾಂಗ್ಲಾದೇಶ ಗೆದ್ದು, ಎರಡನೇ ಪಂದ್ಯದಲ್ಲಿ ಒಮಾನ್ ವಿರುದ್ದ ಸ್ಕಾಟ್ಲೆಂಡ್ ಗೆಲುವು ಸಾಧಿಸಿದರೆ, ಬಾಂಗ್ಲಾದೇಶ ಹಾಗೂ ಸ್ಕಾಟ್ಲೆಂಡ್ ತಂಡಗಳು ಅನಾಯಾಸವಾಗಿ ಸೂಪರ್ 12 ಹಂತ ಪ್ರವೇಶಿಸಲಿವೆ. ಇನ್ನೂ ಬಾಂಗ್ಲಾದೇಶ ಸೋತು, ಸ್ಕಾಟ್ಲೆಂಡ್ ಎದುರು ಒಮಾನ್ ಗೆಲುವು ದಾಖಲಿಸಿದರೆ, ಸ್ಕಾಟ್ಲೆಂಡ್ ಹಾಗೂ ಒಮಾನ್ ತಂಡಗಳು ಸೂಪರ್ 12 ಹಂತಕ್ಕೆ ಲಗ್ಗೆಯಿಡಲಿವೆ.

ಪಂದ್ಯ: ಬಾಂಗ್ಲಾ-ನ್ಯೂಗಿನಿ, ಮಧ್ಯಾಹ್ನ 3.30ಕ್ಕೆ. 
ಸ್ಕಾಟ್ಲೆಂಡ್‌-ಒಮಾನ್‌, ಸಂಜೆ 7.30ಕ್ಕೆ

ಟಿ20 ವಿಶ್ವಕಪ್‌: ಸೂಪರ್‌-12 ಸುತ್ತಿಗೆ ಪ್ರವೇಶಿಸಿದ ಶ್ರೀಲಂಕಾ

ಅಬು ಧಾಬಿ: ಅರ್ಹತಾ ಸುತ್ತಿನ ಪಂದ್ಯದಲ್ಲಿ ಐರ್ಲೆಂಡ್‌ ವಿರುದ್ಧ 70 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದ ಮಾಜಿ ಚಾಂಪಿಯನ್‌ ಶ್ರೀಲಂಕಾ ಟಿ20 ವಿಶ್ವಕಪ್‌ನ ಸೂಪರ್‌-12 ಸುತ್ತು ಪ್ರವೇಶಿಸಿದೆ. 

ಅರ್ಹತಾ ಸುತ್ತಿನಿಂದ ಪ್ರಧಾನ ಸುತ್ತಿಗೇರಿದ ಮೊದಲ ತಂಡ ಎನಿಸಿಕೊಂಡಿದೆ. ಐರ್ಲೆಂಡ್‌ ಪ್ರಧಾನ ಸುತ್ತು ಪ್ರವೇಶಿಸಲು ನಮೀಬಿಯಾ ವಿರುದ್ಧ ಗೆಲ್ಲಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಶ್ರೀಲಂಕಾದ ಗೆಲುವಿನೊಂದಿಗೆ ನೆದರ್‌ಲೆಂಡ್ಸ್‌ ಸೂಪರ್‌-12 ರೇಸ್‌ನಿಂದ ಹೊರಬಿದ್ದಿದೆ.

ಬುಧವಾರ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಲಂಕಾ 8 ರನ್‌ಗೆ 3 ವಿಕೆಟ್‌ ಕಳೆದುಕೊಂಡರೂ ಬಳಿಕ ಚೇತರಿಸಿ 7 ವಿಕೆಟ್‌ ನಷ್ಟಕ್ಕೆ 171 ರನ್‌ ಗಳಿಸಿತು. ವನಿಂಡು ಹಸರಂಗ 47 ಎಸೆತದಲ್ಲಿ 71 ರನ್‌ ಬಾರಿಸಿದರೆ, ಪಥುಮ್‌ ನಿಸ್ಸಂಕಾ 61(47 ಎಸೆತ) ರನ್‌ ಸಿಡಿಸಿದರು. ಜೋಶ್‌ ಲಿಟ್ಲ್‌ 23 ರನ್‌ಗೆ 4 ವಿಕೆಟ್‌ ಪಡೆದರು. ದೊಡ್ಡ ಗುರಿ ಬೆನ್ನತ್ತಿದ ಐರ್ಲೆಂಡ್‌ 18.3 ಓವರಲ್ಲಿ 101 ರನ್‌ಗೆ ಅಲೌಟಾಗಿ ಸೋಲೊಪ್ಪಿಕೊಂಡಿತು. ಮಹೀಶ್‌ ಥೀಕ್ಷಣ 3 ವಿಕೆಟ್‌ ಕಬಳಿಸಿದರು

ಟಿ20 ವಿಶ್ವಕಪ್‌: ನಮೀಬಿಯಾ ಸೂಪರ್‌-12 ಆಸೆ ಜೀವಂತ

ಅಬುಧಾಬಿ: ಡೇವಿಡ್‌ ವೀಸಾ ಅವರ ಸ್ಫೋಟಕ ಆಟದ ನೆರವಿನಿಂದ ಐಸಿಸಿ ಟಿ20 ವಿಶ್ವಕಪ್‌ನ ಅರ್ಹತಾ ಸುತ್ತಿನ ‘ಎ’ ಗುಂಪಿನ ಪಂದ್ಯದಲ್ಲಿ ನೆದರ್‌ಲೆಂಡ್ಸ್‌ ವಿರುದ್ಧ ಗೆದ್ದ ನಮೀಬಿಯಾ, ಸೂಪರ್‌-12 ಹಂತ ಪ್ರವೇಶಿಸುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ನೆದರ್‌ಲೆಂಡ್ಸ್‌ ಸತತ 2ನೇ ಸೋಲು ಅನುಭವಿಸಿ ಟೂರ್ನಿಯಿಂದ ಹೊರಬೀಳುವ ಆತಂಕಕ್ಕೀಡಾಗಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಅರ್ಧಶತಕ ಸಿಡಿಸಿದ ವೀಸಾ, 40 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರ್‌ನೊಂದಿಗೆ ಅಜೇಯ 66 ರನ್‌ ಗಳಿಸಿದರು. 165 ರನ್‌ ಗುರಿಯನ್ನು 19 ಓವರಲ್ಲಿ ಬೆನ್ನತ್ತಿದ ನಮೀಬಿಯಾ ಟಿ20 ವಿಶ್ವಕಪ್‌ನಲ್ಲಿ ಚೊಚ್ಚಲ ಗೆಲುವು ದಾಖಲಿಸಿತು. ಮ್ಯಾಕ್ಸ್‌ ಓ’ಡೌಡ್‌ರ 70 ರನ್‌ಗಳ ಆಟದ ನೆರವಿನಿಂದ ನೆದರ್‌ಲೆಂಡ್ಸ್‌ 4 ವಿಕೆಟ್‌ಗೆ 164 ರನ್‌ ಗಳಿಸಿತ್ತು.