T20 World Cup ಆಸೀಸ್ ಎದುರು ಟಾಸ್ ಗೆದ್ದ ಆಫ್ಘಾನಿಸ್ತಾನ ಬೌಲಿಂಗ್ ಆಯ್ಕೆ, ಕಾಂಗರೂ ಪಡೆಯಲ್ಲಿ 3 ಬದಲಾವಣೆ
ಅಡಿಲೇಡ್ ಓವಲ್ ಮೈದಾನದಲ್ಲಿ ಆಸ್ಟ್ರೇಲಿಯಾ-ಆಫ್ಘಾನಿಸ್ತಾನ ಮುಖಾಮುಖಿ
ಟಾಸ್ ಗೆದ್ದ ಆಫ್ಘಾನಿಸ್ತಾನ ಮೊದಲು ಬೌಲಿಂಗ್ ಆಯ್ಕೆ
ಆಸ್ಟ್ರೇಲಿಯಾ ತಂಡದಲ್ಲಿ ಮೂರು ಮಹತ್ವದ ಬದಲಾವಣೆ
ಅಡಿಲೇಡ್(ನ.04): ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ 38ನೇ ಪಂದ್ಯದಲ್ಲಿಂದು ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಹಾಗೂ ಆಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಆಫ್ಘಾನಿಸ್ತಾನ ತಂಡದ ನಾಯಕ ಮೊಹಮ್ಮದ್ ನಬಿ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಆಸ್ಟ್ರೇಲಿಯಾ ತಂಡದಲ್ಲಿ ಮೂರು ಮಹತ್ವದ ಬದಲಾವಣೆ ಮಾಡಲಾಗಿದೆ.
ಆಸ್ಟ್ರೇಲಿಯಾ ಹಾಗೂ ಆಫ್ಘಾನಿಸ್ತಾನ ತಂಡಗಳ ನಡುವಿನ ಪಂದ್ಯಕ್ಕೆ ಇಲ್ಲಿನ ಅಡಿಲೇಡ್ ಓವಲ್ ಮೈದಾನ ಆತಿಥ್ಯವನ್ನು ವಹಿಸಿದೆ. ಸ್ನಾಯು ಸೆಳೆತಕ್ಕೆ ಒಳಗಾಗಿರುವ ಆಸ್ಟ್ರೇಲಿಯಾ ತಂಡದ ನಾಯಕ ಆ್ಯರೋನ್ ಫಿಂಚ್ ಹೊರಬಿದ್ದಿದ್ದು, ಫಿಂಚ್ ಬದಲಿಗೆ ವಿಕೆಟ್ ಕೀಪರ್ ಬ್ಯಾಟರ್ ಮ್ಯಾಥ್ಯೂ ವೇಡ್, ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಲಿದ್ದಾರೆ. ಕಳೆದ ಪಂದ್ಯದಲ್ಲಿ ಆ್ಯರೋನ್ ಫಿಂಚ್, ಐರ್ಲೆಂಡ್ ವಿರುದ್ದ ಅದ್ಭುತ ಪ್ರದರ್ಶನ ತೋರುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಇನ್ನು ಮಿಚೆಲ್ ಸ್ಟಾರ್ಕ್ ಹಾಗೂ ಟಿಮ್ ಡೇವಿಡ್ ಕೂಡಾ ಆಸೀಸ್ ತಂಡದಿಂದ ಹೊರಬಿದ್ದಿದ್ದು, ಕೇನ್ ರಿಚರ್ಡ್‌ಸನ್, ಕ್ಯಾಮರೋನ್ ಗ್ರೀನ್ ಹಾಗೂ ಸ್ಟೀವ್ ಸ್ಮಿತ್ ತಂಡ ಕೂಡಿಕೊಂಡಿದ್ದಾರೆ.
T20 World Cup: ಐರ್ಲೆಂಡ್ ಹಣಿದು ಮೊದಲ ತಂಡವಾಗಿ ಸೆಮೀಸ್‌ಗೆ ಲಗ್ಗೆಯಿಟ್ಟ ಕಿವೀಸ್..!
ಆಸ್ಟ್ರೇಲಿಯಾ ತಂಡದ ಪರ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಬ್ಯಾಟಿಂದ ನಿರೀಕ್ಷಿತ ಪ್ರಮಾಣದ ರನ್ ಬರದೇ ಇರುವುದು ತಲೆನೋವು ಹೆಚ್ಚುವಂತೆ ಮಾಡಿದೆ. ಕಳೆದ ವರ್ಷ ನಡೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದ ಡೇವಿಡ್ ವಾರ್ನರ್, ಈ ಬಾರಿ ನಾಲ್ಕು ಪಂದ್ಯಗಳಿಂದ ಕೇವಲ 23 ರನ್ ಗಳನ್ನಷ್ಟೇ ಬಾರಿಸಿದ್ದು, 11 ರನ್ ಈ ಬಾರಿಯ ಟೂರ್ನಿಯಲ್ಲಿ ವಾರ್ನರ್ ಗಳಿಸಿದ ಗರಿಷ್ಠ ಸ್ಕೋರ್ ಎನಿಸಿಕೊಂಡಿದೆ.
ಈ ಬಾರಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯ ಗೆಲ್ಲದ ಏಕೈಕ ತಂಡ ಎನ್ನುವ ಕುಖ್ಯಾತಿಗೆ ಒಳಗಾಗಿರುವ ಆಫ್ಘಾನಿಸ್ತಾನ ತಂಡವು, ಇದೀಗ ಆತಿಥೇಯರಿಗೆ ಶಾಕ್ ನೀಡಿ, ಟೂರ್ನಿಯಲ್ಲಿ ಗೆಲುವಿನೊಂದಿಗೆ ಅಭಿಯಾನ ಮುಗಿಸುವ ಲೆಕ್ಕಾಚಾರದಲ್ಲಿದೆ. ಇನ್ನು ಬಿಗ್‌ಬ್ಯಾಶ್ ಲೀಗ್‌ನಲ್ಲಿ ಅಡಿಲೇಡ್ ಪಿಚ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಲೆಗ್ ಸ್ಪಿನ್ನರ್ ರಶೀದ್ ಖಾನ್, ಕಾಂಗರೂ ಪಡೆಗೆ ಶಾಕ್ ನೀಡಲು ಎದುರು ನೋಡುತ್ತಿದ್ದಾರೆ. ಮೊದಲೇ ದೊಡ್ಡ ಅಂತರದ ಗೆಲುವಿನ ಒತ್ತಡದಲ್ಲಿರುವ ಆಸ್ಟ್ರೇಲಿಯಾ ತಂಡವು, ಯುವ ಆಟಗಾರರನ್ನೊಳಗೊಂಡ ಆಫ್ಘಾನಿಸ್ತಾನ ಎದುರಿನ ಸವಾಲನ್ನು ಮೆಟ್ಟಿ ನಿಲ್ಲುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
ತಂಡಗಳು ಹೀಗಿವೆ ನೋಡಿ
ಆಸ್ಟ್ರೇಲಿಯಾ: ಕ್ಯಾಮರೋನ್ ಗ್ರೀನ್, ಡೇವಿಡ್ ವಾರ್ನರ್, ಮಿಚೆಲ್ ಮಾರ್ಶ್, ಸ್ಟೀವ್ ಸ್ಮಿತ್ ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೋನಿಸ್, ಮ್ಯಾಥ್ಯೂ ವೇಡ್(ವಿಕೆಟ್ ಕೀಪರ್&(ನಾಯಕ), ಪ್ಯಾಟ್ ಕಮಿನ್ಸ್, ಕೇನ್ ರಿಚರ್ಡ್‌ಸನ್, ಆಡಂ ಜಂಪಾ, ಜೋಶ್ ಹೇಜಲ್‌ವುಡ್.
ಆಫ್ಘಾನಿಸ್ತಾನ: ಗುಲ್ಬದ್ದೀನ್ ನೈಬ್, ರೆಹಮನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್, ಉಸ್ಮಾನ್ ಘನಿ, ನಜಿಬುಲ್ಲಾ ಜದ್ರಾನ್, ಮೊಹಮ್ಮದ್ ನಬಿ, ಅಜ್ಮತುಲ್ಲಾ ಒಮರ್‌ಝೈ, ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್, ಫರೀದ್ ಅಹಮ್ಮದ್, ಫಜಲ್‌ಹಕ್ ಪಾರೂಕಿ.
ಪಂದ್ಯ ಆರಂಭ: ಮಧ್ಯಾಹ್ನ 1:30
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಹಾಟ್‌ಸ್ಟಾರ್