ಐಸಿಸಿ ಉದ್ಘಾಟನಾ ಪಂದ್ಯದಲ್ಲೇ ಶ್ರೀಲಂಕಾಗೆ ಸವಾಲಿನ ಗುರಿ ನೀಡಿದ ನಮೀಬಿಯಾಟಾಸ್ ಸೋತು ಬ್ಯಾಟಿಂಗ್ ಮಾಡಿದ ನಮೀಬಿಯಾ 7 ವಿಕೆಟ್ ಕಳೆದುಕೊಂಡು 163 ರನ್ ಗಳಿಸಿದೆಜಾನ್ ಪ್ರೈಲಿಂಕ್ ಹಾಗೂ ಜೆಜೆ ಸ್ಮಿತ್ ಆಕರ್ಷಕ ಜತೆಯಾಟ
ಗೀಲಾಂಗ್(ಅ.16): ಶ್ರೀಲಂಕಾ ಬೌಲರ್‌ಗಳ ಸಂಘಟಿತ ಪ್ರದರ್ಶನದ ಹೊರತಾಗಿಯೂ ಜಾನ್ ಪ್ರೈಲಿಂಕ್ ಹಾಗೂ ಜೆಜೆ ಸ್ಮಿತ್ ಆಕರ್ಷಕ ಅರ್ಧಶತಕದ ಜತೆಯಾಟದ ನೆರವಿನಿಂದ ನಮೀಬಿಯಾ 7 ವಿಕೆಟ್ ಕಳೆದುಕೊಂಡು 163 ರನ್ ಬಾರಿಸಿದ್ದು, ಶ್ರೀಲಂಕಾ ತಂಡಕ್ಕೆ ಸವಾಲಿನ ಗುರಿ ನೀಡಿದೆ. ಈ ಮೂಲಕ ಐಸಿಸಿ ಟಿ20 ವಿಶ್ವಕಪ್ ವಿಶ್ವಕಪ್ ಟೂರ್ನಿಯಲ್ಲಿ ಉದ್ಘಾಟನಾ ಪಂದ್ಯವನ್ನು ಗೆಲ್ಲಲು ಲಂಕಾಗೆ ನಮೀಬಿಯಾ ಸವಾಲಿನ ಗುರಿ ನೀಡಿದೆ.
ಇಲ್ಲಿನ ಸೈಮಂಡ್ಸ್ ಸ್ಟೇಡಿಯಂನಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ನಮೀಬಿಯಾ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಆರಂಭಿಕ ಬ್ಯಾಟರ್‌ಗಳಾದ ಮಿಚೆಲ್ ವ್ಯಾನ್ ಲಿಂಗೆನ್(3), ಡಿವನ್ ಲಾ ಕುಕ್(9) ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. 16 ರನ್ ಗಳಿಸುವಷ್ಟರಲ್ಲಿ ಆರಂಭಿಕರಿಬ್ಬರು ಪೆವಿಲಿಯನ್ ಸೇರಿದರು. ಇದಾದ ಬಳಿಕ ಮಧ್ಯಮ ಕ್ರಮಾಂಕದಲ್ಲಿ ಜಾನ್ ನಿಕೊಲ್ ಈಟನ್(20), ಸ್ಟಿಫನ್ ಬಾರ್ಡ್(26), ನಾಯಕ ಗೆರ್ಹಾಡ್ ಬಾರ್ಡ್(20) ಸಮಯೋಚಿತ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾದರು.
T20 World Cup: ಜಗತ್ತಿನಾದ್ಯಂತ ಇಂದಿನಿಂದ ಟಿ20 ಜ್ವರ..!
ಪ್ರೈಲಿಂಕ್-ಸ್ಮಿತ್: ನಮೀಬಿಯಾ ತಂಡವು 14.2 ಓವರ್‌ಗಳಲ್ಲಿ 6 ವಿಕೆಟ್‌ಗಳನ್ನು ಕಳೆದುಕೊಂಡು 93 ರನ್ ಗಳಿಸಿ ಸಂಕಷ್ಟದ ಸುಳಿಗೆ ಸಿಲುಕಿತ್ತು. ಆದರೆ 7ನೇ ವಿಕೆಟ್‌ಗೆ ಜಾನ್ ಪ್ರೈಲಿಂಕ್ ಹಾಗೂ ಜೆಜೆ ಸ್ಮಿತ್ 34 ಎಸೆತಗಳಲ್ಲಿ 69 ರನ್‌ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 160ರ ಗಡಿ ದಾಟಿಸಿದರು. ಸ್ಪೋಟಕ ಬ್ಯಾಟಿಂಗ್ ನಡೆಸಿದ ಜಾನ್ ಪ್ರೈಲಿಂಕ್ ಕೇವಲ 28 ಎಸೆತಗಳಲ್ಲಿ 4 ಬೌಂಡರಿ ಸಹಿತ 44 ರನ್ ಬಾರಿಸಿ ರನೌಟ್ ಆದರು. ಇನ್ನು ಮತ್ತೊಂದು ತುದಿಯಲ್ಲಿ ಜೆಜೆ ಸ್ಮಿತ್ 16 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 31 ರನ್ ಬಾರಿಸಿ ತಂಡಕ್ಕೆ ಆಸರೆಯಾದರು.
ಶ್ರೀಲಂಕಾ ಕ್ರಿಕೆಟ್ ತಂಡದ ಪರ ಪ್ರಮೋದ್ ಮದುಶನ್ 2 ವಿಕೆಟ್ ಪಡೆದರೆ, ಮಹೀಶ್ ತೀಕ್ಷಣ, ಚಮೀರಾ, ಕರುಣರತ್ನೆ ಹಾಗೂ ವನಿಂದ ಹಸರಂಗ ತಲಾ ಒಂದೊಂದು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ನಮೀಬಿಯಾ: 163/7
ಜಾನ್ ಪ್ರೈಲಿಂಕ್: 44
ಜೆಜೆ ಸ್ಮಿತ್: 31
