* ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ವಿರುದ್ದ ಶುಭಾರಂಭ* ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಬಿಗಿದಪ್ಪಿ ಸಂಭ್ರಮಿಸಿದ ಇರ್ಫಾನ್ ಪಠಾಣ್* ದೀಪಾವಳಿಗೆ ವಿನೂತನವಾಗಿ ಶುಭ ಕೋರಿದ ಪಠಾಣ್


ಮೆಲ್ಬರ್ನ್‌(ಅ.25): ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ದ ಟೀಂ ಇಂಡಿಯಾ ಕೊನೆಯ ಎಸೆತದಲ್ಲಿ ರೋಚಕ ಗೆಲುವು ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಮೆಲ್ಬರ್ನ್‌ ಕ್ರಿಕೆಟ್‌ ಮೈದಾನದಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ ನೀಡಿದ್ದ 160 ರನ್‌ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ 4 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ. ಕೇವಲ 53 ಎಸೆತಗಳಲ್ಲಿ ಅಜೇಯ 82 ರನ್‌ ಗಳಿಸುವ ಮೂಲಕ ವಿರಾಟ್ ಕೊಹ್ಲಿ, ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಟೀಂ ಇಂಡಿಯಾ, ಒಂದು ಹಂತದಲ್ಲಿ 31 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ 5ನೇ ವಿಕೆಟ್‌ಗೆ ಜತೆಯಾದ ಹಾರ್ದಿಕ್ ಪಾಂಡ್ಯ ಹಾಗೂ ವಿರಾಟ್ ಕೊಹ್ಲಿ ಜೋಡಿ ಕೇವಲ 78 ಎಸೆತಗಳಲ್ಲಿ 113 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಆರಂಭದಲ್ಲಿ ರಕ್ಷಣಾತ್ಮಕ ಆಟಕ್ಕೆ ಮೊರೆಹೋದ ವಿರಾಟ್ ಕೊಹ್ಲಿ ಮೊದಲ 43 ಎಸೆತಗಳನ್ನು ಎದುರಿಸಿ ಅರ್ಧಶತಕ ಬಾರಿಸಿದರು. ಇದಾದ ಬಳಿಕ ತಾವೆದುರಿಸಿದ ಕೊನೆಯ 10 ಎಸೆತಗಳಲ್ಲಿ 32 ರನ್‌ ಬಾರಿಸುವ ಮೂಲಕ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.

ಟೀಂ ಇಂಡಿಯಾ, ಪಾಕಿಸ್ತಾನ ವಿರುದ್ದ ರೋಚಕ ಗೆಲುವು ಸಾಧಿಸುತ್ತಿದ್ದಂತೆಯೇ ಮೈದಾನದಲ್ಲೇ ಪಂದ್ಯ ವೀಕ್ಷಿಸುತ್ತಿದ್ದ ಮಾಜಿ ಕ್ರಿಕೆಟಿಗರಾದ ಸುನಿಲ್ ಗವಾಸ್ಕರ್, ಇರ್ಫಾನ್ ಪಠಾಣ್, ಕೃಷ್ಣಮಾಚಾರಿ ಶ್ರೀಕಾಂತ್ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಭಾನುವಾರ ಎಂಸಿಜಿ ಮೈದಾನದಲ್ಲಿ ಪಂದ್ಯ ಮುಗಿಯುತ್ತಿದ್ದಂತೆಯೇ, ಇರ್ಫಾನ್ ಪಠಾಣ್, ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು ಬಿಗಿದಪ್ಪಿ ಹಿಡಿದು ಟೀಂ ಇಂಡಿಯಾ ಗೆಲುವನ್ನು ಸಂಭ್ರಮಿಸಿದ್ದಾರೆ.

T20 World Cup ನನ್ನನ್ನು ಕಾಪಾಡಿದ್ದಕ್ಕೆ ಧನ್ಯವಾದಗಳು; ಡಿಕೆ, ಅಶ್ವಿನ್‌ಗೆ ಹೀಗಂದಿದ್ದೇಕೆ..?

ಇದೀಗ ಆ ವಿಡಿಯೋದೊಂದಿಗೆ, ನಾಳೆ ಹೊಡೆಯಬೇಕಿದ್ದ ಪಟಾಕಿಯನ್ನು ಇವರು ಇಂದೇ ಸಿಡಿಸಿದ್ದಾರೆ. ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು ಎಂದು ಟ್ವೀಟ್ ಮಾಡುವ ಮೂಲಕ ದೇಶದ ಜನತೆಗೆ ಬೆಳಕಿನ ಹಬ್ಬ ದೀಪಾವಳಿಗೆ ಶುಭಕೋರಿದ್ದಾರೆ. 

Scroll to load tweet…

ಪಾಕಿಸ್ತಾನ ವಿರುದ್ದ ಆಡಿದ ಇನಿಂಗ್ಸ್‌, ವಿರಾಟ್ ಕೊಹ್ಲಿ ಆಡಿದ ಅತ್ಯುತ್ತಮ ಇನಿಂಗ್ಸ್‌ ಆಗಿದೆ ಎಂದು ಹಲವು ಕ್ರಿಕೆಟಿಗರು ಬಣ್ಣಿಸಿದ್ದಾರೆ. ಇನ್ನು ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡಾ ಈ ವಿಚಾರವನ್ನು ಒಪ್ಪಿಕೊಂಡಿದ್ದಾರೆ.

ಪಾಕಿಸ್ತಾನ ವಿರುದ್ದದ ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ, ಇಲ್ಲಿಯವರೆಗೆ ಪಾಕಿಸ್ತಾನ ವಿರುದ್ದ ಮೊಹಾಲಿಯಲ್ಲಿ ಆಡಿದ ಇನಿಂಗ್ಸ್‌ ನಾನು ಆಡಿದ ಬೆಸ್ಟ್ ಇನಿಂಗ್ಸ್‌ ಆಗಿತ್ತು. ಆದರೆ ಇಂದಿನ ಇನಿಂಗ್ಸ್‌ ಅದಕ್ಕಿಂತ ಉತ್ತಮವಾದ ಇನಿಂಗ್ಸ್ ಎಂದು ಭಾವಿಸುತ್ತೇನೆ. ಹಾರ್ದಿಕ್ ಪಾಂಡ್ಯ ನನ್ನನ್ನು ಗೆಲುವಿನತ್ತ ಮುನ್ನಡೆಯಲು ಪ್ರೋತ್ಸಾಹಿಸುತ್ತಲೇ ಇದ್ದರು. ಪ್ರೇಕ್ಷಕರ ಬೆಂಬಲ ಕೂಡಾ ಅದ್ಭುತವಾಗಿತ್ತು. ನಿಮ್ಮ ಬೆಂಬಲಕ್ಕೆ ನಾನು ಚಿರಋಣಿ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.