T20 World Cup ನನ್ನನ್ನು ಕಾಪಾಡಿದ್ದಕ್ಕೆ ಧನ್ಯವಾದಗಳು; ಡಿಕೆ, ಅಶ್ವಿನ್‌ಗೆ ಹೀಗಂದಿದ್ದೇಕೆ..?
* ಟಿ20 ವಿಶ್ವಕಪ್ ಟೂರ್ನಿಯ ರೋಚಕ ಪಂದ್ಯಕ್ಕೆ ಸಾಕ್ಷಿಯಾದ ಮೆಲ್ಬರ್ನ್ ಕ್ರಿಕೆಟ್ ಮೈದಾನ
* ಎಂಸಿಜಿ ಮೈದಾನದಲ್ಲಿ ಕೊನೆಯ ಎಸೆತದಲ್ಲಿ ಗೆಲುವು ಸಾಧಿಸಿದ ಟೀಂ ಇಂಡಿಯಾ
* ಗೆಲುವಿನ ರನ್ ಬಾರಿಸಿದ ಅಶ್ವಿನ್‌ಗೆ ಥ್ಯಾಂಕ್ಯೂ ಎಂದ ದಿನೇಶ್ ಕಾರ್ತಿಕ್
ಸಿಡ್ನಿ(ಅ.25): ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬದ್ದ ಎದುರಾಳಿ ಪಾಕಿಸ್ತಾನ ವಿರುದ್ದ ಭರ್ಜರಿ ಗೆಲುವು ದಾಖಲಿಸುವ ಮೂಲಕ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಮಾಜಿ ನಾಯಕ ವಿರಾಟ್ ಕೊಹ್ಲಿ ಅಜೇಯ 82 ರನ್ ಬಾರಿಸುವ ಮೂಲಕ ಏಕಾಂಗಿಯಾಗಿ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಕೊನೆಯ ಎಸೆತದಲ್ಲಿ ಗೆಲುವಿನ ರನ್ ಬಾರಿಸಿದ್ದ ಮಾತ್ರ ಅನುಭವಿ ಅಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್. ಕ್ರಿಕೆಟ್ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯದಲ್ಲಿ ಟೀಂ ಇಂಡಿಯಾ ಕೊನೆಯ ಎಸೆತದಲ್ಲಿ ಎರಡು ರನ್ ಅಗತ್ಯವಿತ್ತು. ಆದರೆ ಮೊಹಮ್ಮದ್ ನವಾಜ್ ವೈಡ್ ಎಸೆದಿದ್ದರಿಂದ, ಕೊನೆಯ ಎಸೆತದಲ್ಲಿ ಕೇವಲ ಒಂದು ರನ್ ಬೇಕಾಯಿತು. ಆಗ ಅಶ್ವಿನ್ ಮಿಡ್ ಆನ್ ಮೇಲೆ ಚೆಂಡನ್ನು ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದ್ದರ.
ಟೀಂ ಇಂಡಿಯಾದ ಮ್ಯಾಚ್ ಫಿನಿಶರ್ ಎಂದು ಗುರುತಿಸಿಕೊಂಡಿದ್ದ ದಿನೇಶ್ ಕಾರ್ತಿಕ್ ವಿಕೆಟ್ ಪತನದ ಬಳಿಕ ಕ್ರೀಸ್‌ಗಿಳಿದ ರವಿಚಂದ್ರನ್ ಅಶ್ವಿನ್, ಸಮಯಪ್ರಜ್ಞೆಯ ಬ್ಯಾಟಿಂಗ್ ನಡೆಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು. ದಿನೇಶ್ ಕಾರ್ತಿಕ್ ರನೌಟ್ ಆದಾಗ, ಟೀಂ ಇಂಡಿಯಾ ಗೆಲ್ಲಲು ಕೇವಲ ಒಂದು ಎಸೆತದಲ್ಲಿ ಎರಡು ರನ್‌ಗಳ ಅಗತ್ಯವಿತ್ತು. ಆಗ ಪಾಕ್ ಸ್ಪಿನ್ನರ್ ನವಾಜ್ ಲೆಗ್‌ಸೈಡ್‌ನತ್ತ ಚೆಂಡು ಎಸೆದರು. ಆಗ ಬಾಲನ್ನು ಕೆಣಕಲು ಹೋಗದೇ ಸುಮ್ಮನಾದರು. ಅದು ವೈಡ್ ಆಯಿತು. ಈ ಮೂಲಕ ಟೀಂ ಇಂಡಿಯಾ ಸ್ಕೋರ್ ಸಮಗೊಳಿಸಿಕೊಂಡಿತು. ಇದಾದ ಬಳಿಕ ಕೊನೆಯ ಎಸೆತದಲ್ಲಿ ಅಶ್ವಿನ್ ಮಿಡ್ ಆನ್ ಮೂಲಕ ಒಂದು ರನ್ ಗಳಿಸಿ ಭಾರತಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು.
ಇದೀಗ ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಟೀಂ ಇಂಡಿಯಾ ಆಟಗಾರರು ಮೆಲ್ಬರ್ನ್‌ನಿಂದ ಸಿಡ್ನಿಯತ್ತ ಪ್ರವಾಸ ಮಾಡುತ್ತಿರುವ ವಿಡಿಯೋವಿದೆ. ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಗುರುವಾರದಂದು ಸಿಡ್ನಿಯಲ್ಲಿ ನೆದರ್‌ಲೆಂಡ್ಸ್ ವಿರುದ್ದ ಎರಡನೇ ಪಂದ್ಯವನ್ನಾಡಲಿದೆ.
T20 World Cup ಮಳೆಯಿಂದ ಜಿಂಬಾಬ್ವೆ-ದಕ್ಷಿಣ ಆಫ್ರಿಕಾ ಪಂದ್ಯ ರದ್ದು, ಟೀಂ ಇಂಡಿಯಾ ಸೆಮೀಸ್ ಹಾದಿ ಸಲೀಸು..!
ಈ ವಿಡಿಯೋದಲ್ಲಿ ತಮಿಳುನಾಡು ಮೂಲದ ಇಬ್ಬರು ಕ್ರಿಕೆಟಿಗರಾದ ದಿನೇಶ್ ಕಾರ್ತಿಕ್ ಹಾಗೂ ರವಿಚಂದ್ರನ್ ಅಶ್ವಿನ್ ಮುಖಾಮುಖಿಯಾದಾಗ, ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್, ನಿನ್ನೆ ನನ್ನನ್ನು ಕಾಪಾಡಿದ್ದಕ್ಕೆ ಧನ್ಯವಾದಗಳು ಎಂದು ನಗುನಗುತ್ತಲೇ ಅಶ್ವಿನ್‌ಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಕೇವಲ ಎರಡು ಎಸೆತಗಳಲ್ಲಿ ಎರಡು ಗಳಿಸಬೇಕಿದ್ದ ಹಂತದಲ್ಲಿ ದಿನೇಶ್ ಕಾರ್ತಿಕ್ ವಿಕೆಟ್ ಒಪ್ಪಿಸಿದ್ದು ಟೀಂ ಇಂಡಿಯಾ ಸೋಲಿಗೆ ಕಾರಣವಾಗುವ ಸಾಧ್ಯತೆಯಿತ್ತು. ಅಶ್ವಿನ್ ಕೊನೆಯಲ್ಲಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದ್ದಕ್ಕೆ ಡಿಕೆ, ಅಶ್ವಿನ್‌ಗೆ ಥ್ಯಾಂಕ್ಸ್ ಹೇಳಿದ್ದಾರೆ.
ಪಾಕಿಸ್ತಾನ ನೀಡಿದ್ದ 160 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಟೀಂ ಇಂಡಿಯಾ, ಒಂದು ಹಂತದಲ್ಲಿ ಕೇವಲ 31 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ 5ನೇ ವಿಕೆಟ್‌ಗೆ ಜತೆಯಾದ ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ ಜೋಡಿ 78 ಎಸೆತಗಳಲ್ಲಿ 113 ರನ್‌ಗಳ ಜತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ಯದರು. ಹೀಗಿದ್ದೂ ಕೊನೆಯ ಓವರ್‌ನಲ್ಲಿ ಭಾರತ ಗೆಲ್ಲಲು 16 ರನ್‌ಗಳ ಅಗತ್ಯವಿತ್ತು. ಆದರೆ ಕೊನೆಯ ಓವರ್ ಹಲವು ನಾಟಕೀಯ ಸನ್ನಿವೇಶಕ್ಕೆ ಸಾಕ್ಷಿಯಾಯಿತು.
ಹೇಗಿತ್ತು ಕೊನೆಯ ಓವರ್..?
20ನೇ ಓವರ್ ಬೌಲಿಂಗ್ ಜವಾಬ್ದಾರಿ ಹೊತ್ತುಕೊಂಡ ಮೊಹಮ್ಮದ್ ನವಾಜ್ ಮೊದಲ ಎಸೆತದಲ್ಲೇ ಹಾರ್ದಿಕ್‌ರನ್ನು ಔಟ್ ಮಾಡಿದರು. 2ನೇ ಎಸೆತದಲ್ಲಿ ಕಾರ್ತಿಕ್ 1 ರನ್ ಪಡೆದರೆ, 3ನೇ ಎಸೆತದಲ್ಲಿ ಕೊಹ್ಲಿ 2 ರನ್ ಕದ್ದರು. ಕೊನೆ 3 ಎಸೆತದಲ್ಲಿ 13 ರನ್ ಬೇಕಿತ್ತು. ನೋಬಾಲ್ ಆದ 4ನೇ ಎಸೆತದಲ್ಲಿ ವಿರಾಟ್ ಸಿಕ್ಸರ್ ಸಿಡಿಸಿದರು. 3 ಎಸೆತಗಳಲ್ಲಿ 6 ರನ್ ಬೇಕಿದ್ದಾಗ ನವಾಜ್ ವೈಡ್ ಎಸೆದರು. ಆ ನಂತರ ಫ್ರೀ ಹಿಟ್‌ನಲ್ಲಿ ಕೊಹ್ಲಿ ಬೌಲ್ಡ್ ಆದರೂ ಬೈ ಮೂಲಕ 3 ರನ್ ತಂಡದ ಮೊತ್ತಕ್ಕೆ ಸೇರ್ಪಡೆಗೊಂಡಿತು. ಇನ್ನು 5ನೇ ಎಸೆತದಲ್ಲಿ ಕಾರ್ತಿಕ್ ರನೌಟ್ ಆದಾಗ 1 ಎಸೆತದಲ್ಲಿ 2 ರನ್ ಬೇಕಿತ್ತು. ನವಾಜ್ ಮತ್ತೊಂದು ವೈಡ್ ಎಸೆದರು. ಕೊನೆ ಎಸೆತದಲ್ಲಿ ಬೇಕಿದ್ದ ಒಂದು ರನ್ ಅನ್ನು ಅಶ್ವಿನ್ ಗಳಿಸಿ ತಂಡವನ್ನು ಜಯದ ದಡ ದಾಟಿಸಿದರು.