Asianet Suvarna News Asianet Suvarna News

T20 World Cup: ಇಫ್ತಿಕಾರ್‌, ಶಾದಾಬ್‌ ಅರ್ಧಶತಕ, ದಕ್ಷಿಣ ಆಫ್ರಿಕಾಕ್ಕೆ 186 ರನ್ ಟಾರ್ಗೆಟ್‌

ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಭರ್ಜರಿ ನಿರ್ವಹಣೆಯ ನೆರವಿನಿಂದ ಪಾಕಿಸ್ತಾನ ತಂಡ ಟಿ20 ವಿಶ್ವಕಪ್‌ನ ತನ್ನ ಬಹುಮುಖ್ಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಸವಾಲಿನ ಗುರಿ ನಿಗದಿ ಮಾಡಿದೆ. ಇಫ್ತಿಕಾರ್‌ ಅಹ್ಮದ್‌ ಹಾಗೂ ಶಾಬಾದ್‌ ಖಾನ್‌ ಆಕರ್ಷಕ ಆಟವಾಡಿ ತಂಡದ ಉತ್ತಮ ಮೊತ್ತಕ್ಕೆ ಕಾರಣರಾದರು.

Icc T20 World Cup 2022 Iftikhar Ahmed Shadab Khan hit Fifty South Africa Gets 186 run Target san
Author
First Published Nov 3, 2022, 3:14 PM IST

ಸಿಡ್ನಿ (ನ.3): ಈಗಾಗಲೇ ಟಿ20 ವಿಶ್ವಕಪ್‌ ಹೋರಾಟದ ಸೆಮಿಫೈನಲ್‌ ಹಾದಿಯಿಂದ ಬಹುತೇಕ ಹೊರಬಿದ್ದಿರುವ ಪಾಕಿಸ್ತಾನ ಅದೃಷ್ಟದ ಮೇಲೆ ಮುಂದಿನ ಹಂತದ ಸ್ಥಾನದ ನಿರೀಕ್ಷೆಯಲ್ಲಿದೆ. ಅದರಂತೆ ಗುರುವಾರ ಸಿಡ್ನಿ ಕ್ರಿಕೆಟ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಉತ್ತಮ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ಕಾರಣವಾಗಿದ್ದು, ಕೆಳ ಕ್ರಮಾಂಕದಲ್ಲಿ ಭರ್ಜರಿ ಬ್ಯಾಟಿಂಗ್ ನಿರ್ವಹಣೆ ತೋರಿದ ಇಫ್ತಿಕಾರ್‌ ಅಹ್ಮದ್‌ ಹಾಗೂ ಶಾದಾಬ್‌ ಖಾನ್‌. 6ನೇ ವಿಕೆಟ್‌ ಈ ಜೋಡಿ ಆಡಿದ ಅಮೂಲ್ಯ 82 ರನ್‌ಗಳ ಜೊತೆಯಾಟದ ನೆರವಿನಿಂದ ಪಾಕಿಸ್ತಾನ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 9 ವಿಕೆಟ್‌ಗೆ 185 ರನ್‌ ಪೇರಿಸಿದೆ. ಲೀಗ್‌ ನಲ್ಲಿ ಈವರೆಗೂ ಆಡಿದ ಮೂರು ಪಂದ್ಯಗಳಲ್ಲಿ 1 ಗೆಲುವು ಹಾಗೂ 2 ಸೋಲು ಕಂಡಿರುವ ಪಾಕಿಸ್ತಾನಕ್ಕೆ ಈ ಪಂದ್ಯದಲ್ಲಿ ಕಾಣುವ ಗೆಲುವು ಅತ್ಯಂತ ಮಹತ್ವದ್ದಾಗಿದೆ. ಆರಂಭಿಕ ಆಟಗಾರರಾದ ಮೊಹಮ್‌ ರಿಜ್ವಾನ್‌ ನಾಯಕ ಬಾಬರ್‌ ಅಜಮ್‌ ಹಾಗೂ ಶಾನ್‌ ಮಸೂದ್‌ ವೈಫಲ್ಯ ಕಂಡರೂ ಇಫ್ತಿಕಾರ್‌ ಅಹ್ಮದ್‌ ಹಾಗೂ ಶಾದಾಬ್‌ ಖಾನ್‌ ಆಡಿದ ಅರ್ಧತಕದ ಇನ್ನಿಂಗ್ಸ್‌ ಪಾಕಿಸ್ತಾನದ ದೊಡ್ಡ ಮಟ್ಟದ ಚೇತರಿಕೆಗೆ ಕಾರಣವಾಯಿತು. 

ಸಿಡ್ನಿ ಕ್ರಿಕೆಟ್‌ ಮೈದಾನದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಪಾಕಿಸ್ತಾನ ತಂಡ ಒಂದು ಹಂತದಲ್ಲಿ 95 ರನ್‌ಗೆ 5 ಪ್ರಮುಖ ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ಹಂತದಲ್ಲಿ ಜೊತೆಯಾದ ಇಫ್ತಿಕಾರ್‌ ಅಹ್ಮದ್‌ ಹಾಗೂ ಶಾದಾಬ್ ಖಾನ್‌ ಕೇವಲ 36 ಎಸೆತಗಳಲ್ಲಿ 82 ರನ್‌ಗಳ ಜೊತೆಯಾಟವಾಡುವ ಮೂಲಕ ಪಾಕಿಸ್ತಾನದ ದೊಡ್ಡ ಮೊತ್ತಕ್ಕೆ ಕಾರಣರಾದರು. 35 ಎಸೆತ ಎದುರಿಸಿದ ಇಫ್ತಿಕಾರ್ ಅಹ್ಮದ್‌ 3 ಬೌಂಡರಿ, 2 ಸಿಕ್ಸರ್‌ನೊಂದಿಗೆ 51 ರನ್‌ ಬಾರಿಸಿದರೆ, ಶಾದಾಬ್‌ ಖಾನ್‌ ಕೇವಲ 22 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್‌ಗಳಿದ್ದ 52 ರನ್‌ ಸಿಡಿಸಿ ಅಬ್ಬರಿಸಿದರು.

T20 World Cup: "ಕೊಹ್ಲಿ ಕಳ್ಳಾಟ": 5 ಪೆನಾಲ್ಟಿ ರನ್‌ ನೀಡದ್ದಕ್ಕೆ ಬಾಂಗ್ಲಾ ಆಟಗಾರರು ಕೆಂಡಾಮಂಡಲ

ಕೊನೇ ಓವರ್‌ ಅಡುವ ಮುನ್ನವೇ 6ನೇ ವಿಕೆಟ್‌ ಜೋಡಿ ಬೇರ್ಪಟ್ಟಿದ್ದು ಇನ್ನೂ ಉತ್ತಮ ಮೊತ್ತ ಪೇರಿಸುವ ಪಾಕಿಸ್ತಾನದ ಆಸೆಯನ್ನು ಭಗ್ನ ಮಾಡಿತು. 19ನೇ ಓವರ್‌ನ 5ನೇ ಎಸೆತದಲ್ಲಿ ಶಾಬಾದ್‌ ಖಾನ್‌ ಔಟಾದರೆ, ಮರು ಎಸೆತದಲ್ಲಿ ಮೊಹಮದ್‌ ವಾಸಿಂ ಔಟಾದರು.  ಕೊನೇ ಓವರ್‌ನ ಮೊದಲ ಎಸೆತದಲ್ಲಿ ಇಫ್ತಿಕಾರ್‌ ಅಹ್ಮದ್‌ ಔಟಾಗಿದ್ದರಿಂದ, ರಬಾಡ ಎಸೆದ ಕೊನೇ ಓವರ್‌ನಲ್ಲಿ ಕೇವಲ 8 ರನ್‌ ಮಾತ್ರವೇ ಬಂದವು.

T20 World Cup: ಥ್ರೋಡೌನ್‌ ಸ್ಪೆಷಲಿಸ್ಟ್‌ ಕರ್ನಾಟಕದ ರಘು ಭಾರತದ ಗೆಲುವಿನ 'ಆಫ್‌ಫೀಲ್ಡ್‌ ಹೀರೋ'!

ಪಾಕ್‌ ಅಗ್ರಕ್ರಮಾಂಕ ಮತ್ತೆ ವೈಫಲ್ಯ: ಪಾಕಿಸ್ತಾನದ ಅಗ್ರ ಕ್ರಮಾಂಕ ಮತ್ತೊಮ್ಮೆ ವೈಫಲ್ಯ ಕಂಡಿತು. 43 ರನ್‌ ಗಳಿಸುವ ವೇಳೆಗಾಗಲೇ, ಆರಂಭಿಕ ಆಟಗಾರರಾದ ಮೊಹಮದ್‌ ರಿಜ್ವಾನ್‌ (4), ಬಾಬರ್‌ ಅಜಮ್‌ (6), ಮೊಹಮದ್‌ ಹ್ಯಾರಿಸ್‌ (28) ಹಾಗೂ ಶಾನ್‌ ಮಸೂದ್‌ (2) ವಿಕೆಟ್‌ ಕಳೆದುಕೊಂಡಿತ್ತು. ಆನ್ರಿಚ್‌ ನೋಕಿಯೆ ಎರಡು ವಿಕೆಟ್‌ ಉರುಳಿಸಿದರೆ, ಎನ್‌ಗಿಡಿ ಹಾಗೂ ಪರ್ನೆಲ್‌ ಒಂದೊಂದು ವಿಕೆಟ್‌ ಉರುಳಿಸಿದ್ದರು. ಈ ಹಂತದಲ್ಲಿ ಇಫ್ತಿಕಾರ್‌ ಅಹ್ಮದ್‌ಗೆ ಜತೆಯಾದ ಮೊಹಮದ್‌ ನವಾಜ್‌ ತಂಡದ ಮೊತ್ತವನ್ನು 90ರ ಗಡಿ ದಾಟುವವರೆಗೆ ಕ್ರೀಸ್‌ನಲ್ಲಿದ್ದರು. ನವಾಜ್‌ ಔಟಾದ ಸಮಯದಲ್ಲಿ ಪಾಕಿಸ್ತಾನ 13 ಓವರ್‌ಗಳಲ್ಲಿ 5 ವಿಕೆಟ್‌ಗೆ 95 ರನ್‌ ಬಾರಿಸಿತ್ತು. ಆದರೆ, ಇಫ್ತಿಕಾರ್‌ ಅಹ್ಮದ್‌ ಹಾಗೂ ಶಾಬಾದ್ ಅಬ್ಬರಿಸಿದ್ದರಿಂದ ಕೊನೇ 42 ಎಸೆತಗಳಲ್ಲಿ ಪಾಕಿಸ್ತಾನ 90 ರನ್‌ ಪೇರಿಸಿತು. ಈ ವೇಳೆ ದಕ್ಷಿಣ ಆಫ್ರಿಕಾ ತಂಡದ ಕೆಟ್ಟ ಫೀಲ್ಡಿಂಗ್‌ ಕೂಡ ಪಾಕಿಸ್ತಾನಕ್ಕೆ ಸಹಾಯ ಮಾಡಿತು.

Follow Us:
Download App:
  • android
  • ios