ಲಂಕಾ ಎದುರು ಟಾಸ್ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್ ಆಯ್ಕೆಉಭಯ ತಂಡಗಳಲ್ಲೂ ತಲಾ ಒಂದು ಬದಲಾವಣೆಕೋವಿಡ್‌ನಿಂದಾಗಿ ತಂಡದಿಂದ ಹೊರಗುಳಿದ ಆಡಂ ಜಂಪಾ

ಪರ್ತ್(ಅ.25): ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದ 19ನೇ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಆ್ಯರೋನ್ ಫಿಂಚ್ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಉಭಯ ತಂಡಗಳಲ್ಲಿ ತಲಾ ಒಂದೊಂದು ಬದಲಾವಣೆ ಮಾಡಲಾಗಿದೆ.

ಈ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ಪರ್ತ್ ಸ್ಟೇಡಿಯಂ ಆತಿಥ್ಯವನ್ನು ವಹಿಸಿದೆ. ಈಗಾಗಲೇ ಸೂಪರ್ 12 ಹಂತದ ಮೊದಲ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡವು ನ್ಯೂಜಿಲೆಂಡ್ ಎದುರು ಆಘಾತಕಾರಿ ಸೋಲು ಕಂಡಿತ್ತು. ಸೆಮೀಸ್‌ಗೇರುವ ಕನಸನ್ನು ಜೀವಂತವಾಗಿರಿಸಿಕೊಳ್ಳಬೇಕಿದ್ದರೇ ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಆ್ಯರೋನ್ ಫಿಂಚ್ ಪಡೆ ಸಿಲುಕಿದೆ.

ಆಸ್ಟ್ರೇಲಿಯಾ ತಂಡದಲ್ಲಿ ಒಂದು ಮಹತ್ವದ ಬದಲಾವಣೆ ಮಾಡಲಾಗಿದ್ದು, ತಾರಾ ಸ್ಪಿನ್ನರ್ ಆ್ಯಡಂ ಜಂಪಾಗೆ ಕೋವಿಡ್ 19 ವೈರಸ್ ತಗುಲಿರುವುದರಿಂದ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಆ್ಯಡಂ ಜಂಪಾ ಬದಲಿಗೆ ಆಸ್ಟನ್ ಏಗರ್‌ಗೆ ಆಸ್ಟ್ರೇಲಿಯಾ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಕಲ್ಪಿಸಲಾಗಿದೆ. ಇನ್ನು ಶ್ರೀಲಂಕಾ ತಂಡದಲ್ಲಿ ಕೂಡಾ ಒಂದು ಬದಲಾವಣೆ ಮಾಡಲಾಗಿದ್ದು, ಪಥುಮ್ ನಿಸ್ಸಾಂಕ ತಂಡ ಕೂಡಿಕೊಂಡಿದ್ದಾರೆ.

Scroll to load tweet…

T20 World Cup ಲಂಕಾ ಎದುರಿನ ಮಹತ್ವದ ಪಂದ್ಯಕ್ಕೂ ಮುನ್ನ ಆ್ಯಡಂ ಜಂಪಾಗೆ ಕೋವಿಡ್ ಪಾಸಿಟಿವ್..!

ಅರ್ಹತಾ ಸುತ್ತಿನ ಆರಂಭಿಕ ಆಘಾತದಿಂದ ಚೇತರಿಸಿಕೊಂಡು ಪ್ರಧಾನ ಸುತ್ತಿಗೇರಿರುವ ಶ್ರೀಲಂಕಾ ಮೊದಲ ಪಂದ್ಯದಲ್ಲಿ ಐರ್ಲೆಂಡ್‌ ವಿರುದ್ಧ ಗೆದ್ದಿದ್ದು, ಮತ್ತೊಂದು ಗೆಲುವಿಗೆ ಎದುರು ನೋಡುತ್ತಿದೆ. ಬಲಿಷ್ಠ ಆಸ್ಟ್ರೇಲಿಯಾ ಎದುರು ಶ್ರೀಲಂಕಾ ತಂಡವು ಗೆಲುವು ದಾಖಲಿಸಬೇಕಿದ್ದರೆ ಸಂಘಟಿತ ಪ್ರದರ್ಶನ ತೋರಬೇಕಿದೆ. ಕುಸಾಲ್ ಮೆಂಡಿಸ್, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ ಜತೆಗೆ ಮಧ್ಯಮ ಕ್ರಮಾಂಕದಲ್ಲಿ ಭನುಕಾ ರಾಜಪಕ್ಸಾ ಹಾಗೂ ದಶುನ್ ಶನಕಾ ಕೂಡಾ ಬ್ಯಾಟಿಂಗ್‌ನಲ್ಲಿ ತಂಡಕ್ಕೆ ಆಸರೆಯಾಗಬೇಕಿದೆ. ಇನ್ನು ಬೌಲಿಂಗ್‌ನಲ್ಲಿ ತಂಡದ ಟ್ರಂಪ್ ಕಾರ್ಡ್ ಸ್ಪಿನ್ನರ್ ಎನಿಸಿಕೊಂಡಿರುವ ವನಿಂದು ಹಸರಂಗ ಹಾಗೂ ಮಹೀಶ್ ತೀಕ್ಷಣ ಜತೆಗೆ ವೇಗಿಗಳಾದ ಲಹಿರು ಕುಮಾರ, ಬಿನುರಾ ಫರ್ನಾಂಡೋ ಮತ್ತು ಚಮಿಕ ಕರುಣರತ್ನೆ ಮಾರಕ ದಾಳಿ ನಡೆಸಿದರೆ, ಕಾಂಗರೂ ಪಡೆಯನ್ನು ಮಣಿಸುವುದು ಕಷ್ಟವೇನಲ್ಲ.

ತಂಡಗಳು ಹೀಗಿವೆ ನೋಡಿ

ಆಸ್ಟ್ರೇಲಿಯಾ: ಆ್ಯರೋನ್ ಫಿಂಚ್(ನಾಯಕ), ಡೇವಿಡ್ ವಾರ್ನರ್, ಮಿಚೆಲ್ ಮಾರ್ಶ್, ಗ್ಲೆನ್ ಮ್ಯಾಕ್ಸ್‌ವೆಲ್‌, ಮಾರ್ಕಸ್ ಸ್ಟೋನಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್(ವಿಕೆಟ್ ಕೀಪರ್), ಆಸ್ಟನ್ ಏಗರ್, ಪ್ಯಾಟ್ ಕಮಿನ್ಸ್‌, ಮಿಚೆಲ್ ಸ್ಟಾರ್ಕ್, ಜೋಶ್ ಹೇಜಲ್‌ವುಡ್.

ಶ್ರೀಲಂಕಾ: ಪಥುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್(ವಿಕೆಟ್ ಕೀಪರ್), ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ಭನುಕಾ ರಾಜಪಕ್ಸಾ, ದಶುನ್ ಶನಕಾ(ನಾಯಕ), ವನಿಂದು ಹಸರಂಗ, ಚಮಿಕಾ ಕರುಣರತ್ನೆ, ಮಹೀಶ್ ತೀಕ್ಷಣ, ಬಿನುರಾ ಫರ್ನಾಂಡೊ, ಲಹಿರು ಕುಮಾರ.

ಪಂದ್ಯ ಆರಂಭ: ಸಂಜೆ 4.30ಕ್ಕೆ, 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌