T20 World Cup ಲಂಕಾ ಎದುರಿನ ಮಹತ್ವದ ಪಂದ್ಯಕ್ಕೂ ಮುನ್ನ ಆ್ಯಡಂ ಜಂಪಾಗೆ ಕೋವಿಡ್ ಪಾಸಿಟಿವ್..!
ಲಂಕಾ ಎದುರಿನ ಪಂದ್ಯಕ್ಕೂ ಮುನ್ನ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾಗೆ ಬಿಗ್ ಶಾಕ್
ಆಸ್ಟ್ರೇಲಿಯಾದ ತಾರಾ ಸ್ಪಿನ್ನರ್ ಆ್ಯಡಂ ಜಂಪಾಗೆ ಕೋವಿಡ್ ಪಾಸಿಟಿವ್
ಈಗಾಗಲೇ ಮೊದಲ ಟಿ20 ಪಂದ್ಯ ಸೋತಿರುವ ಆತಿಥೇಯ ಆಸ್ಟ್ರೇಲಿಯಾ
ಪರ್ತ್(ಅ.25): ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದ 19ನೇ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗುತ್ತಿದ್ದು, ಈ ಪಂದ್ಯಕ್ಕೆ ಪರ್ತ್ ಕ್ರಿಕೆಟ್ ಮೈದಾನ ಆತಿಥ್ಯವನ್ನು ವಹಿಸಿದೆ. ಈ ಪಂದ್ಯ ಆರಂಭಕ್ಕೂ ಮುನ್ನ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡಕ್ಕೆ ಆಘಾತ ಎದುರಾಗಿದ್ದು, ಆಸ್ಟ್ರೇಲಿಯಾದ ಪ್ರಮುಖ ಲೆಗ್‌ಸ್ಪಿನ್ನರ್ ಆ್ಯಡಂ ಜಂಪಾಗೆ ಕೋವಿಡ್ 19 ವೈರಸ್ ತಗುಲಿರುವುದು ದೃಢಪಟ್ಟಿದೆ ಎಂದು ವರದಿಯಾಗಿದೆ.
ಆ್ಯಡಂ ಜಂಪಾ ಅವರಿಗೆ ಕೋವಿಡ್ 19 ವೈರಸ್ಸಿನ ಮಂದ ಲಕ್ಷಣಗಳು ಕಾಣಿಸಿಕೊಂಡಿವೆ ಎಂದು cricket.com.au ತಿಳಿಸಿದ್ದು, ಆದರೆ ಈ ಕುರಿತಂತೆ ತಂಡದ ಅಧಿಕಾರಿಗಳು ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಒಂದು ವೇಳೆ ಆ್ಯಡಂ ಜಂಪಾ ಅವರಿಗೆ ಕೋವಿಡ್ 19 ಸೋಂಕು ತಗುಲಿರುವುದ ಖಚಿತವಾದರೂ ಸಹಾ, ಟಿ20 ವಿಶ್ವಕಪ್ ಟೂರ್ನಿಯ ನಿಯಮಾವಳಿಗಳ ಪ್ರಕಾರ, ಪಂದ್ಯದಲ್ಲಿ ಆಡಲು ಫಿಟ್ ಇದ್ದರೇ, ಪಾಲ್ಗೊಳ್ಳಬಹುದಾಗಿದೆ. ಆದರೆ ಸೋಂಕಿತ ವ್ಯಕ್ತಿಯು ತಂಡದ ಜತೆಗೆ ಪ್ರಯಾಣಿಸಿದೇ, ಪ್ರತ್ಯೇಕವಾಗಿ ಪ್ರಯಾಣಿಸಬೇಕಾಗುತ್ತದೆ. ಒಂದು ವೇಳೆ ಶ್ರೀಲಂಕಾ ಎದುರಿನ ಪಂದ್ಯದಿಂದ ಆ್ಯಡಂ ಜಂಪಾ ಆಡುವ ಹನ್ನೊಂದರ ಬಳಗದಿಂದ ಹೊರಬಿದ್ದರೆ, ಅವರ ಬದಲಿಗೆ ಆಸ್ಟನ್ ಆಗರ್, ಆಸೀಸ್ ತಂಡ ಕೂಡಿಕೊಳ್ಳಲಿದ್ದಾರೆ.
T20 World Cup ವಿರಾಟ್ ಕೊಹ್ಲಿಯನ್ನು ಬಿಗಿದಪ್ಪಿ ದೇಶದ ಜನತೆಗೆ ದೀಪಾವಳಿ ಶುಭಾಶಯ ಕೋರಿದ ಇರ್ಫಾನ್ ಪಠಾಣ್
ಟಿ20 ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧದ ಹೀನಾಯ ಸೋಲನುಭವಿಸಿ ಆಘಾತದಲ್ಲಿರುವ ಹಾಲಿ ಚಾಂಪಿಯನ್ ಆಸ್ಪ್ರೇಲಿಯಾ ಮೊದಲ ಗೆಲುವಿಗೆ ಕಾತರಿಸುತ್ತಿದ್ದು, ಮಂಗಳವಾರ ಶ್ರೀಲಂಕಾ ವಿರುದ್ಧ ಸೆಣಸಾಡಲಿದೆ. ವಿಶ್ವಕಪ್‌ಗೂ ಮುನ್ನ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಸೋತು, ಬಳಿಕ ಅಭ್ಯಾಸ ಪಂದ್ಯದಲ್ಲಿ ಭಾರತಕ್ಕೆ ಶರಣಾಗಿದ್ದ ಆಸೀಸ್ ಗೆಲುವಿಗೆ ಹಳಿಗೆ ಮರಳಬೇಕಾದ ಒತ್ತಡದಲ್ಲಿದೆ.
ಸಂಭಾವ್ಯ ತಂಡಗಳು ಹೀಗಿವೆ ನೋಡಿ
ಆಸ್ಟ್ರೇಲಿಯಾ: ಆ್ಯರೋನ್ ಫಿಂಚ್(ನಾಯಕ), ಡೇವಿಡ್ ವಾರ್ನರ್, ಮಿಚೆಲ್ ಮಾರ್ಶ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೋನಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್(ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಆಡಂ ಜಂಪಾ, ಜೋಶ್ ಹೇಜಲ್‌ವುಡ್.
ಶ್ರೀಲಂಕಾ: ಪಥುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್(ವಿಕೆಟ್ ಕೀಪರ್), ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ಭನುಕಾ ರಾಜಪಕ್ಸಾ, ದಶುನ್ ಶನಕಾ(ನಾಯಕ), ವನಿಂದು ಹಸರಂಗ, ಚಮಿಕಾ ಕರುಣರತ್ನೆ, ಮಹೀಶ್ ತೀಕ್ಷಣ, ಬಿನುರಾ ಫರ್ನಾಂಡೊ, ಲಹಿರು ಕುಮಾರ.
ಪಂದ್ಯ ಆರಂಭ: ಸಂಜೆ 4.30ಕ್ಕೆ,
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್