ದುಬೈ(ಜ.12): ನೂತನವಾಗಿ ಬಿಡುಗಡೆಗೊಂಡಿರುವ ಐಸಿಸಿ ಟಿ20 ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕ ಪಟ್ಟಿಯಲ್ಲಿ ಕರ್ನಾಟಕದ ಕೆ.ಎಲ್‌.ರಾಹುಲ್‌ 6ನೇ ಸ್ಥಾನ ಕಾಯ್ದುಕೊಂಡಿದ್ದಾರೆ. 

ಭಾರತೀಯರ ಪೈಕಿ ಉನ್ನತ ಸ್ಥಾನದಲ್ಲಿರುವ ಬ್ಯಾಟ್ಸ್‌ಮನ್‌ ಎನ್ನುವ ಹಿರಿಮೆಗೆ ರಾಹುಲ್‌ ಪಾತ್ರರಾಗಿದ್ದಾರೆ. ಶ್ರೀಲಂಕಾ ವಿರುದ್ಧ ಶುಕ್ರವಾರ ಮುಕ್ತಾಯಗೊಂಡ ಸರಣಿಯಲ್ಲಿ ರಾಹುಲ್‌ 45 ಹಾಗೂ 54 ರನ್‌ ಗಳಿಸಿದ್ದರು. ರಾಹುಲ್‌ 26 ಅಂಕ ಗಳಿಸಿದ್ದು, 760 ರೇಟಿಂಗ್‌ ಅಂಕಗಳೊಂದಿಗೆ 5ನೇ ಸ್ಥಾನದಲ್ಲಿರುವ ಗ್ಲೆನ್‌ ಮ್ಯಾಕ್ಸ್‌ವೆಲ್‌ಗಿಂತ ಕೇವಲ 6 ಅಂಕಗಳಿಂದ ಹಿಂದಿದ್ದಾರೆ. 

ಐಸಿಸಿ ರ‍್ಯಾಂಕಿಂಗ್ ಪದ್ಧತಿ ಕಸದ ತೊಟ್ಟಿ: ವಾನ್‌

ಟೆಸ್ಟ್‌, ಏಕದಿನದಲ್ಲಿ ಅಗ್ರಸ್ಥಾನದಲ್ಲಿರುವ ವಿರಾಟ್‌ ಕೊಹ್ಲಿ, ಒಂದು ಸ್ಥಾನ ಏರಿಕೆ ಕಂಡು 9ನೇ ಸ್ಥಾನ ಪಡೆದಿದ್ದಾರೆ. ಇನ್ನು ಲಂಕಾ ವಿರುದ್ಧ 36 ಎಸೆತಗಳಲ್ಲಿ 52 ರನ್ ಬಾರಿಸಿದ್ದ ಶಿಖರ್ ಧವನ್ ಒಂದು ಸ್ಥಾನ ಮೇಲೇರಿ 15ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಇನ್ನು ಮನೀಶ್ ಪಾಂಡೆ 4 ಸ್ಥಾನ ಮೇಲೇರಿ 70ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.  ಬ್ಯಾಟ್ಸ್'ಮನ್'ಗಳ ನಂ.1 ಸ್ಥಾನದಲ್ಲಿ ಪಾಕಿಸ್ತಾನದ ಬಾಬರ್ ಅಜಂ ಮುಂದುವರೆದಿದ್ದರೆ, ಆಸೀಸ್ ನಾಯಕ ಆರೋನ್ ಫಿಂಚ್, ಇಂಗ್ಲೆಂಡ್'ನ ಡೇವಿಡ್ ಮಲಾನ್ ಕ್ರಮವಾಗಿ ಮೊದಲ 3 ಸ್ಥಾನ ಪಡೆದಿದ್ದಾರೆ. 

2020ರ ಮೊದಲ ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್ ಪ್ರಕಟ

ಬೌಲರ್'ಗಳ ವಿಭಾಗದಲ್ಲಿ ಲಂಕಾ ವಿರುದ್ಧ 5 ವಿಕೆಟ್ ಪಡೆದು ಸರಣಿಶ್ರೇಷ್ಠ ಗೌರವಕ್ಕೆ ಭಾಜನರಾದ ನವದೀಪ್ ಸೈನಿ 146ನೇ ಸ್ಥಾನದಿಂದ 98ನೇ ಸ್ಥಾನಕ್ಕೆ ಲಾಂಗ್ ಜಂಪ್ ಮಾಡಿದ್ದಾರೆ. ಇನ್ನು ಶಾರ್ದೂಲ್ ಠಾಕುರ್ ಸಹಾ ಇದೇ ಸರಣಿಯಲ್ಲಿ 5 ವಿಕೆಟ್ ಪಡೆದಿದ್ದು, 92ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಇನ್ನು ದೀರ್ಘ ಬಿಡುವಿನ ಬಳಿಕ ತಂಡ ಕೂಡಿಕೊಂಡ ಜಸ್ಪ್ರೀತ್ ಬುಮ್ರಾ 8 ಸ್ಥಾನ ಮೇಲೇರಿ 39ನೇ ಸ್ಥಾನ ಪಡೆದಿದ್ದಾರೆ.  

ಲಂಕಾ ವಿರುದ್ಧ ಸರಣಿ ಗೆದ್ದು 2 ಅಂಕ ಗಳಿಸಿದ ಭಾರತ, ಒಟ್ಟಾರೆ 260 ರನ್‌ಗಳನ್ನು ಹೊಂದಿದೆ. ತಂಡ 5ನೇ ಸ್ಥಾನದಲ್ಲೇ ಮುಂದುವರಿದಿದೆ.