ಭಾರತದಲ್ಲಿ ನಡೆಯಬೇಕಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು 9 ನಗರಗಳ ಬದಲಾಗಿ ಕೇವಲ 5 ನಗರಗಳಲ್ಲಿ ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಮೇ.01): ಇದೇ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಬೇಕಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿ, ಭಾರತದಿಂದ ಸ್ಥಳಾಂತರವಾಗುವುದನ್ನು ತಪ್ಪಿಸಲು ಬಿಸಿಸಿಐ ಎಲ್ಲಾ ಆಯ್ಕೆಗಳನ್ನು ಪರಿಶೀಲಿಸುತ್ತಿದೆ. ವಿಶ್ವಕಪ್ ಪಂದ್ಯಗಳಿಗೆ ಈಗಾಗಲೇ 9 ನಗರಗಳನ್ನು ಅಂತಿಮಗೊಳಿಸಿರುವ ಬಿಸಿಸಿಐ, ನಗರಗ ಸಂಖ್ಯೆಯನ್ನು 9ರಿಂದ 5ಕ್ಕೆ ಇಳಿಸಲು ಚಿಂತನೆ ನಡೆಸಿದೆ.
‘ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ (ಕೋಲ್ಕತಾ), ಕಾರ್ಯದರ್ಶಿ ಜಯ್ ಶಾ (ಅಹಮದಾಬಾದ್), ಉಪಾಧ್ಯಕ್ಷ ರಾಜೀವ್ ಶುಕ್ಲಾ (ಲಖನೌ) ಹಾಗೂ ಖಜಾಂಚಿ ಅರುಣ್ ಧುಮಾಲ್ (ಧರ್ಮಶಾಲಾ) ತಮ್ಮ ತವರು ನಗರಗಳಲ್ಲಿ ಪಂದ್ಯಗಳನ್ನು ನಡೆಸಲು ಇಚ್ಛಿಸಲಿದ್ದಾರೆ. ಉಳಿದ 5 ನಗರಗಳಾದ ಬೆಂಗಳೂರು, ಮುಂಬೈ, ಚೆನ್ನೈ, ದೆಹಲಿ ಹಾಗೂ ಹೈದರಾಬಾದ್‌ನಲ್ಲೂ ವಿಶ್ವ ಶ್ರೇಷ್ಠ ಕ್ರೀಡಾಂಗಣಗಳಿದ್ದು, 5 ನಗರಗಳನ್ನು ಅಂತಿಮಗೊಳಿಸುವುದು ಸವಾಲಾಗಿ ಪರಿಣಮಿಸಲಿದೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರತದ 9 ನಗರಗಳಲ್ಲಿ ಐಸಿಸಿ ಟಿ20 ವಿಶ್ವಕಪ್ ಪಂದ್ಯಗಳು?
ಟೂರ್ನಿಯು ಭಾರತದಿಂದ ಸ್ಥಳಾಂತರ ಮಾಡುವ ಸನ್ನಿವೇಶ ಎದುರಾದರೆ ಯುಎಇಗೆ ಸ್ಥಳಾಂತರಗೊಳ್ಳಲಿದೆ. ಅಲ್ಲಿ ಪಂದ್ಯಗಳನ್ನು ಆಯೋಜಿಸಲು ಬೇಕಿರುವ ಸಿದ್ಧತೆಗಳನ್ನು ಐಸಿಸಿ ಈಗಾಗಲೇ ಆರಂಭಿಸಿದೆ ಎಂದು ಬಿಸಿಸಿಐ ಅಧಿಕಾರಿ ಮಾಹಿತಿ ನೀಡಿದ್ದಾರೆ. ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಭಾರತದಲ್ಲಿ ಅಕ್ಟೋಬರ್ ಹಾಗೂ ನವೆಂಬರ್ ವೇಳೆ ನಡೆಯಲಿದ್ದು, ಇನ್ನೂ ಅಧಿಕೃತ ವೇಳಾಪಟ್ಟಿ ಪ್ರಕಟವಾಗಿಲ್ಲ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
"
