* ಪಾಕಿಸ್ತಾನದ ವೇಗಿ ಮೊಹಮ್ಮದ್ ಹಸ್ನೈನ್‌ಗೆ ಶಾಕ್ ಕೊಟ್ಟ ಐಸಿಸಿ* ನಿಯಮಬಾಹಿರ ಬೌಲಿಂಗ್ ಮಾಡಿದ ಹಸ್ನೈನ್‌ಗೆ ಬೌಲಿಂಗ್ ಮಾಡದಂತೆ ಐಸಿಸಿ ತಡೆ* ಐಸಿಸಿ ತೀರ್ಮಾನದ ಬಗ್ಗೆ ಪ್ರತಿಕ್ರಿಯೆ ನೀಡಿದ ಪಾಕಿಸ್ತಾನ ಕ್ರಿಕೆಟ್ ಮಂಡಳಿ

ದುಬೈ(ಫೆ.04): ಪಾಕಿಸ್ತಾನದ ವೇಗದ ಬೌಲರ್‌ ಮೊಹಮ್ಮದ್ ಹಸ್ನೈನ್‌ (Mohammad Hasnain) ಬೌಲಿಂಗ್ ಮಾಡದಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯು(ಐಸಿಸಿ) ಅಮಾನತು ವಿಧಿಸಿದೆ. ಮೊಹಮ್ಮದ್ ಹಸ್ನೈನ್‌ ನಿಯಮಬಾಹಿರವಾಗಿ ಬೌಲಿಂಗ್ ಮಾಡಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಐಸಿಸಿ (ICC) ಈ ಕಠಿಣ ನಿರ್ಧಾರವನ್ನು ಪ್ರಕಟಿಸಿದೆ. ಲಾಹೋರ್‌ನಲ್ಲಿರುವ ಐಸಿಸಿಯಿಂದ ಮಾನ್ಯತೆ ಪಡೆದ ಪರೀಕ್ಷಾ ಶಿಬಿರದಲ್ಲಿ ಮೊಹಮ್ಮದ್ ಹಸ್ನೈನ್‌ ಬೌಲಿಂಗ್‌ ಟೆಸ್ಟ್‌ಗೆ ಒಳಪಡಿಸಲಾಗಿತ್ತು. 

ಜನವರಿ ತಿಂಗಳಿನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ದೇಶಿ ಕ್ರಿಕೆಟ್‌ ಟೂರ್ನಿಯಲ್ಲಿ ಮೊಹಮ್ಮದ್ ಹಸ್ನೈನ್‌ ಅನುಮಾನಾಸ್ಪದ ಬೌಲಿಂಗ್ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು. ಹೀಗಾಗಿ ಲಾಹೋರ್‌ ಯೂನಿವರ್ಸಿಟಿ ಆಫ್‌ ಮ್ಯಾನೇಜ್‌ಮೆಂಟ್ ಸೈನ್ಸ್‌ನಲ್ಲಿ ಮೊಹಮ್ಮದ್ ಹಸ್ನೈನ್‌ ಅವರ ಬೌಲಿಂಗ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಪರೀಕ್ಷೆ ವೇಳೆ ಮೊಹಮ್ಮದ್ ಹಸ್ನೈನ್‌ ಐಸಿಸಿಯ 15 ಡಿಗ್ರಿ ಮಿತಿಗಿಂತ ಜಾಸ್ತಿ ಮೊಣಕೈ ವಿಸ್ತರಣೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಇದರ ಬೆನ್ನಲ್ಲೇ ಐಸಿಸಿ ನಿಯಮ ಉಲ್ಲಂಘಿಸಿದ ತಪ್ಪಿಗಾಗಿ ಪಾಕ್ ವೇಗಿಗೆ ಬೌಲಿಂಗ್ ಮಾಡದಂತೆ ತಡೆ ಹೇರಲಾಗಿದೆ.

ಈ ಕುರಿತಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು (Pakistan Cricket Board), ತನ್ನ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಮೊಹಮ್ಮದ್ ಹಸ್ನೈನ್‌ ಅವರ ಬೌಲಿಂಗ್ ಟೆಸ್ಟ್‌ನ ಕುರಿತಂತೆ ಕ್ರಿಕೆಟ್ ಆಸ್ಟ್ರೇಲಿಯಾ (Cricket Australia) ಕಳಿಸಿದ ವಿಸ್ತೃತ ಹಾಗೂ ಅಧಿಕೃತ ವರದಿ ಇಂದು ಪಿಸಿಬಿ ಕೈ ಸೇರಿದೆ. ಇದರಲ್ಲಿ ಮೊಹಮ್ಮದ್ ಹಸ್ನೈನ್‌ ಅವರ ಗುಡ್‌ ಲೆಂಗ್ತ್‌, ಫುಲ್ ಲೆಂಗ್ತ್, ಸ್ಲೋ ಬೌನ್ಸರ್ ಹಾಗೂ ಬೌನ್ಸರ್ ಎಸೆತಗಳನ್ನು ಹಾಕುವಾಗ ಅವರು 15 ಡಿಗ್ರಿ ಮಿತಿಗಿಂತ ಜಾಸ್ತಿ ಮೊಣಕೈ ವಿಸ್ತರಣೆ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ ಎಂದು ತಿಳಿಸಿದೆ.

Brendan Taylor Ban : ಜಿಂಬಾಬ್ವೆ ತಂಡದ ಮಾಜಿ ನಾಯಕ ಬ್ರೆಂಡನ್ ಟೇಲರ್ ಗೆ ನಿಷೇಧ ಶಿಕ್ಷೆ ವಿಧಿಸಿದ ಐಸಿಸಿ!

ಈ ಕುರಿತಂತೆ ಪಿಸಿಬಿಯು ತಮ್ಮ ಬೌಲಿಂಗ್ ತಜ್ಞರ ಜತೆ ಸಮಾಲೋಚನೆ ನಡೆಸಿದ್ದು, ಈ ಸಮಸ್ಯೆಗೆ ಆದಷ್ಟು ಬೇಗ ಪರಿಹಾರ ಕಂಡುಕೊಳ್ಳುವ ವಿಶ್ವಾಸವಿದೆ. ಪಿಸಿಬಿ ಸದ್ಯದಲ್ಲೇ ಬೌಲಿಂಗ್ ಸಲಹೆಗಾರರನ್ನು ನೇಮಕ ಮಾಡಿಕೊಳ್ಳಲಿದ್ದು, ಮೊಹಮ್ಮದ್ ಹಸ್ನೈನ್‌ ಅವರ ಸಮಸ್ಯೆಗೆ ಆದಷ್ಟು ಬೇಗ ಪರಿಹಾರ ಕಂಡುಕೊಳ್ಳುವತ್ತ ಕೆಲಸ ಮಾಡಲಿದ್ದಾರೆ ಎಂದು ಪಿಸಿಬಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇನ್ನು ತಮ್ಮ ಬೌಲಿಂಗ್ ಸುಧಾರಿಸಿಕೊಳ್ಳುವವರೆಗೂ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ (Pakistan Super League) ಪಾಲ್ಗೊಳ್ಳಲು ಮೊಹಮ್ಮದ್ ಹಸ್ನೈನ್‌ ಅವರಿಗೆ ಅವಕಾಶ ನೀಡುವುದಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಪಾಕಿಸ್ತಾನ ಕ್ರಿಕೆಟ್ ತಂಡದ (Pakistan Cricket Team) ಪಾಲಿಗೆ ಮೊಹಮ್ಮದ್ ಹಸ್ನೈನ್‌ ಅವರೊಬ್ಬ ಒಳ್ಳೆಯ ಬೌಲಿಂಗ್ ಅಸ್ತ್ರವಾಗಿದ್ದಾರೆ. ಪ್ರತಿ ಗಂಟೆಗೆ ನಿರಂತರವಾಗಿ 145+ ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡಬಲ್ಲ ಕೆಲವೇ ಕೆಲವು ಬೌಲರ್‌ಗಳಲ್ಲಿ ಮೊಹಮ್ಮದ್ ಹಸ್ನೈನ್‌ ಕೂಡಾ ಒಬ್ಬರಾಗಿದ್ದಾರೆ ಎಂದು ಪಿಸಿಬಿ ತಿಳಿಸಿದೆ.

Ind vs SL: ಇಂಡೋ-ಲಂಕಾ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆ, ಪಿಂಕ್ ಬಾಲ್ ಟೆಸ್ಟ್‌ಗೆ ಬೆಂಗಳೂರು ಆತಿಥ್ಯ..!

ಮೊಹಮ್ಮದ್ ಹಸ್ನೈನ್‌ ಅವರ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, ಪಿಸಿಬಿಯು ಹಸ್ನೈನ್‌ ಅವರ ಬೌಲಿಂಗ್ ಶೈಲಿಯನ್ನು ಸುಧಾರಿಸಿಕೊಳ್ಳಲು ಸೂಕ್ತ ಸಮಯಾವಕಾಶವನ್ನು ನೀಡಲಿದೆ ಹಾಗೂ ಪಿಎಸ್‌ಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳದಂತೆ ಸೂಚಿಸಲಾಗಿದೆ. ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಹಸ್ನೈನ್‌ ಪಾಲ್ಗೊಳ್ಳದಂತೆ ತಾಂತ್ರಿಕ ಸಮಿತಿ ಕೂಡಾ ಇದೇ ಸಲಹೆಯನ್ನು ನೀಡಿದೆ ಎಂದು ಪಿಸಿಬಿ ತಿಳಿಸಿದೆ.

ಇದೇ ವೇಳೆ, ಈ ಸಮಯದಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಆಯ್ಕೆ ಮಾಡುವ ಬೌಲಿಂಗ್ ಸಲಹೆಗಾರರ ಜತೆ ಚರ್ಚಿಸಿ ಅವರು ತಮ್ಮ ಬೌಲಿಂಗ್ ಶೈಲಿಯನ್ನು ಸುಧಾರಿಸಿಕೊಳ್ಳಲಿದ್ದಾರೆ. ಆದಷ್ಟು ಬೇಗ ತಮ್ಮ ಬೌಲಿಂಗ್ ಶೈಲಿಯಲ್ಲಿ ಬದಲಾವಣೆ ತಂದುಕೊಂಡು ಹಸ್ನೈನ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡುವ ವಿಶ್ವಾಸವಿದೆ ಎಂದು ಪಿಸಿಬಿ ತಿಳಿಸಿದೆ.