Ind vs SL: ಇಂಡೋ-ಲಂಕಾ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆ, ಪಿಂಕ್ ಬಾಲ್ ಟೆಸ್ಟ್‌ಗೆ ಬೆಂಗಳೂರು ಆತಿಥ್ಯ..!
ಬೆಂಗಳೂರು: ಶ್ರೀಲಂಕಾ ಕ್ರಿಕೆಟ್ ತಂಡವು (Sri Lanka Cricket Team) ಫೆಬ್ರವರಿ ತಿಂಗಳಾಂತ್ಯದಲ್ಲಿ ಭಾರತ ಪ್ರವಾಸ (India Tour) ಕೈಗೊಳ್ಳಲಿದ್ದು, ಈ ವೇಳೆ ಮೂರು ಪಂದ್ಯಗಳ ಟಿ20 ಸರಣಿ ಹಾಗೂ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ. ಟೆಸ್ಟ್ ಸರಣಿಗೂ ಮುಂಚೆ ಟಿ20 ಸರಣಿ ನಡೆಯಲಿದ್ದು, ಬೆಂಗಳೂರಿನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯವು ಹಗಲು-ರಾತ್ರಿ ಟೆಸ್ಟ್ (Day and Night Test) ಪಂದ್ಯವಾಗಿರಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ 3 ಪಂದ್ಯಗಳ ಏಕದಿನ ಸರಣಿ ಹಾಗೂ 3 ಪಂದ್ಯಗಳ ಟಿ20 ಸರಣಿ ಮುಕ್ತಾಯದ ಬಳಿಕ ಶ್ರೀಲಂಕಾ ಕ್ರಿಕೆಟ್ ತಂಡವು ಭಾರತ ಪ್ರವಾಸವನ್ನು ಕೈಗೊಳ್ಳಲಿದೆ.
ಶ್ರೀಲಂಕಾ ಕ್ರಿಕೆಟ್ ತಂಡವು, ಭಾರತ ಪ್ರವಾಸದಲ್ಲಿ ಮೂರು ಪಂದ್ಯಗಳ ಟಿ20 ಸರಣಿ ಹಾಗೂ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ. ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಕ್ರಿಕೆಟ್ ಸರಣಿಯು ಫೆಬ್ರವರಿ 25ರಿಂದ ಆರಂಭವಾಗಲಿದೆ.
ಶ್ರೀಲಂಕಾ ತಂಡವು ಭಾರತ ಪ್ರವಾಸದಲ್ಲಿ ಈ ಮೊದಲು ನಿಗದಿಯಾದಂತೆ ಮೊದಲಿಗೆ ಟೆಸ್ಟ್ ಆ ಬಳಿಕ ಟಿ20 ಸರಣಿಯನ್ನಾಡಬೇಕಿತ್ತು. ಆದರೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಮನವಿಯ ಮೇರೆಗೆ ಟಿ20 ಸರಣಿಯನ್ನು ಮೊದಲಿಗೆ ಆಯೋಜಿಸಲು ಇದೀಗ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಆಸ್ಟ್ರೇಲಿಯಾದಿಂದ ನೇರವಾಗಿ ಭಾರತದಲ್ಲಿನ ಬಯೋ ಬಬಲ್‌ನೊಳಗೆ ಸೇರ್ಪಡೆಯಾಗಲು ಲಂಕಾ ಆಟಗಾರರಿಗೆ ಅನುಕೂಲವಾಗುವ ದೃಷ್ಟಿಯಿಂದ ಟಿ20 ಸರಣಿಯನ್ನು ಮೊದಲು ಆಯೋಜಿಸಲು ಲಂಕಾ ಕ್ರಿಕೆಟ್ ಮಂಡಳಿಯು ಬಿಸಿಸಿಐ ಬಳಿ ಮನವಿ ಮಾಡಿತ್ತು. ಮೂರು ಪಂದ್ಯಗಳ ಟಿ20 ಸರಣಿಯು ಧರ್ಮಶಾಲಾ ಹಾಗೂ ಮೊಹಾಲಿಯಲ್ಲಿ ನಡೆಯಲಿದೆ.
ಇದೀಗ ಇಂಡೋ-ಲಂಕಾ ಟೆಸ್ಟ್ ಸರಣಿಯ ವೇಳಾಪಟ್ಟಿ ಪರಿಷ್ಕರಣೆಯಾಗಿರುವ ಹಿನ್ನೆಲೆಯಲ್ಲಿ ವಿರಾಟ್ ಕೊಹ್ಲಿ ಪಾಲಿನ 100ನೇ ಟೆಸ್ಟ್ ಪಂದ್ಯಕ್ಕೆ ಮೊಹಾಲಿ ಆತಿಥ್ಯ ವಹಿಸುವ ಸಾಧ್ಯತೆಯಿದೆ. ಮೊದಲ ಟೆಸ್ಟ್ ಪಂದ್ಯವು ಮೊಹಾಲಿಯಲ್ಲಿ ನಡೆದರೆ, ಎರಡನೇ ಟೆಸ್ಟ್ ಪಂದ್ಯಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ಸಾಕ್ಷಿಯಾಗಲಿದೆ.
ಇನ್ನು ಮೊಹಾಲಿಯಲ್ಲಿ ನಡೆಯಬೇಕಿದ್ದ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಬಿಸಿಸಿಐ ಬೆಂಗಳೂರಿಗೆ ಸ್ಥಳಾಂತರಿಸಿದೆ. ಫೆಬ್ರವರಿ ತಿಂಗಳಿನಲ್ಲಿ ದೀರ್ಘಕಾಲದ ಚಳಿ ಇರಲಿದ್ದು, ಸಂಜೆಯ ವೇಳೆಗೆ ಹೆಚ್ಚು ಇಬ್ಬನಿ ಕೂಡಾ ಬೀಳುವುದರಿಂದ ಮೊಹಾಲಿಯಲ್ಲಿ ಹಗಲು-ರಾತ್ರಿ ಟೆಸ್ಟ್ ಪಂದ್ಯ ಆಯೋಜನೆ ಕಷ್ಟ ಎನ್ನುವ ತೀರ್ಮಾನಕ್ಕೆ ಬಿಸಿಸಿಐ ಬಂದಿದೆ.
ಇದಷ್ಟೇ ಅಲ್ಲದೇ ಬೆಂಗಳೂರಿನಿಂದ ಕೊಲಂಬೊಗೆ ನೇರ ವಿಮಾನಯಾನ ವ್ಯವಸ್ಥೆಯಿರುವುದರಿಂದ ಎರಡನೇ ಟೆಸ್ಟ್ ಪಂದ್ಯವನ್ನು ಬೆಂಗಳೂರಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ.