Asianet Suvarna News Asianet Suvarna News

World Cup 2023: ಬಿಸಿಸಿಐನಿಂದ ಟಿಕೆಟ್‌ ಸುಲಿಗೆ..? ಕ್ರಿಕೆಟ್‌ ಫ್ಯಾನ್ಸ್‌ಗಳಿಂದ ಹಿಡಿಶಾಪ..!

ಟಿಕೆಟ್‌ ಮಾರಾಟ ವಿಚಾರದಲ್ಲಿ ಬಿಸಿಸಿಐ ಪಾರದರ್ಶಕ ಮಾರ್ಗ ಪಾಲಿಸದ ಕಾರಣದಿಂದಲೇ ಅಭಿಮಾನಿಗಳಿಗೆ ಟಿಕೆಟ್‌ ಸಿಗುತ್ತಿಲ್ಲ. ಟಿಕೆಟ್‌ ಖರೀದಿಸಿ ಕ್ರೀಡಾಂಗಣಕ್ಕೆ ಹೋಗಲು ಆಸಕ್ತಿ ಇರುವವರಿಗೂ ಟಿಕೆಟ್‌ ಖರೀದಿ ಹೇಗೆ ಎನ್ನುವ ಮಾಹಿತಿಯೇ ಲಭ್ಯವಾಗುತ್ತಿಲ್ಲ ಎಂದು ಹಲವರು ಕಿಡಿಕಾರಿದ್ದಾರೆ.

ICC ODI World Cup 2023 BCCI under fire over low attendance ticket mismanagement kvn
Author
First Published Oct 11, 2023, 1:23 PM IST

ನವದೆಹಲಿ(ಅ.11): ಏಕದಿನ ವಿಶ್ವಕಪ್‌ ಟಿಕೆಟ್‌ ಮಾರಾಟ ವಿಚಾರದಲ್ಲಿ ಎಡವಟ್ಟು ಮಾಡಿಕೊಂಡು ಈಗಾಗಲೇ ಸಾಕಷ್ಟು ಟೀಕೆಗಳನ್ನು ಎದುರಿಸಿರುವ ಬಿಸಿಸಿಐ, ಟಿಕೆಟ್‌ ಮಾರಾಟದಲ್ಲಿ ಪಾರದರ್ಶಕತೆ ತೋರುತ್ತಿಲ್ಲ ಎಂಬ ಆರೋಪಗಳು ಕ್ರಿಕೆಟ್‌ ಅಭಿಮಾನಿಗಳಿಂದ ವ್ಯಕ್ತವಾಗುತ್ತಿದೆ.

ವಿಶ್ವಕಪ್‌ ಆರಂಭಕ್ಕೆ ಕೇವಲ ಒಂದೂವರೆ ಎರಡು ತಿಂಗಳ ಮೊದಲಷ್ಟೇ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ, ಟಿಕೆಟ್‌ ಮಾರಾಟದಲ್ಲೂ ಭಾರಿ ಗೊಂದಲ ಸೃಷ್ಟಿಸಿತ್ತು. ಆನ್‌ಲೈನ್‌ನಲ್ಲಿ ಗಂಟೆಗಟ್ಟಲೆ ಕಾದರೂ ಟಿಕೆಟ್‌ ಸಿಗುತ್ತಿಲ್ಲ ಎಂದು ಸಾವಿರಾರು ಮಂದಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಮತ್ತೊಂದು ಗಂಭೀರ ಆರೋಪ ಬಿಸಿಸಿಐ ವಿರುದ್ಧ ಕೇಳಿಬರುತ್ತಿದೆ.

ICC World Cup 2023 ಲಂಕಾ ಎದುರು ದಾಖಲೆ ರನ್ ಚೇಸ್‌ ಮಾಡಿ ಗೆದ್ದ ಪಾಕಿಸ್ತಾನ..!

ಟಿಕೆಟ್‌ಗಳನ್ನು ದೊಡ್ಡ ಮೊತ್ತಕ್ಕೆ ಮಾರಾಟ ಮಾಡುವ ಉದ್ದೇಶದಿಂದ ಪಂದ್ಯಕ್ಕೆ ಕೆಲವೇ ಗಂಟೆಗಳು ಬಾಕಿ ಇದ್ದಾಗ ಆನ್‌ಲೈನ್‌ನಲ್ಲಿ ಕೆಲ ಸಾವಿರ ಟಿಕೆಟ್‌ಗಳನ್ನು ಮಾರಾಟಕ್ಕಿಡಲಾಗುತ್ತಿದೆ. ನಿಜವಾದ ಕ್ರಿಕೆಟ್‌ ಅಭಿಮಾನಿಗಳಿಗೆ ಟಿಕೆಟ್‌ಗಳು ಲಭ್ಯವಾಗುತ್ತಿಲ್ಲ ಎಂದು ಟ್ವೀಟರ್‌ನಲ್ಲಿ ಹಲವರು ಸಿಟ್ಟು ಹೊರಹಾಕಿದ್ದಾರೆ.

ಭಾರತ-ಪಾಕಿಸ್ತಾನದ ಪಂದ್ಯದ ಇನ್ನೂ 14,000 ಟಿಕೆಟ್‌ಗಳನ್ನು ಅ.14ರಂದು ಮಾರಾಟಕ್ಕೆ ಲಭ್ಯಗೊಳಿಸುವುದಾಗಿ ಬಿಸಿಸಿಐ ಭಾನುವಾರ ಪ್ರಕಟಣೆ ಹೊರಡಿಸಿತ್ತು. ಇದಕ್ಕೂ ಅಭಿಮಾನಿಗಳಿಂದ ಆಕ್ರೋಶ ವ್ಯಕ್ತವಾಗಿದೆ. ಕಳೆದ ತಿಂಗಳು ಟಿಕೆಟ್‌ ಮಾರಾಟ ಶುರುವಾದಾಗ ಕೆಲವೇ ಗಂಟೆಗಳಲ್ಲಿ ಸೋಲ್ಡ್‌ ಔಟ್‌ ಎಂದು ಪ್ರದರ್ಶಿಸಲಾಯಿತು. ಇದೀಗ ಮತ್ತೆ ಟಿಕೆಟ್‌ ಮಾರಾಟ ಆರಂಭಿಸುವುದಾಗಿ ಬಿಸಿಸಿಐ ಹೇಳುತ್ತಿದೆ. ಬೇಡಿಕೆ ನೋಡಿಕೊಂಡು ಟಿಕೆಟ್‌ಗಳ ಬೆಲೆಯನ್ನು ದುಬಾರಿ ಬೆಲೆಗೆ ಮಾರುವುದು ಬಿಸಿಸಿಐನ ಉದ್ದೇಶ ಎಂದು ಕಿಡಿಕಾರಿದ್ದಾರೆ.

ಕ್ರೀಡಾಂಗಣ ಭರ್ತಿಯಾಗದೆ ಇರಲು ಟಿಕೆಟ್‌ ಅವ್ಯವಸ್ಥೆ ಕಾರಣ?

ಉದ್ಘಾಟನಾ ಪಂದ್ಯಕ್ಕೆ ನಿರೀಕ್ಷಿತ ಜನ ಸೇರದಿದ್ದಾಗ ಹಲವರು ಭಾರತ ಪಂದ್ಯಕ್ಕೆ ಕ್ರೀಡಾಂಗಣಗಳು ತುಂಬಿ ತುಳುಕಲಿವೆ ಎಂದು ನಿರೀಕ್ಷಿಸಿದ್ದರು. ಆದರೆ ಚೆನ್ನೈನಲ್ಲಿ ಭಾರತದ ಪಂದ್ಯಕ್ಕೂ ಕ್ರೀಡಾಂಗಣ ಭರ್ತಿಯಾಗಿರಲಿಲ್ಲ. ಟಿಕೆಟ್‌ ಮಾರಾಟ ವಿಚಾರದಲ್ಲಿ ಬಿಸಿಸಿಐ ಪಾರದರ್ಶಕ ಮಾರ್ಗ ಪಾಲಿಸದ ಕಾರಣದಿಂದಲೇ ಅಭಿಮಾನಿಗಳಿಗೆ ಟಿಕೆಟ್‌ ಸಿಗುತ್ತಿಲ್ಲ. ಟಿಕೆಟ್‌ ಖರೀದಿಸಿ ಕ್ರೀಡಾಂಗಣಕ್ಕೆ ಹೋಗಲು ಆಸಕ್ತಿ ಇರುವವರಿಗೂ ಟಿಕೆಟ್‌ ಖರೀದಿ ಹೇಗೆ ಎನ್ನುವ ಮಾಹಿತಿಯೇ ಲಭ್ಯವಾಗುತ್ತಿಲ್ಲ ಎಂದು ಹಲವರು ಕಿಡಿಕಾರಿದ್ದಾರೆ.

World Cup 2023 ಆಸೀಸ್ ಎದುರಿನ ಗೆಲುವಿನ ಖುಷಿಯಲ್ಲಿದ್ದ ಟೀಂ ಇಂಡಿಯಾಗೆ ಮತ್ತೊಂದು ಬಿಗ್‌ ಶಾಕ್..!

ಧರ್ಮಶಾಲಾ ಸ್ಟೇಡಿಯಂನ ಔಟ್‌ಫೀಲ್ಡ್‌ ಅಪಾಯಕಾರಿ!

ಧರ್ಮಶಾಲಾ: ಫೀಲ್ಡಿಂಗ್‌ ವೇಳೆ ಆಟಗಾರರು ಬೀಳುವುದು ಸಾಮಾನ್ಯ. ಆಧುನಿಕ ಕ್ರಿಕೆಟ್‌ನಲ್ಲಿ ಫೀಲ್ಡಿಂಗ್‌ನಿಂದಲೇ ಎಷ್ಟೋ ಪಂದ್ಯಗಳನ್ನು ಗೆದ್ದ ಉದಾಹರಣೆಗಳಿವೆ. ಆದರೆ ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್‌ ಸಂಸ್ಥೆ(ಎಚ್‌ಪಿಸಿಎ) ಮೈದಾನದ ಔಟ್‌ಫೀಲ್ಡ್‌ ಅಪಾಯಕಾರಿಯಾಗಿದ್ದು, ಆಟಗಾರರಿಗೆ ಫೀಲ್ಡಿಂಗ್‌ ವೇಳೆ ಡೈವ್‌ ಮಾಡದಂತೆ ಸೂಚಿಸಲಾಗಿದೆ ಎನ್ನುವ ಆಘಾತಕಾರಿ, ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಂಗ್ಲೆಂಡ್‌ ತಂಡದ ನಾಯಕ ಜೋಸ್‌ ಬಟ್ಲರ್‌, ‘ಔಟ್‌ಫೀಲ್ಡ್‌ ಅಪಾಯಕಾರಿಯಾಗಿದೆ. ಫೀಲ್ಡರ್‌ಗಳು ಚೆಂಡನ್ನು ಹಿಡಿಯುವಾಗ ಬೀಳದಿರುವಂತೆ ಎಚ್ಚರಿಸಲಾಗಿದೆ. ಇದು ಕಳಪೆ ವ್ಯವಸ್ಥೆ. ಶೇ.100ರಷ್ಟು ಪರಿಶ್ರಮದೊಂದಿಗೆ ಆಡಲು ಸಾಧ್ಯವಾಗದೆ ಇರುವ ಜಾಗದಲ್ಲಿ ಆಟಗಾರರು ಅಥವಾ ತಂಡಗಳು ಇರಬಾರದು ಎನ್ನುವುದು ನನ್ನ ನಂಬಿಕೆ. ಆದರೆ ನಮಗೆ ಪಂದ್ಯವಾಡದೆ ಬೇರೆ ಆಯ್ಕೆಯಿಲ್ಲ. ಎರಡೂ ತಂಡಗಳ ಆಟಗಾರರು ಗಾಯಗೊಳ್ಳದೆ ಇರಲಿ ಎಂದು ಆಶಿಸುತ್ತೇನೆ’ ಎಂದಿದ್ದಾರೆ.

ಆಸ್ಪತ್ರೆಗೆ ದಾಖಲಾದ ಟೀಂ ಇಂಡಿಯಾದ ಪ್ರಮುಖ ಆಟಗಾರ: ಪಾಕ್‌ ವಿರುದ್ಧದ ಪಂದ್ಯಕ್ಕೆ ಡೌಟ್‌!

3 ದಿನಗಳ ಹಿಂದೆ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಅಫ್ಘಾನಿಸ್ತಾನದ ಮುಜೀಬ್‌ ಉರ್‌ ರಹಮಾನ್‌ ಫೀಲ್ಡಿಂಗ್‌ ವೇಳೆ ಬಿದ್ದಾಗ ಅವರಿಗೆ ಸಣ್ಣ ಪ್ರಮಾಣದ ಗಾಯಗಳಾದವು. ಈ ಬಗ್ಗೆ ಸಿಟ್ಟಿನಿಂದಲೇ ಪ್ರತಿಕ್ರಿಯಿಸಿದ ತಂಡದ ಕೋಚ್‌ ಜೊನಾಥನ್‌ ಟ್ರಾಟ್‌, ‘ವಿಶ್ವಕಪ್ ಪಂದ್ಯಕ್ಕೆ ಇಂತಹ ಕಳಪೆ ಗುಣಮಟ್ಟದ ಔಟ್‌ಫೀಲ್ಡ್‌ ಇರುವ ಕ್ರೀಡಾಂಗಣವನ್ನು ಆಯ್ಕೆ ಮಾಡಿರುವುದು ದುರದೃಷ್ಟಕರ. ಮುಜೀಬ್‌ರ ಮಂಡಿ ಗಾಯ ಆತಂಕಕಾರಿಯಲ್ಲದೆ ಇರುವುದು ನಮ್ಮ ಅದೃಷ್ಟ’ ಎಂದರು.

ಈ ಪಂದ್ಯದ ಬಳಿಕ ಪರಿಶೀಲಿಸಿದ ಐಸಿಸಿ ತಂಡ, ಔಟ್‌ಫೀಲ್ಡ್‌ ‘ಸಾಧಾರಣ’ ಗುಣಮಟ್ಟದ್ದಾಗಿದೆ. ಆಡಲು ಅಡ್ಡಿಯಿಲ್ಲ ಎಂದು ನಿರ್ಧರಿಸಿತು. ವಿಶ್ವಕಪ್‌ ಆರಂಭಕ್ಕೂ ಮೊದಲೇ ಧರ್ಮಶಾಲಾ ಕ್ರೀಡಾಂಗಣದ ಔಟ್‌ಫೀಲ್ಡ್‌ನಲ್ಲಿ ಫಂಗಸ್‌ ಕಂಡು ಬಂದಿತ್ತು. ಅದನ್ನು ನಾಶಪಡಿಸಲು ಔಟ್‌ಫೀಲ್ಡ್‌ನಲ್ಲಿ ಹುಲ್ಲು ಕತ್ತರಿಸಿ, ರಾಸಾಯನಿಕಗಳನ್ನು ಸಿಂಪಡಿಸಲಾಗಿತ್ತು.

Follow Us:
Download App:
  • android
  • ios