ನೂತನ ಐಸಿಸಿ ರ್‍ಯಾಂಕಿಂಗ್‌ನಲ್ಲಿ, ಭಾರತದ ನಾಯಕ ಶುಭ್‌ಮನ್ ಗಿಲ್ ಏಕದಿನ ಬ್ಯಾಟಿಂಗ್‌ನಲ್ಲಿ ಮತ್ತೆ ನಂ.1 ಸ್ಥಾನಕ್ಕೇರಿದ್ದಾರೆ. ಜಿಂಬಾಬ್ವೆ ಸರಣಿಯಲ್ಲಿ ಮಿಂಚಿದ ಯುವ ಆಟಗಾರ ವೈಭವ್ ಸೂರ್ಯವಂಶಿ ಟಿ20 ರ್‍ಯಾಂಕಿಂಗ್‌ನಲ್ಲಿ 230 ಸ್ಥಾನಗಳ ಭರ್ಜರಿ ಜಿಗಿತ ಕಂಡಿದ್ದಾರೆ. ತಿಲಕ್ ವರ್ಮಾ ಮತ್ತು ಶ್ರೇಯಸ್ ಅಯ್ಯರ್ ಕೂಡ ತಮ್ಮ ಶ್ರೇಯಾಂಕವನ್ನು ಸುಧಾರಿಸಿಕೊಂಡಿದ್ದಾರೆ.
ದುಬೈ: ಇತ್ತೀಚೆಗಷ್ಟೇ ಜಿಂಬಾಬ್ವೆ ಎದುರಿನ ಮೂರು ಪಂದ್ಯಗಳ ಟಿ20 ಸರಣಿ ಮುಕ್ತಾಯವಾದ ಬೆನ್ನಲ್ಲೇ ನೂತನ ಐಸಿಸಿ ಏಕದಿನ ಹಾಗೂ ಟಿ20 ರ್‍ಯಾಂಕಿಂಗ್ ಪ್ರಕಟವಾಗಿದೆ. ಭಾರತ ಏಕದಿನ ತಂಡದ ನಾಯಕ ಶುಭ್‌ಮನ್ ಗಿಲ್ ಇದೀಗ ಏಕದಿನ ಬ್ಯಾಟರ್‌ಗಳ ರ್‍ಯಾಂಕಿಂಗ್‌ನಲ್ಲಿ ಮತ್ತೆ ನಂ.1 ಸ್ಥಾನಕ್ಕೇರಿದ್ದಾರೆ. ಇಂಗ್ಲೆಂಡ್ ಎದುರಿನ ಏಕದಿನ ಸರಣಿಯಲ್ಲಿ ಶುಭ್‌ಮನ್ ಗಿಲ್ 80, 31 ಹಾಗೂ 77 ರನ್ ಚಚ್ಚಿದ್ದರು. ಟೀಂ ಇಂಡಿಯಾ ಸರಣಿ ಸೋಲಿನ ಹೊರತಾಗಿಯೂ, ನಾಯಕ ಗಿಲ್ ನ್ಯೂಜಿಲೆಂಡ್ ಬ್ಯಾಟರ್ ಡೇರಲ್ ಮಿಚೆಲ್ ಹಿಂದಿಕ್ಕಿ ಇದೀಗ ನಂ.1 ಸ್ಥಾನಕ್ಕೇರಿದ್ದಾರೆ.
ಡೇರಲ್ ಮಿಚೆಲ್ ವೆಸ್ಟ್ ಇಂಡೀಸ್ ಎದುರಿನ ಕೊನೆಯ ಏಕದಿನ ಪಂದ್ಯದಿಂದ ಹೊರಗುಳಿದ ಬೆನ್ನಲ್ಲೇ ಶುಭ್‌ಮನ್ ಗಿಲ್ ಏಕದಿನ ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರಿದ್ದಾರೆ. ಟೀಂ ಇಂಡಿಯಾ ನಾಯಕ ಗಿಲ್ ಮೂರನೇ ಬಾರಿಗೆ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರಿದ್ದಾರೆ ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
230 ಸ್ಥಾನ ಜಿಗಿತ ಕಂಡ ವೈಭವ್ ಸೂರ್ಯವಂಶಿ:
ಇನ್ನು ಇಂಗ್ಲೆಂಡ್ ಎದುರಿನ ಟಿ20 ಸರಣಿಯಲ್ಲಿ ನಿರಾಸೆ ಮೂಡಿಸಿದ್ದ 15 ವರ್ಷದ ವೈಭವ್ ಸೂರ್ಯವಂಶಿ, ಇದೀಗ ಜಿಂಬಾಬ್ವೆ ಎದುರಿನ ಟಿ20 ಸರಣಿಯಲ್ಲಿ ಲಯಕ್ಕೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ. ಜಿಂಬಾಬ್ವೆ ಎದುರು ಮೊದಲ ಪಂದ್ಯದಲ್ಲಿ 50 ಹಾಗೂ ಮೂರನೇ ಟಿ20 ಪಂದ್ಯದಲ್ಲಿ ಸ್ಪೋಟಕ 81 ರನ್ ಚಚ್ಚಿದ್ದ ವೈಭವ್ ಸೂರ್ಯವಂಶಿ ಬರೋಬ್ಬರಿ 230 ಸ್ಥಾನ ಜಿಗಿತ ಕಂಡು ಇದೀಗ 48ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಜಿಂಬಾಬ್ವೆ ಎದುರಿನ ಮೂರು ಪಂದ್ಯಗಳ ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರಿದ್ದಕ್ಕೆ ವೈಭವ್ ಸೂರ್ಯವಂಶಿ ಸರಣಿಶ್ರೇಷ್ಠ ಪ್ರಶಸ್ತಿಗೆ ಪಾತ್ರರಾಗಿದ್ದರು. ಜಿಂಬಾಬ್ವೆ ಎದುರಿನ ಟಿ20 ಸರಣಿಯಲ್ಲಿ ವೈಭವ್ 151 ರನ್ ಗಳಿಸಿದ್ದರು.
ಇನ್ನುಳಿದಂತೆ ಭಾರತ ಟಿ20 ತಂಡದ ಉಪನಾಯಕ ತಿಲಕ್ ವರ್ಮಾ ಎರಡು ಸ್ಥಾನ ಏರಿಕೆ ಕಂಡು ಆರನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಇನ್ನು ನಾಯಕ ಶ್ರೇಯಸ್ ಅಯ್ಯರ್ ಏಳು ಸ್ಥಾನ ಜಿಗಿತ ಕಂಡು 24ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಇನ್ನು ಭಾರತ ಎದುರು ಮಿಂಚಿನ ದಾಳಿ ನಡೆಸಿದ ಬ್ಲೆಸ್ಸಿಂಗ್ ಮುಜರಬಾನಿ 10 ಸ್ಥಾನ ಜಿಗಿತ ಕಂಡು ಬೌಲರ್ ಶ್ರೇಯಾಂಕದಲ್ಲಿ 26ನೇ ಸ್ಥಾನಕ್ಕೆ ಎಂಟ್ರಿಕೊಟ್ಟಿದ್ದಾರೆ.
ಟಾಪ್ 20 ಪಟ್ಟಿಯಲ್ಲಿ ಸ್ಥಾನ ಉಳಿಸಿಕೊಂಡ ವೈಭವ್ ಸೂರ್ಯವಂಶಿ:
ಇನ್ನು ಕಳೆದ ಮೂರು ಟಿ20 ಸರಣಿಯಲ್ಲಿ ಭಾರತ ತಂಡದಿಂದ ಹೊರಗುಳಿದಿರುವ ಟೀಂ ಇಂಡಿಯಾ ಮಾಜಿ ನಾಯಕ ಸೂರ್ಯಕುಮಾರ್ ಯಾದವ್ ಇನ್ನೂ ಟಾಪ್ 20 ಪಟ್ಟಿಯೊಳಗೆ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಸೂರ್ಯಕುಮಾರ್ ಯಾದವ್ ಟಿ20 ಬ್ಯಾಟರ್‌ಗಳ ರ್‍ಯಾಂಕಿಂಗ್‌ನಲ್ಲಿ 19ನೇ ಸ್ಥಾನ ಉಳಿಸಿಕೊಂಡಿದ್ದಾರೆ. ಟಿ20 ಬೌಲಿಂಗ್ ವಿಭಾಗದಲ್ಲಿ ಟಾಪ್ 10 ಪಟ್ಟಿಯಲ್ಲಿ ಭಾರತದ ಏಕೈಕ ಬೌಲರ್ ಸ್ಥಾನ ಪಡೆದಿದ್ದಾರೆ. ಜಿಂಬಾಬ್ವೆ ಎದುರಿನ ಸರಣಿಯಿಂದ ಹೊರಬಿದ್ದ ವರುಣ್ ಚಕ್ರವರ್ತಿ ಮೂರು ಸ್ಥಾನ ಕುಸಿತ ಕಂಡು 9ನೇ ಸ್ಥಾನಕ್ಕೆ ಜಾರಿದ್ದಾರೆ. ಇನ್ನು ಟಿ20 ಆಲ್ರೌಂಡರ್‌ಗಳ ರ್‍ಯಾಂಕಿಂಗ್‌ನಲ್ಲಿ ಹಾರ್ದಿಕ್ ಪಾಂಡ್ಯ ಐದನೇ ಸ್ಥಾನದಲ್ಲಿದ್ದಾರೆ.


