ದುಬೈನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ, ನ್ಯೂಜಿಲೆಂಡ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಎರಡೂ ತಂಡಗಳು ಸೆಮಿಫೈನಲ್ ತಲುಪಿರುವುದರಿಂದ, ಇದು ಔಪಚಾರಿಕ ಪಂದ್ಯವಾಗಿದೆ. ಭಾರತವು ಗೆದ್ದರೆ ಆಸ್ಟ್ರೇಲಿಯಾ ವಿರುದ್ಧ, ಸೋತರೆ ದಕ್ಷಿಣ ಆಫ್ರಿಕಾ ವಿರುದ್ಧ ಸೆಮಿಫೈನಲ್ ಆಡಲಿದೆ. ವಿರಾಟ್ ಕೊಹ್ಲಿ ಅವರ 300ನೇ ಏಕದಿನ ಪಂದ್ಯ ಇದಾಗಿದೆ.
ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕ ಮಿಚೆಲ್ ಸ್ಯಾಂಟ್ನರ್ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಈಗಾಗಲೇ ಎರಡೂ ತಂಡಗಳು ಸೆಮೀಸ್ ಹಾದಿಯನ್ನು ಖಚಿತಪಡಿಸಿಕೊಂಡಿದ್ದು, ಉಭಯ ತಂಡಗಳ ಪಾಲಿಗೆ ಇದು ಒಂದು ರೀತಿ ಔಪಚಾರಿಕ ಪಂದ್ಯ ಎನಿಸಿಕೊಂಡಿದೆ.
ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ನಿರೀಕ್ಷೆಯಂತೆಯೇ ಭಾರತ ತಂಡದಲ್ಲಿ ಒಂದು ಬದಲಾವಣೆಗಳೊಂದಿಗೆ ಕಣಕ್ಕಿಳಿದಿದೆ. ಹರ್ಷಿತ್ ರಾಣಾ ಬದಲಿಗೆ ವರುಣ್ ಚಕ್ರವರ್ತಿ ತಂಡ ಕೂಡಿಕೊಂಡಿದ್ದಾರೆ. ನ್ಯೂಜಿಲೆಂಡ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಡೇರಲ್ ಮಿಚೆಲ್ ತಂಡ ಕೂಡಿಕೊಂಡಿದ್ದು, ಡೆವೊನ್ ಕಾನ್‌ವೇ ತಂಡದಿಂದ ಹೊರಬಿದ್ದಿದ್ದಾರೆ.
ಗ್ರೂಪ್ 'ಎ' ಹಂತದಲ್ಲಿ ಭಾರತ ತಂಡವು ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ಎದುರು ಭರ್ಜರಿ ಗೆಲುವುಗಳನ್ನು ಸಾಧಿಸಿದ್ದು, ಸೆಮೀಸ್‌ಗೂ ಮುನ್ನ ಕೊನೆಯ ಪಂದ್ಯವನ್ನು ಗೆದ್ದು ನಾಕೌಟ್ ಹಂತ ಪ್ರವೇಶಿಸುವ ವಿಶ್ವಾಸದಲ್ಲಿದೆ. ಮೇಲ್ನೋಟಕ್ಕೆ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಬಲಿಷ್ಠವಾಗಿ ಗುರುತಿಸಿಕೊಂಡಿರುವ ಭಾರತ ತಂಡವು ಮತ್ತೊಂದು ಸುಲಭ ಗೆಲುವಿನ ವಿಶ್ವಾಸದಲ್ಲಿದೆ.
ಇನ್ನೊಂದೆಡೆ ಮಿಚೆಲ್ ಸ್ಯಾಂಟ್ನರ್ ನೇತೃತ್ವದ ನ್ಯೂಜಿಲೆಂಡ್ ಕೂಡಾ ಭರ್ಜರಿ ಪ್ರದರ್ಶನದ ಮೂಲಕ ಮಿಂಚುತ್ತಿದ್ದು ಸತತ ಎರಡು ಗೆಲುವು ದಾಖಲಿಸುವುದರ ಜತೆಗೆ ನೆಟ್ ರನ್‌ರೇಟ್ ವಿಚಾರದಲ್ಲೂ ಭಾರತ ತಂಡವನ್ನು ಹಿಂದಿಕ್ಕಿ 'ಎ' ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಕೇನ್ ವಿಲಿಯಮ್ಸನ್, ರಚಿನ್ ರವೀಂದ್ರ ಅವರು ಒಳ್ಳೆಯ ಫಾರ್ಮ್‌ನಲ್ಲಿದ್ದು, ಟೀಂ ಇಂಡಿಯಾಗೆ ಕಠಿಣ ಸವಾಲೊಡ್ಡಲು ರೆಡಿಯಾಗಿದ್ದಾರೆ.
ಇಂದಿನ ಪಂದ್ಯದಲ್ಲಿ ಭಾರತ ತಂಡವು ಗೆಲುವು ಸಾಧಿಸಿದರೆ, ಸೆಮೀಸ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಒಂದು ವೇಳೆ ಇಂದಿನ ಪಂದ್ಯ ಸೋತರೇ ಸೆಮೀಸ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.
ವಿರಾಟ್ ಕೊಹ್ಲಿಗಿಂದು 300ನೇ ಏಕದಿನ ಪಂದ್ಯ: ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ ಇದೀಗ ಮುನ್ನೂರನೇ ಏಕದಿನ ಪಂದ್ಯವನ್ನಾಡಲು ಸಜ್ಜಾಗಿದ್ದಾರೆ. ಕಳೆದ ಪಂದ್ಯದಲ್ಲಿ ಅಜೇಯ ಶತಕ ಸಿಡಿಸಿ ಮಿಂಚಿದ್ದ ವಿರಾಟ್ ಕೊಹ್ಲಿ, ತಮ್ಮ ಪಾಲಿನ 300ನೇ ಏಕದಿನ ಪಂದ್ಯದಲ್ಲೂ ಶತಕ ಸಿಡಿಸಿ ಸ್ಮರಣೀಯವಾಗಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ. ಅಂದಹಾಗೆ 2017ರಲ್ಲಿ ವಿರಾಟ್ ಕೊಹ್ಲಿ ತಾವಾಡಿದ 200ನೇ ಏಕದಿನ ಪಂದ್ಯದಲ್ಲಿ ಕಿವೀಸ್ ಎದುರೇ ಶತಕ ಸಿಡಿಸಿದ್ದರು ಎನ್ನುವುದು ಗಮನಾರ್ಹ.
