ದುಬೈ[ಫೆ.28]: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಬುಧವಾರ ಇಲ್ಲಿ ಆರಂಭಗೊಂಡ ತನ್ನ ತ್ರೈಮಾಸಿಕ ಸಭೆಯಲ್ಲಿ ಮುಂಬರುವ ಏಕದಿನ ವಿಶ್ವಕಪ್ ವೇಳೆ ಭಾರತೀಯ ಆಟಗಾರರ, ಅಧಿಕಾರಿಗಳ ಹಾಗೂ ಅಭಿಮಾನಿಗಳ ಭದ್ರತೆಗೆ ಸಕಲ ವ್ಯವಸ್ಥೆ ಕಲ್ಪಿಸುವುದಾಗಿ ಬಿಸಿಸಿಐಗೆ ಭರವಸೆ ನೀಡಿತು.

ಆಟಗಾರರ ಸುರಕ್ಷತೆಯೇ ಮೊದಲ ಆದ್ಯತೆ: ಐಸಿಸಿ

ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ಭದ್ರತೆ ವಿಚಾರವನ್ನು ಮುಂದಿಟ್ಟರು. ವಿಶ್ವಕಪ್ ಭದ್ರತೆ ಕುರಿತ ಚರ್ಚೆ ಸಭೆಯ ಕಾರ್ಯಸೂಚಿಯಲ್ಲಿರಲಿಲ್ಲ. ಆದರೆ ಬಿಸಿಸಿಐ ಪ್ರಸ್ತಾಪಿಸಿದ ಕಾರಣ, ಐಸಿಸಿ ಭದ್ರತಾ ವ್ಯವಸ್ಥೆಯ ಕುರಿತು ಮಾಹಿತಿ ಹಂಚಿಕೊಂಡಿತು. ‘ಐಸಿಸಿ ಸಿಇಒ ಡೇವಿಡ್ ರಿಚರ್ಡ್‌ಸನ್, ಐಸಿಸಿ ಭಾರತೀಯರ ಭದ್ರತೆಗೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2019ರ ಏಕದಿನ ವಿಶ್ವಕಪ್ ಟೂರ್ನಿಯು ಮೇ 30ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಆತಿಥ್ಯ ವಹಿಸಿರುವ ಇಂಗ್ಲೆಂಡ್ ತಂಡವು ದಕ್ಷಿಣ ಆಫ್ರಿಕಾ ಎದುರು ಸೆಣಸಲಿದೆ. 10 ತಂಡಗಳು ಪ್ರಶಸ್ತಿಗಾಗಿ ಕಾದಾಡಲಿದ್ದು, ಭಾರತ ಜೂನ್ 05ರಂದು ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯವನ್ನಾಡಲಿದೆ.