T20 World Cup ರಶೀದ್ ಖಾನ್ ಕೆಚ್ಚೆದೆಯ ಹೋರಾಟ ವ್ಯರ್ಥ; ಆಸ್ಟ್ರೇಲಿಯಾ ಎದುರು ಆಫ್ಘಾನ್‌ಗೆ ರೋಚಕ ಸೋಲು..!
ಆಫ್ಘಾನಿಸ್ತಾನ ಎದುರು ರೋಚಕ ಗೆಲುವು ಸಾಧಿಸಿದ ಆಸ್ಟ್ರೇಲಿಯಾ
ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾದ ಸೆಮೀಸ್ ಕನಸು ಜೀವಂತ
ಟೂರ್ನಿಯಲ್ಲಿ ಗೆಲುವು ಸಾಧಿಸಿದೇ ಅಭಿಯಾನ ಮುಗಿಸಿದ ಆಫ್ಘಾನಿಸ್ತಾನ
ಅಡಿಲೇಡ್(ನ.04): ಆಲ್ರೌಂಡರ್ ರಶೀದ್ ಖಾನ್ ಸ್ಪೋಟಕ ಬ್ಯಾಟಿಂಗ್(48*) ಹೊರತಾಗಿಯೂ ಆಸ್ಟ್ರೇಲಿಯಾ ಎದುರು ಆಫ್ಘಾನಿಸ್ತಾನ ತಂಡವು 4 ರನ್ ರೋಚಕ ಸೋಲು ಅನುಭವಿಸಿದೆ. ಆಸ್ಟ್ರೇಲಿಯಾ ನೀಡಿದ್ದ 169 ರನ್‌ಗಳ ಗುರಿ ಬೆನ್ನತ್ತಿದ ಆಫ್ಘಾನಿಸ್ತಾನ ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 164 ರನ್ ಗಳಿಸಲಷ್ಟೇ ಶಕ್ತವಾಯಿತು. ಇನ್ನು ಗೆಲುವಿನೊಂದಿಗೆ ಆಸ್ಟ್ರೇಲಿಯಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮೀಸ್‌ಗೇರುವ ಅವಕಾಶವನ್ನು ಜೀವಂತವಾಗಿರಿಸಿಕೊಂಡರೆ, ಆಫ್ಘಾನಿಸ್ತಾನ ತಂಡವು ಟೂರ್ನಿಯಲ್ಲಿ ಒಂದೂ ಗೆಲುವು ಕಾಣದೇ ಅಭಿಯಾನ ಮುಗಿಸಿದೆ.
ಇಲ್ಲಿನ ಅಡಿಲೇಡ್ ಓವಲ್ ಮೈದಾನದಲ್ಲಿ ಆಸ್ಟ್ರೇಲಿಯಾ ನೀಡಿದ್ದ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಆಫ್ಘಾನಿಸ್ತಾನ ತಂಡವು ಮೂರನೇ ಓವರ್‌ನಲ್ಲೇ ಉಸ್ಮಾನ್ ಘನಿ ವಿಕೆಟ್ ಕಳೆದುಕೊಂಡಿತು. ಘನಿ ಕೇವಲ 2 ರನ್ ಗಳಿಸಿ ಜೋಶ್ ಹೇಜಲ್‌ವುಡ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ವಿಕೆಟ್ ಕೀಪರ್ ಬ್ಯಾಟರ್ ರೆಹಮನುಲ್ಲಾ ಗುರ್ಬಾಜ್ ಕೇವಲ 17 ಎಸೆತಗಳಲ್ಲಿ ತಲಾ 2 ಬೌಂಡರಿ ಹಾಗೂ ಸಿಕ್ಸರ್ ಸಹಿತ ಚುರುಕಿನ 30 ರನ್ ಬಾರಿಸಿ ಕೇನ್ ರಿಚರ್ಡ್‌ಸನ್‌ಗೆ ವಿಕೆಟ್ ಒಪ್ಪಿಸಿದರು.
ಜದ್ರಾನ್-ನೈಬ್ ಹೋರಾಟ ವ್ಯರ್ಥ: ಒಂದು ಹಂತದಲ್ಲಿ 40 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿದ್ದ ಆಫ್ಘಾನಿಸ್ತಾನ ತಂಡಕ್ಕೆ ಮೂರನೇ ವಿಕೆಟ್‌ಗೆ ಇಬ್ರಾಹಿಂ ಜದ್ರಾನ್ ಹಾಗೂ ಗುಲ್ಬದ್ದೀನ್ ನೈಬ್ 59 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆಆಸರೆಯಾದರು. ಸ್ಪೋಟಕ ಬ್ಯಾಟಿಂಗ್ ನಡೆಸಿದ ಗುಲ್ಬದ್ದೀನ್ ನೈಬ್ 23 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 39 ರನ್ ಬಾರಿಸಿ ರನೌಟ್ ಆಗಿ ಪೆವಿಲಿಯನ್ ಪೆವಿಲಿಯನ್ ಸೇರಿದರು. ಇನ್ನು ಮತ್ತೊಂದು ತುದಿಯಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಇಬ್ರಾಹಿಂ ಜದ್ರಾನ್ 33 ಎಸೆತಗಳಲ್ಲಿ 2 ಬೌಂಡರಿ ಸಹಿತ 26 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ಒಂದೇ ಓವರ್‌ನಲ್ಲಿ 3 ವಿಕೆಟ್ ಪತನ: ಜದ್ರಾನ್ ಹಾಗೂ ನೈಬ್ ಆಕರ್ಷಕ ಜತೆಯಾಟದ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ಯುತ್ತಿದ್ದರು. ಆದರೆ 14ನೇ ಓವರ್‌ನ ಮೊದಲ ಎಸೆತದಲ್ಲಿ ಎರಡು ರನ್ ಕದಿಯುವ ಯತ್ನದಲ್ಲಿ ರನೌಟ್ ಆದರು. ಇನ್ನು ಇದರ ಬೆನ್ನಲ್ಲೇ ಮರು ಎಸೆತದಲ್ಲೇ ಜದ್ರಾನ್ ಕೂಡ ಮಿಚೆಲ್ ಮಾರ್ಶ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇನ್ನು 4ನೇ ಎಸೆತದಲ್ಲಿ ನಜೀಬುಲ್ಲಾ ಜದ್ರಾನ್ ಕೂಡಾ ವಿಕೆಟ್ ಒಪ್ಪಿಸಿದರು. ಹೀಗಾಗಿ ಜಂಪಾ 14ನೇ ಓವರ್‌ನಲ್ಲಿ ಕೇವಲ 2 ರನ್ ನೀಡಿದರು ಜತೆಗೆ ಮೂರು ವಿಕೆಟ್ ಉರುಳಿದವು.
ಕೊನೆಯಲ್ಲಿ ರಶೀದ್ ಖಾನ್ ಕೆಚ್ಚೆದೆಯ ಹೋರಾಟ: ಒಂದು ಹಂತದಲ್ಲಿ 103 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖಮಾಡಿದ್ದ ಆಫ್ಘಾನ್ ಪಾಳಯದಲ್ಲಿ ಗೆಲುವಿನ ಆಸೆ ಮೂಡುವಂತ ಬ್ಯಾಟಿಂಗ್ ಮಾಡಿದ್ದು ರಶೀದ್ ಖಾನ್. ಆಸ್ಟ್ರೇಲಿಯಾ ಬೌಲರ್‌ಗಳ ಮೇಲೆ ಅಕ್ಷರಶಃ ಸವಾರಿ ಮಾಡಿದ ರನ್ ಸುರಿಮಳೆ ಸುರಿಸಿದರು. ಕೇವಲ 23 ಎಸೆತಗಳಲ್ಲಿ ರಶೀದ್ ಖಾನ್ ಅಜೇಯ 48 ರನ್ ಬಾರಿಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಲಿಳಿದ ಆಸ್ಟ್ರೇಲಿಯಾ ತಂಡವು ಆರಂಭದಲ್ಲೇ ಕ್ಯಾಮರೋನ್ ಗ್ರೀನ್ ವಿಕೆಟ್ ಕಳೆದುಕೊಂಡಿತು. ಆ್ಯರೋನ್ ಫಿಂಚ್ ಅನುಪಸ್ಥಿತಿಯಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ ಕೇವಲ 2 ರನ್ ಗಳಿಸಿ ಫಝಲ್‌ಹಕ್ ಫಾರೂಕಿ ಅವರಿಗೆ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೋರ್ವ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ 25 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಸ್ಟೀವ್ ಸ್ಮಿತ್ ಕೂಡಾ ಕೇವಲ 4 ರನ್ ಗಳಿಸಿ ಪೆವಿಲಿಯನ್ ಪೆರೇಡ್ ನಡೆಸಿದರು.
ಒಂದು ಕಡೆ ನಿರಂತರವಾಗಿ ವಿಕೆಟ್ ಉರುಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಮಿಚೆಲ್ ಮಾರ್ಶ್ ಕೇವಲ 30 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 45 ರನ್ ಬಾರಿಸಿ ಮುಜೀಬ್ ಉರ್ ರೆಹಮಾನ್‌ಗೆ ವಿಕೆಟ್ ಒಪ್ಪಿಸಿದರು.
ಸ್ಟೋನಿಸ್-ಮ್ಯಾಕ್ಸಿ ಜುಗಲ್ಬಂದಿ: ಒಂದು ಹಂತದಲ್ಲಿ 86 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಆಸ್ಟ್ರೇಲಿಯಾ ತಂಡಕ್ಕೆ 5ನೇ ವಿಕೆಟ್‌ಗೆ ಆಲ್ರೌಂಡರ್‌ಗಳಾದ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಮಾರ್ಕಸ್ ಸ್ಟೋನಿಸ್ 53 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಸ್ಟೋನಿಸ್ 21 ಎಸೆತಗಳಲ್ಲಿ 2 ಸಿಕ್ಸರ್ ಸಹಿತ 25 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಕೊನೆಯಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ಗ್ಲೆನ್ ಮ್ಯಾಕ್ಸ್‌ವೆಲ್ ಕೇವಲ 32 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 54 ರನ್ ಬಾರಿಸಿ ತಂಡದ ಮೊತ್ತವನ್ನು 160ರ ಗಡಿ ದಾಟಿಸಿದರು.