ನವದೆಹಲಿ(ಜೂ.09): ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡುಲ್ಕರ್ ಸ್ಟ್ರೈಟ್‌ ಡ್ರೈವ್ ಹಾಗೂ ಮನಮೋಹಕ ಬ್ಯಾಕ್‌ಫೂಟ್ ಪಂಚ್‌ ಬಾರಿಸುವುದನ್ನು ತಾವು ಟಿವಿಯಲ್ಲಿ ನೋಡಿ ಕಲಿತಿರುವುದಾಗಿ ಟೀಂ ಇಂಡಿಯಾ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ವಿರೇಂದ್ರ ಸೆಹ್ವಾಗ್ ಹೇಳಿದ್ದಾರೆ.

ಆನ್‌ಲೈನ್‌ನಲ್ಲೇ ಕ್ರಿಕುರು(Cricuru)ಆ್ಯಪ್ ಬಿಡುಗಡೆ ಮಾಡಿ ಮಾತನಾಡಿದ ವೀರೂ, ನಾನು 1992ರ ವಿಶ್ವಕಪ್‌ನಿಂದ ಟಿವಿಯಲ್ಲಿ ಕ್ರಿಕೆಟ್ ನೋಡುವುದನ್ನು ಆರಂಭಿಸಿದೆ. ಆವಾಗಲೇ ಸಚಿನ್‌ ಅವರಂತೆ ಸ್ಟ್ರೈಟ್‌ ಡ್ರೈವ್‌ ಮಾಡುವುದನ್ನು ಕಲಿಯಲು ಆರಂಭಿಸಿದೆ ಎಂದು ಸೆಹ್ವಾಗ್ ಹೇಳಿದ್ದಾರೆ. ಇದೇ ವೇಳೆ ಆಧುನಿಕ ದಿನಗಳಲ್ಲಿ ಕ್ರಿಕೆಟಿಗರಿಗೆ ತಂತ್ರಜ್ಞಾನದ ಬಳಕೆ ಎಷ್ಟು ಮಹತ್ವದ್ದು ಎಂದು ವಿವರಿಸಿದ್ದಾರೆ.

ಇಂದಿನ ದಿನಮಾನಗಳಲ್ಲಿ ಯುವ ಆಟಗಾರರಿಗೆ ಕ್ರಿಕೆಟ್ ಕಲಿಯಲು ಇಂಟರ್‌ನೆಟ್‌ನಲ್ಲಿ ಎಲ್ಲವೂ ಲಭ್ಯವಿದೆ. ಈಗಿರುವಂತಹ ಸೌಕರ್ಯಗಳು ನಾನು ಆಡುವ ಸಂದರ್ಭದಲ್ಲಿ ನನಗೆ ಸಿಕ್ಕಿದ್ದರೆ, ನನ್ನ ಸರಿ ತಪ್ಪುಗಳನ್ನು ಆದಷ್ಟು ಬೇಗ ಅರ್ಥಮಾಡಿಕೊಂಡು, ಇನ್ನೂ ಕಿರಿಯ ವಯಸ್ಸಿನಲ್ಲೇ ಭಾರತ ಕ್ರಿಕೆಟ್ ತಂಡಕ್ಕೆ ಪಾದಾರ್ಪಣೆ ಮಾಡುತ್ತಿದ್ದೆ ಎಂದು ಸೆಹ್ವಾಗ್ ಹೇಳಿದ್ದಾರೆ.

ಪತ್ನಿ ಜತೆ ಭರ್ಜರಿ ವರ್ಕೌಟ್‌ ಮಾಡುತ್ತಿದ್ದಾರೆ ಯುಜುವೇಂದ್ರ ಚಹಲ್..!

ನಾನು ಕ್ರಿಕೆಟ್ ಆರಂಭಿಸಿದ ದಿನಗಳಲ್ಲಿ ಪ್ರತಿಯೊಬ್ಬರು  ನಿನ್ನ ಪಾದದ ಚಲನೆಯನ್ನು ನೀನು ಉತ್ತಮಪಡಿಸಿಕೊಳ್ಳಬೇಕು ಎಂದು ಹೇಳುತ್ತಿದ್ದರು. ಆದರೆ ಯಾರೊಬ್ಬರು ಈ ಸಮಸ್ಯೆಗೆ ಹೇಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳುತ್ತಿರಲಿಲ್ಲ. ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರಾದ ಮನ್ಸೂರ್ ಅಲಿ ಖಾನ್ ಪಟೌಡಿ, ಸುನಿಲ್‌ ಗವಾಸ್ಕರ್ ಹಾಗೂ ಕೃಷ್ಣಮಾಚಾರಿ ಶ್ರೀಕಾಂತ್ ಉಪಯುಕ್ತ ಸಲಹೆ ನೀಡುವ ಮೂಲಕ ನೆರವಾಗಿದ್ದರು ಎಂದು ಸೆಹ್ವಾಗ್ ಹೇಳಿದ್ದಾರೆ.

ಕ್ರಿಕುರ್ ಬಗ್ಗೆ ಒಂದಷ್ಟು ಮಾಹಿತಿ: 

ಕ್ರಿಕುರ್ ಒಂದು ಕ್ರಿಕೆಟ್ ಕಲಿಕಾ ಆ್ಯಪ್ ಆಗಿದ್ದು, ಯುವ ಕ್ರಿಕೆಟಿಗರನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ.

ಈ ಆ್ಯಪ್ ಐಒಎಸ್ ಹಾಗೂ ಆ್ಯಡ್ರಾಯ್ಡ್‌ ಮೊಬೈಲ್‌ನಲ್ಲಿ ಲಭ್ಯವಿದೆ.

* ಎಬಿ ಡಿವಿಲಿಯರ್ಸ್‌, ಕ್ರಿಸ್ ಗೇಲ್, ಬ್ರಿಯಾನ್ ಲಾರಾ ಸೇರಿದಂತೆ 30 ಅನುಭವಿ ಕ್ರಿಕೆಟಿಗರು ಈ ಆ್ಯಪ್ ಮೂಲಕ ಯುವ ಕ್ರಿಕೆಟಿಗರಿಗೆ ಕ್ರಿಕೆಟ್ ಮಾರ್ಗದರ್ಶನ ನೀಡಲಿದ್ದಾರೆ.

* www.cricuru.com ಮೂಲಕ ಲಾಗಿನ್‌ ಆಗಬಹುದು. 299 ರುಪಾಯಿ ಪಾವತಿಸಿ ಒಂದು ವರ್ಷದ ವರೆಗೆ ಕ್ರಿಕುರ್ ಚಂದಾದಾರರಾಗಬಹುದು.