ಪ್ರತಿ ಬಾರಿ ಕ್ರೀಸ್ಗಿಳಿದಾಗ ಮೊದಲ 10 ಎಸೆತಗಳನ್ನು ಎದುರಿಸುವಾಗ ಒತ್ತಡವಿರುತ್ತೆ: ಧೋನಿ
ನಾನು ಕೂಡಾ ಎಲ್ಲರಂತೆ ಮೊದಲ 5-10 ಎಸೆತಗಳನ್ನು ಎದುರಿಸುವಾಗ ಒತ್ತಡವನ್ನು ಅನುಭವಿಸುತ್ತೇನೆ ಎಂದು ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ಚೆನ್ನೈ(ಮೇ.08): ಕೂಲ್ ಕ್ಯಾಪ್ಟನ್ ಎಂದೇ ಖ್ಯಾತಿ ಪಡೆದಿರುವ ಎಂ.ಎಸ್.ಧೋನಿ, ಕ್ರಿಕೆಟಿಗರು ಎದುರಿಸುವ ಮಾನಸಿಕ ಸಮಸ್ಯೆಗಳ ಬಗ್ಗೆ ಮಾತನಾಡಿದ್ದು, ತಾವು ಸಹ ಒತ್ತಡಕ್ಕೆ ಒಳಗಾಗುವುದಾಗಿ ಹೇಳಿಕೊಂಡಿದ್ದಾರೆ.
‘ಪ್ರತಿ ಬಾರಿ ಬ್ಯಾಟ್ ಮಾಡಲು ಕ್ರೀಸ್ಗಿಳಿದಾಗ ಮೊದಲ 5-10 ಎಸೆತಗಳನ್ನು ಎದುರಿಸುವ ವೇಳೆ ಒತ್ತಡದಲ್ಲಿರುತ್ತೇನೆ. ಔಟಾಗುತ್ತೇನೋ ಎನ್ನುವ ಆತಂಕವೂ ಇರಲಿದೆ’ ಎಂದು ಧೋನಿ ಹೇಳಿದ್ದಾರೆ. ಇದೇ ವೇಳೆ ಭಾರತ ತಂಡಕ್ಕೆ ಪೂರ್ಣಾವಧಿ ಮೆಂಟಲ್ ಕಂಡೀಷನಿಂಗ್ ಕೋಚ್‌ನ ಅಗತ್ಯವಿದೆ ಎಂದು ಸಹ ಧೋನಿ ಹೇಳಿದ್ದಾರೆ.‘ಸದ್ಯ 15 ದಿನಕ್ಕೊಮ್ಮೆ ಮೆಂಟಲ್ ಕಂಡೀಷನಿಂಗ್ ಕೋಚ್ ಆಟಗಾರರನ್ನು ಭೇಟಿ ಮಾಡುತ್ತಾರೆ. ಆದರೆ ಇದರಿಂದ ತಂಡಕ್ಕೆ ಲಾಭವಾಗುವುದಿಲ್ಲ’ ಎಂದು ತಿಳಿಸಿದ್ದಾರೆ.
ಸಣ್ಣ ಸಮಸ್ಯೆಯಿದ್ದರೂ ಅದನ್ನು ಕೋಚ್ ಬಳಿ ಹೇಳಿಕೊಳ್ಳಲು ನಾವೆಲ್ಲ ಹಿಂಜರಿಯುತ್ತೇವೆ. ಅದು ಯಾವುದೇ ಕ್ರೀಡೆಯಾದರೂ ಸರಿ ಆಟಗಾರರ ಹಾಗೂ ಕೋಚ್ ನಡುವೆ ಉತ್ತಮ ಸಂಬಂಧವಿರಬೇಕು ಎಂದು ಧೋನಿ ಅಭಿಪ್ರಾಯಪಟ್ಟಿದ್ದಾರೆ.
ಟಿ20 ವಿಶ್ವಕಪ್: ಇಂದು ಐಸಿಸಿ ಜತೆ ಆಸೀಸ್ ಸಂಸ್ಥೆ ಮಹತ್ವದ ಸಭೆ
2019ರ ಏಕದಿನ ವಿಶ್ವಕಪ್ ಸೆಮಿಫೈನಲ್ ಸೋಲಿನ ಬಳಿಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಜಗತ್ತಿನಿಂದ ದೂರವೇ ಉಳಿದಿದ್ದಾರೆ. ಐಪಿಎಲ್‌ಗಾಗಿ ಚೆನ್ನೈಗೆ ಬಂದಿಳಿದು ಕೆಲಕಾಲ ನೆಟ್ ಪ್ರಾಕ್ಟೀಸ್ ಆರಂಭಿಸಿದರಾದರೂ ಕೊರೋನಾ ಭೀತಿಯಿಂದಾಗಿ ಟೂರ್ನಿ ಅನಿರ್ಧಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಹೀಗಾಗಿ ಕ್ರಿಕೆಟ್ ಭವಿಷ್ಯ ಮುಂದೇನು ಎನ್ನುವ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ.