Asianet Suvarna News Asianet Suvarna News

ನಾನು ಬಿಸಿಸಿಐ ಅಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ, ಗಾಳಿ ಸುದ್ದಿಗೆ ಉತ್ತರಿಸಲ್ಲ ಎಂದ ಸೌರವ್ ಗಂಗೂಲಿ

* ಬಿಸಿಸಿಐ ಅಧ್ಯಕ್ಷರಾಗಿ 26 ತಿಂಗಳು ಅಧಿಕಾರವಧಿ ಪೂರೈಸಿದ ಸೌರವ್ ಗಂಗೂಲಿ

* ಹಲವು ಸವಾಲುಗಳನ್ನು ಮೆಟ್ಟಿನಿಂತ ಬಿಸಿಸಿಐ ಅಧ್ಯಕ್ಷ ದಾದಾ

* ಹಲವು ಆರೋಗಳ ಕುರಿತಂತೆ ಖಡಕ್ ಉತ್ತರ ನೀಡಿದ ಗಂಗೂಲಿ

I do my job as BCCI president and dont need to answer speculation Says Sourav Ganguly kvn
Author
Bengaluru, First Published Feb 4, 2022, 6:36 PM IST | Last Updated Feb 4, 2022, 6:43 PM IST

ನವದೆಹಲಿ(ಫೆ.04): ಕ್ರಿಕೆಟ್‌ಗೆ ಕೋವಿಡ್‌ ಅಡ್ಡಿ, ಆಯ್ಕೆ ಸಮಿತಿಯ ಮೇಲೆ ಪ್ರಭಾವ ಬೀರಿದ್ದಾರೆ, ಮಹಿಳಾ ಕ್ರಿಕೆಟ್‌ನಲ್ಲಿ ನಿರೀಕ್ಷಿತ ಪ್ರಗತಿ ಸಾಧ್ಯವಾಗಿಲ್ಲ. ಹೀಗೆ ಹತ್ತು ಹಲವು ಟೀಕೆ-ಟಿಪ್ಪಣಿಗಳ ಸಂಯಮದಿಂದ ಎದುರಿಸಿ ಸೌರವ್‌ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿ 26 ತಿಂಗಳುಗಳ ಅಧಿಕಾರವಧಿ ಪೂರ್ಣಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ಪಿಟಿಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಸೌರವ್‌ ಗಂಗೂಲಿ (Sourav Ganguly) ಹಲವು ವಿಚಾರಗಳನ್ನು ಮುಕ್ತವಾಗಿ ಚರ್ಚಿಸಿದ್ದಾರೆ. ಇದೇ ವೇಳೆ ಕೆಲವು ಟೀಕೆಗಳಿಗೆ ಖಡಕ್ ಆಗಿಯೇ ಉತ್ತರಿಸಿದ್ದಾರೆ.

ವಿರಾಟ್ ಕೊಹ್ಲಿಯನ್ನು (Virat Kohli) ಭಾರತ ಕ್ರಿಕೆಟ್ ತಂಡದ ನಾಯಕತ್ವದಿಂದ ಕೆಳಗಿಳಿಸುವಲ್ಲಿ ಗಂಗೂಲಿ ಪಾತ್ರವಿದೆ ಎನ್ನುವ ಆರೋಪವನ್ನು ದಾದಾ ಅಲ್ಲಗಳೆದಿದ್ದಾರೆ. ಇದಷ್ಟೇ ಅಲ್ಲದೇ ಇತ್ತೀಚೆಗಷ್ಟೇ ಘೋಷಣೆಯಾದ ಎರಡು ಹಂತದ ರಣಜಿ ಟ್ರೋಫಿ ಟೂರ್ನಿಯ ಬಗ್ಗೆ, ಭಾರತ ಟೆಸ್ಟ್ ತಂಡದ ನೂತನ ನಾಯಕತ್ವದ ಬಗ್ಗೆ ಹಾಗೂ ಮಹಿಳಾ ಐಪಿಎಲ್ (Women's Cricket) ಆಯೋಜಿಸುವ ಕುರಿತಂತೆ ಸೌರವ್ ಗಂಗೂಲಿ ಮುಕ್ತವಾಗಿ ಮಾತನಾಡಿದ್ದಾರೆ. ಇನ್ನು ಇದೇ ವೇಳೆ ಭಾರತ ಹಾಗೂ ವೆಸ್ಟ್ ಇಂಡೀಸ್ (India vs West Indies) ತಂಡಗಳ ನಡುವೆ ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ನಡೆಯಲಿರುವ ಟಿ20 ಸರಣಿಯು ಖಾಲಿ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಸ್ಪಷ್ಟ ಪಡಿಸಿದ್ದಾರೆ. ಅಷ್ಟಕ್ಕೂ ದಾದಾ ಏನೇನೆಲ್ಲಾ ಮಾತನಾಡಿದ್ದಾರೆ ಎನ್ನೋದನ್ನು ನೋಡೋಣ ಬನ್ನಿ.

* ಬಿಸಿಸಿಐ ಆಯ್ಕೆ ಸಮಿತಿ ಮೇಲೆ ನೀವು ಪ್ರಭಾವ ಬೀರಿದ್ದೀರಾ ಹಾಗೂ ಆಯ್ಕೆ ಸಮಿತಿಯ ಸಭೆಯಲ್ಲಿ ಪಾಲ್ಗೊಂಡು ಒತ್ತಡ ಹೇರುತ್ತಿದ್ದೀರಾ ಎನ್ನುವ ಆರೋಪಗಳ ಬಗ್ಗೆ ಏನಂತೀರಾ..?

ಈ ರೀತಿಯ ಆಧಾರರಹಿತ ಆರೋಪಗಳಿಗೆ ಜವಾಬ್ದಾರಿಯುತ ಸ್ಥಾನದಲ್ಲಿರುವ ನಾನು ಯಾರಿಗೂ, ಯಾವ ಉತ್ತರವನ್ನು ಹೇಳುವ ಅಗತ್ಯವಿಲ್ಲ. ನಾನು ಬಿಸಿಸಿಐ ಅಧ್ಯಕ್ಷ. ಬಿಸಿಸಿಐ ಅಧ್ಯಕ್ಷನಾಗಿ ನಾನೇನು ಮಾಡಬೇಕೋ ಅದನ್ನು ನಾನು ಮಾಡುತ್ತಿದ್ದೇನೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫೋಟೋ ಉಲ್ಲೇಕಿಸಿ ಮಾತನಾಡಿದ ದಾದಾ, ಆ ಫೋಟೋವೂ ಆಯ್ಕೆ ಸಮಿತಿಯ ಸಭೆಯದ್ದಲ್ಲ ಎಂದಿದ್ದಾರೆ. (ಫೋಟೋದಲ್ಲಿ ಸೌರವ್ ಗಂಗೂಲಿ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ವಿರಾಟ್ ಕೊಹ್ಲಿ ಹಾಗೂ ಜಂಟಿ ಕಾರ್ಯದರ್ಶಿ ಜಯೇಶ್ ಜಾರ್ಜ್ ಇರುವ ಫೋಟೋ ವೈರಲ್ ಆಗಿತ್ತು). ಅಂದಹಾಗೆ ಜಯೇಶ್ ಜಾರ್ಜ್‌ ಆಯ್ಕೆ ಸಮಿತಿಯ ಸದಸ್ಯರಲ್ಲ. ನಾನು ಭಾರತ ಪರ 424 ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದೇನೆ. ಇದನ್ನು ಜನರಿಗೆ ನೆನಪಿಸಬೇಕಿಲ್ಲ ಅಲ್ಲವೇ ಎಂದು ನಗು ಬೀರಿದ್ದಾರೆ.

* ಬಿಸಿಸಿಐ 26 ತಿಂಗಳ ಅವಧಿಯಲ್ಲಿ ನಿಮ್ಮ ಹಾಗೂ ಕಾರ್ಯದರ್ಶಿ ಜಯ್ ಶಾ ಅವರ ಸಂಬಂಧ ಹೇಗಿದೆ..?

ಜಯ್ ಶಾ (Jay Shah) ಅವರೊಂದಿಗೆ ಒಳ್ಳೆಯ ಒಡನಾಟವಿದೆ. ಅವರು ನನ್ನ ಒಳ್ಳೆಯ ಸ್ನೇಹಿತ ಹಾಗೂ ನಂಬಿಗಸ್ಥ ಸಹೋದ್ಯೋಗಿ. ನಾನು, ಜಯ್ ಶಾ, ಅರುಣ್ ಧುಮಾಲ್ ಹಾಗೂ ಜಯೇಶ್ ಜಾರ್ಜ್‌ ಒಟ್ಟಾಗಿ ಅದರಲ್ಲೂ ಕಳೆದೆರಡು ವರ್ಷದ ಕೋವಿಡ್ ಸಂದರ್ಭದಲ್ಲಿ ಬಿಸಿಸಿಐಯನ್ನು ಯಶಸ್ವಿಯಾಗಿ ಮುನ್ನಡೆಸಿದ್ದೇವೆ. ಈ ಮೂಲಕ ಕ್ರಿಕೆಟ್‌ ನಡೆಯುವಂತೆ ಮಾಡಿದ್ದೇವೆ. ನಿಜ ಹೇಳಬೇಕೆಂದರೆ, ಎರಡು ವರ್ಷಗಳು ಅದ್ಭುತವಾಗಿದ್ದರು. ಒಂದು ತಂಡವಾಗಿ ನಾವೆಲ್ಲರೂ ಒಟ್ಟಾಗಿ ಕಾರ್ಯ ನಿರ್ವಹಿಸಿದ್ದೇವೆ.

* ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದ ಬಳಿಕ ನೀವು ಯಾವ ರೀತಿಯ ಟೆಸ್ಟ್ ನಾಯಕನನ್ನು ಎದುರು ನೋಡುತ್ತಿದ್ದೀರಾ..?

ಸಹಜವಾಗಿಯೇ, ಭಾರತ ಟೆಸ್ಟ್ ತಂಡದ (Indian Test Team) ನಾಯಕರಾಗಲು ಕೆಲವೊಂದು ಮಾನದಂಡಗಳಿವೆ. ಅವೆಲ್ಲವುಗಳಿಗೆ ಸರಿಹೊಂದುವ ಆಟಗಾರ ಭಾರತ ಟೆಸ್ಟ್ ತಂಡದ ಮುಂದಿನ ನಾಯಕರಾಗಲಿದ್ದಾರೆ. ಆಯ್ಕೆ ಸಮಿತಿಯ ಮನಸ್ಸಿನಲ್ಲಿ ಕೆಲವು ಹೆಸರುಗಳು ಇರಬಹುದು ಎಂದು ನಾನು ಭಾವಿಸಿದ್ದೇನೆ. ಅವರೆಲ್ಲರೂ ಚರ್ಚಿಸಿ, ಬಿಸಿಸಿಐ ಅಧ್ಯಕ್ಷರು, ಕಾರ್ಯದರ್ಶಿಯ ಗಮನಕ್ಕೆ ತಂದು ಸದ್ಯದಲ್ಲಿಯೇ ನೂತನ ಟೆಸ್ಟ್ ನಾಯಕನ ಹೆಸರನ್ನು ಘೋಷಿಸಲಿದ್ದಾರೆ.

* ಪೂಜಾರ ಮತ್ತು ರಹಾನೆ ರಣಜಿ ಟ್ರೋಫಿ ಆಡಲಿದ್ದಾರೆ ಎಂದು ನೀವು ಕೆಲ ದಿನಗಳ ಹಿಂದಷ್ಟೇ ಹೇಳಿದ್ದೀರಾ. ಅದರರ್ಥ ಅವರನ್ನು ಶ್ರೀಲಂಕಾ ಎದುರಿನ ಟೆಸ್ಟ್ ಸರಣಿಯಿಂದ ಕೈ ಬಿಡಲಾಗುವುದೇ? 

ಶ್ರೀಲಂಕಾ ಎದುರಿನ ಟೆಸ್ಟ್ ಸರಣಿಗೂ ಮುನ್ನ ರಣಜಿ ಟ್ರೋಫಿ ಆರಂಭವಾಗುವುದರಿಂದ ನಾನು ಹಾಗೆ ಹೇಳಿದ್ದೆ. ಈ ಕುರಿತಂತೆ ಆಯ್ಕೆ ಸಮಿತಿಯು ತೀರ್ಮಾನ ತೆಗೆದುಕೊಳ್ಳಲಿದೆ. ರಣಜಿ ಟ್ರೋಫಿಯ (Ranji Trophy) ಎಲೈಟ್ ಗ್ರೂಪ್ ಪಂದ್ಯಗಳು ಫೆಬ್ರವರಿ ಮೂರನೇ ವಾರದಿಂದ ಆರಂಭವಾಗಲಿದೆ. ಇನ್ನು ಶ್ರೀಲಂಕಾ ಎದುರಿನ ಟೆಸ್ಟ್ ಸರಣಿಯು ಮಾರ್ಚ್‌ ತಿಂಗಳಿನಲ್ಲಿ ನಡೆಯಲಿದೆ. ರಹಾನೆ ಹಾಗೂ ಪೂಜಾರ ಅವರನ್ನು ಆಯ್ಕೆ ಮಾಡುವುದು-ಬಿಡುವುದು ಆಯ್ಕೆ ಸಮಿತಿಯ ನಿರ್ಧಾರಕ್ಕೆ ಬಿಟ್ಟಿದ್ದಾಗಿದೆ.

* ಬಿಸಿಸಿಐ ಏಕೆ ನೇರವಾಗಿ ಮಹಿಳಾ ಐಪಿಎಲ್ ಆರಂಭಿಸಲು ಮನಸ್ಸು ಮಾಡುತ್ತಿಲ್ಲ? 

ನಾವಿನ್ನೂ ಪೂರ್ಣ ಪ್ರಮಾಣದ ಮಹಿಳಾ ಐಪಿಎಲ್ ಆಯೋಜಿಸುವತ್ತ ಪ್ರಯತ್ನಗಳು ಸಾಗುತ್ತಿವೆ. ಖಂಡಿತವಾಗಿಯೂ ಮುಂಬರುವ ದಿನಗಳಲ್ಲಿ ಅದು ಸಾಕಾರವಾಗಲಿದೆ. 2023ರ ವೇಳೆಗೆ ಪೂರ್ಣ ಪ್ರಮಾಣದ ಮಹಿಳಾ ಐಪಿಎಲ್ ಆರಂಭವಾಗಲಿದೆ ಎನ್ನುವ ಬಗ್ಗೆ ನನಗೆ ಪೂರ್ಣ ವಿಶ್ವಾಸವಿದೆ. ಪುರುಷರ ಐಪಿಎಲ್‌ನಂತೆ ಮಹಿಳಾ ಐಪಿಎಲ್ ಕೂಡಾ ಯಶಸ್ವಿಯಾಗುವ ವಿಶ್ವಾಸವಿದೆ.
 
* ಈಡನ್ ಗಾರ್ಡನ್ಸ್‌ ಮೈದಾನದಲ್ಲಿ ನಡೆಯಲಿರುವ ಟಿ20 ಸರಣಿಗೆ ಪಶ್ಚಿಮ ಬಂಗಾಳ ಸರ್ಕಾರವು 75% ಪ್ರೇಕ್ಷಕರು ಮೈದಾನ ಪ್ರವೇಶಿಸಲು ಅವಕಾಶ ನೀಡಿದೆ. ಆದರೆ ಮೊಟೇರಾದಲ್ಲಿ ಖಾಲಿ ಸ್ಟೇಡಿಯಂನಲ್ಲಿ ಬಿಸಿಸಿಐ ಪಂದ್ಯಗಳನ್ನು ನಡೆಸುವುದೇಕೆ?

ಈಗಲೇ ಒಂದು ವಿಚಾರವನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ವೆಸ್ಟ್ ಇಂಡೀಸ್ ವಿರುದ್ದದ ಮೂರು ಪಂದ್ಯಗಳ ಟಿ20 ಸರಣಿ ನಡೆಯುವ ಈಡನ್‌ ಗಾರ್ಡನ್ಸ್‌ ಮೈದಾನದಲ್ಲೂ ಪ್ರೇಕ್ಷಕರ ಪ್ರವೇಶಕ್ಕೆ ಅನುಮತಿಯಿಲ್ಲ. ಸಾರ್ವಜನಿಕರಿಗೆ ಟಿ20 ಪಂದ್ಯ ವೀಕ್ಷಿಸಲು ಟಿಕೆಟ್ ಮಾರಾಟ ಮಾಡಲಾಗುತ್ತಿಲ್ಲ. ಕೇವಲ ಬೆಂಗಾಲ್ ಕ್ರಿಕೆಟ್ ಮಂಡಳಿಯ ಸಿಬ್ಬಂದಿಗೆ ಹಾಗೂ ವಿವಿಧ ಘಟಕಗಳ ಪ್ರತಿನಿಧಿಗಳಿಗೆ ಮಾತ್ರ ಮೈದಾನ ಪ್ರವೇಶಿಸಲು ಅವಕಾಶ ನೀಡಲಾಗಿದೆ.

ಇಂತಹ ಸಂದರ್ಭದಲ್ಲಿ ಪ್ರೇಕ್ಷಕರು ಮೈದಾನ ಪ್ರವೇಶಕ್ಕೆ ಅವಕಾಶ ನೀಡುವ ಮೂಲಕ ಆಟಗಾರರ ಆರೋಗ್ಯದ ವಿಚಾರದಲ್ಲಿ ರಿಸ್ಕ್ ತೆಗೆದುಕೊಳ್ಳಲು ನಾವು ಸಿದ್ದರಿಲ್ಲ. ಇನ್ನು ಅಸೋಸಿಯೇಟ್‌ ಸದಸ್ಯರಿಗೂ ಟಿಕೆಟ್ ವಿತರಿಸುತ್ತಿಲ್ಲ. ಪಶ್ಚಿಮ ಬಂಗಾಳ ಸರ್ಕಾರದಿಂದ ನಾವು ಅನುಮತಿ ಪಡೆದಿದ್ದೇವೆ ನಿಜ ಆದರೆ ಆಟಗಾರರ ಆರೋಗ್ಯದ ವಿಚಾರದಲ್ಲಿ ಬಿಸಿಸಿಐ ಅಪಾಯ ಮೈಮೇಲೆ ಎಳೆದುಕೊಳ್ಳಲು ತಯಾರಿಲ್ಲ ಎಂದು ದಾದಾ ಹೇಳಿದ್ದಾರೆ.
 

Latest Videos
Follow Us:
Download App:
  • android
  • ios