ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ಐಪಿಎಲ್‌ನಲ್ಲಿ ಕಳಪೆ ಪ್ರದರ್ಶನ ತೋರುತ್ತಿದೆ. ಬೌಲಿಂಗ್ ದೌರ್ಬಲ್ಯದಿಂದ ತಂಡವು ಸೋಲು ಅನುಭವಿಸುತ್ತಿದೆ. ಗಾಯದಿಂದ ಬಳಲುತ್ತಿರುವ ಪ್ರಮುಖ ಬೌಲರ್ ಜಸ್ಪ್ರೀತ್ ಬುಮ್ರಾ ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಲಭ್ಯರಿಲ್ಲ. ಇದರಿಂದ ತಂಡದ ಬೌಲಿಂಗ್ ವಿಭಾಗ ಮತ್ತಷ್ಟು ದುರ್ಬಲವಾಗುವ ಸಾಧ್ಯತೆಯಿದೆ. ಮುಂಬೈ ಇಂಡಿಯನ್ಸ್ ಆಡಿದ ನಾಲ್ಕು ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಗೆದ್ದಿದೆ.

ಮುಂಬೈ: ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸ್ಥಿರ ಪ್ರದರ್ಶನ ತೋರಲು ಪದೇ ಪದೇ ಎಡವುತ್ತಿದೆ. ಅದರಲ್ಲೂ ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ಪಡೆ ದುರ್ಬಲವಾಗಿರುವುದು ಎದುರಾಳಿ ತಂಡದ ಪಾಲಿಗೆ ವರವಾಗಿ ಪರಿಣಮಿಸಿದೆ. ಲಖನೌ ಸೂಪರ್ ಜೈಂಟ್ಸ್ ಎದುರಿನ ಪಂದ್ಯದಲ್ಲೂ ಮುಂಬೈ ಇಂಡಿಯನ್ಸ್ ಬೌಲರ್‌ಗಳು 200+ ರನ್ ಬಿಟ್ಟುಕೊಟ್ಟಿದ್ದರು. ಪರಿಣಾಮ 5 ಬಾರಿಯ ಚಾಂಪಿಯನ್ ಟೂರ್ನಿಯಲ್ಲಿ 3ನೇ ಸೋಲು ಅನುಭವಿಸಿದೆ. ಈ ಶಾಕ್‌ನಿಂದ ಹೊರಬರುವ ಮುನ್ನವೇ ಮುಂಬೈ ಇಂಡಿಯನ್ಸ್‌ಗೆ ಮತ್ತೊಂದು ಶಾಕ್ ಎದುರಾಗಿದೆ.

ಹೌದು, ಗಾಯದಿಂದ ಇನ್ನಷ್ಟೇ ಚೇತರಿಸಿಕೊಳ್ಳುತ್ತಿರುವ ಮುಂಬೈ ಇಂಡಿಯನ್ಸ್‌ನ ತಾರಾ ಬೌಲರ್‌ ಜಸ್‌ಪ್ರೀತ್‌ ಬುಮ್ರಾ ಸೋಮವಾರ ನಡೆಯಲಿರುವ ಆರ್‌ಸಿಬಿ ವಿರುದ್ಧ ಪಂದ್ಯಕ್ಕೂ ಅಲಭ್ಯರಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಕಳೆದ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ ಸರಣಿ ವೇಳೆ ಬೆನ್ನು ನೋವಿಗೆ ತುತ್ತಾಗಿದ್ದ ಬುಮ್ರಾ, ಜನವರಿಯಿಂದ ಪುನಶ್ಚೇತನ ಶಿಬಿರದಲ್ಲಿದ್ದಾರೆ. 

ಇದನ್ನೂ ಓದಿ: ,ಲಖನೌ ರನ್ ಮಳೆಯಲ್ಲಿ ಕೊಚ್ಚಿಹೋದ ಮುಂಬೈ ಇಂಡಿಯನ್ಸ್! ಪಾಂಡ್ಯ ಪಡೆಗೆ ಟೂರ್ನಿಯಲ್ಲಿ 3ನೇ ಸೋಲು

ಸದ್ಯ ಅವರು ಬಿಸಿಸಿಐ ವೈದ್ಯಕೀಯ ತಂಡದಿಂದ ಆಡಲು ಅನುಮತಿಗಾಗಿ ಕಾಯುತ್ತಿದ್ದಾರೆ. ಇನ್ನು 3-4 ದಿನಗಳಲ್ಲಿ ಎನ್‌ಒಸಿ ಪಡೆಯುವ ಸಾಧ್ಯತೆಯಿದೆ ಎಂದು ಗೊತ್ತಾಗಿದೆ ಜಸ್ಪ್ರೀತ್ ಬುಮ್ರಾ ಶುಕ್ರವಾರದ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಪಂದ್ಯ ಸೇರಿದಂತೆ ಈ ಬಾರಿ ಐಪಿಎಲ್‌ನ 4 ಪಂದ್ಯಗಳನ್ನೂ ತಪ್ಪಿಸಿಕೊಂಡಿದ್ದಾರೆ.

ಸದ್ಯ ಮುಂಬೈ ಇಂಡಿಯನ್ಸ್ ತಂಡವು ಆಡಿದ 4 ಪಂದ್ಯಗಳ ಪೈಕಿ ಕೇವಲ ಒಂದು ಗೆಲುವು ಹಾಗೂ 3 ಸೋಲು ಸಹಿತ 2 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ ವೇಗಿಗಳಾದ ಟ್ರೆಂಟ್ ಬೌಲ್ಟ್, ದೀಪಕ್ ಚಹರ್ ಹಾಗೂ ಅಶ್ವನಿ ಕುಮಾರ್ ದುಬಾರಿಯಾಗುತ್ತಿರುವುದು ಪಾಂಡ್ಯ ಪಡೆಯ ತಲೆನೋವು ಹೆಚ್ಚುವಂತೆ ಮಾಡಿದೆ.ಕಳೆದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಉತ್ತಮ ಬೌಲಿಂಗ್ ದಾಳಿ ನಡೆಸಿದರಾದರೂ ಉಳಿದ ಬೌಲರ್‌ಗಳಿಂದ ಸೂಕ್ತ ಸಹಕಾರ ದೊರೆಯಲಿಲ್ಲ. ಹೀಗಾಗಿಯೇ ಲಖನೌ ತಂಡವು ಬೃಹತ್ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾಗಿತ್ತು. 

ಆರ್‌ಸಿಬಿಗೆ ಲಾಭ: ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಟೂರ್ನಿಯಲ್ಲಿ ತಾನಾಡಿದ ಮೊದಲೆರಡು ಪಂದ್ಯಗಳನ್ನು ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿತ್ತು. ಆದರೆ ತವರಿನಲ್ಲಿ ಗುಜರಾತ್ ಟೈಟಾನ್ಸ್ ಎದುರಿನ ಪಂದ್ಯದಲ್ಲಿ ಬೆಂಗಳೂರು ತಂಡವು ಹೀನಾಯ ಸೋಲು ಅನುಭವಿಸಿತ್ತು. ಇದೀಗ ಮುಂಬೈ ಇಂಡಿಯನ್ಸ್ ಸವಾಲಿಗೆ ರಜತ್ ಪಾಟೀದಾರ್ ಪಡೆ ಸಜ್ಜಾಗಿದೆ. ಒಂದು ವೇಳೆ ಬುಮ್ರಾ ಆರ್‌ಸಿಬಿ ಎದುರಿನ ಪಂದ್ಯಕ್ಕೆ ಅಲಭ್ಯರಾದರೇ ಬೆಂಗಳೂರು ತಂಡಕ್ಕೆ ಲಾಭವಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ಒಂದೊಂದು ರನ್ ಗಳಿಸಲು ಪರದಾಡುತ್ತಿದೆ ಹೈದರಾಬಾದ್; ಸನ್‌ರೈಸರ್ಸ್‌ಗೆ ಈಗ ಹಾಟ್ರಿಕ್ ಸೋಲಿನ ಶಾಕ್!

ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿ ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ವಿಭಾಗವೇ ದುರ್ಬಲವಾಗುವಂತೆ ಮಾಡಿದೆ. ಇದೀಗ ಆರ್‌ಸಿಬಿ ಎದುರಿನ ಪಂದ್ಯಕ್ಕೂ ಒಂದು ವೇಳೆ ಜಸ್ಪ್ರೀತ್ ಬುಮ್ರಾ ಅಲಭ್ಯರಾದರೇ, ಮುಂಬೈ ತಂಡಕ್ಕೆ ಗಾಯದ ಮೇಲೆ ಬರೆ ಎಳೆಯುವಂತೆ ಮಾಡಲಿದೆ. ಜಸ್ಪ್ರೀತ್ ಬುಮ್ರಾ ಆದಷ್ಟು ಬೇಗ ತಂಡ ಕೂಡಿಕೊಳ್ಳಲಿ ಎನ್ನುವುದನ್ನು ಮುಂಬೈ ಇಂಡಿಯನ್ಸ್ ಅಭಿಮಾನಿಗಳ ಹಾರೈಕೆಯಾಗಿದೆ.