2023ರ ಏಷ್ಯಾಕಪ್ ಟೂರ್ನಿಯ ಅಧಿಕೃತ ವೇಳಾಪಟ್ಟಿ ಪ್ರಕಟಸೆಪ್ಟೆಂಬರ್ 02ರಂದು ಭಾರತ-ಪಾಕ್‌ ಮೊದಲ ಬಾರಿಗೆ ಮುಖಾಮುಖಿಈ ಏಷ್ಯಾಕಪ್‌ನಲ್ಲಿ ಇಂಡೋ-ಪಾಕ್ ಮೂರು ಬಾರಿ ಮುಖಾಮುಖಿ ಸಾಧ್ಯತೆ

ನವದೆಹಲಿ(ಜು.20): ಬಹುನಿರೀಕ್ಷಿತ 2023ರ ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಯ ವೇಳಾಪಟ್ಟಿ ಬುಧವಾರ ಅಧಿಕೃತವಾಗಿ ಪ್ರಕಟಗೊಂಡಿದೆ. ಭಾರತ ತಂಡವು 'ಎ' ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಇದೇ ಗುಂಪಿನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡ ಕೂಡಾ ಸ್ಥಾನ ಪಡೆದಿದೆ. ಸೆಪ್ಟೆಂಬರ್ 02ರಂದು ಭಾರತ ಹಾಗೂ ಪಾಕಿಸ್ತಾನ ತಂಡಗಳು ಕ್ಯಾಂಡಿಯಲ್ಲಿ ಮೊದಲ ಬಾರಿಗೆ ಏಷ್ಯಾಕಪ್ ಟೂರ್ನಿಯಲ್ಲಿ ಮುಖಾಮುಖಿಯಾಗಲಿವೆ. ಏಷ್ಯಾಕಪ್‌ ಟೂರ್ನಿಯಲ್ಲಿ ಒಂದು ಬಾರಿ ಮಾತ್ರವಲ್ಲ, ಎರಡು ಬಾರಿ ಮುಖಾಮುಖಿಯಾಗುವುದು ಬಹುತೇಕ ಖಚಿತ ಎನಿಸಿದ್ದು, ಈ ಬಾರಿ ಮೂರು ಸಲ ಬದ್ದ ಎದುರಾಳಿಗಳು ಮುಖಾಮುಖಿಯಾದರೂ ಅಚ್ಚರಿಯಿಲ್ಲ.

ಟೂರ್ನಿ ಮಾದರಿ ಹೇಗೆ?

6 ತಂಡಗಳನ್ನು ತಲಾ 3 ತಂಡಗಳ 2 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಭಾರತ, ಪಾಕಿಸ್ತಾನ, ನೇಪಾಳ ‘ಎ’ ಗುಂಪಿನಲ್ಲಿದ್ದು, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ‘ಬಿ’ ಗುಂಪಿನಲ್ಲಿವೆ. ಗುಂಪು ಹಂತದಲ್ಲಿ ಪ್ರತಿ ತಂಡ ಇನ್ನುಳಿದ 2 ತಂಡದ ವಿರುದ್ಧ ಒಮ್ಮೆ ಸೆಣಸಲಿದೆ. ಗುಂಪಿನಲ್ಲಿ ಅಗ್ರ-2 ಸ್ಥಾನ ಪಡೆವ ತಂಡಗಳು ಸೂಪರ್‌-4 ಹಂತಕ್ಕೇರಲಿವೆ. ಸೂಪರ್‌-4ನಲ್ಲಿ ಪ್ರತಿ ತಂಡ ಇನ್ನುಳಿದ 3 ತಂಡದ ವಿರುದ್ಧ ಒಮ್ಮೆ ಆಡಲಿದ್ದು, ಅಂಕಪಟ್ಟಿಯಲ್ಲಿ ಅಗ್ರ-2 ಸ್ಥಾನ ಪಡೆಯುವ ತಂಡಗಳು ಫೈನಲ್‌ಗೇರಲಿವೆ.

ಏಷ್ಯಾಕಪ್ 2023 ವೇಳಾಪಟ್ಟಿ ಪ್ರಕಟ, ಸೆ.2ಕ್ಕೆ ಭಾರತ-ಪಾಕಿಸ್ತಾನ ಹೋರಾಟ!

6 ತಂಡಗಳ ಟೂರ್ನಿ ಆಗಸ್ಟ್‌ 30ರಿಂದ ಸೆಪ್ಟೆಂಬರ್ 17ರ ವರೆಗೆ ನಡೆಯಲಿದ್ದು, ಪಾಕಿಸ್ತಾನದ ಮುಲ್ತಾನ್‌, ಲಾಹೋರ್‌ ಒಟ್ಟು 4, ಶ್ರೀಲಂಕಾದ ಕ್ಯಾಂಡಿ ಹಾಗೂ ಕೊಲಂಬೊ ಫೈನಲ್‌ ಸೇರಿ 9 ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ. ಟೂರ್ನಿಯ ಉದ್ಘಾಟನಾ ಪಂದ್ಯ ಮುಲ್ತಾನ್‌ನಲ್ಲಿ ನಡೆಯಲಿದ್ದು, ಪಾಕ್‌-ನೇಪಾಳ ಮುಖಾಮುಖಿಯಾಗಲಿವೆ. ಒಂದು ವೇಳೆ ಭಾರತ-ಪಾಕ್‌ ಸೂಪರ್‌-4 ಹಂತಕ್ಕೇರಿದರೆ ಉಭಯ ತಂಡಗಳ ಪಂದ್ಯ ಸೆಪ್ಟೆಂಬರ್ 10ರಂದು ಕೊಲಂಬೊದಲ್ಲಿ ನಡೆಯಲಿದೆ.

Scroll to load tweet…

ಇನ್ನು ಇದಾದ ಬಳಿಕ ಒಂದು ವೇಳೆ ಸೂಪರ್‌-4 ಹಂತದಲ್ಲಿ ಅದ್ಬುತ ಪ್ರದರ್ಶನ ತೋರುವ ಮೂಲಕ ಭಾರತ ಹಾಗೂ ಪಾಕಿಸ್ತಾನ ತಂಡಗಳು ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆದರೆ, ಸೆಪ್ಟೆಂಬರ್ 17ರಂದು ಏಷ್ಯಾಕಪ್‌ ಫೈನಲ್‌ನಲ್ಲಿ ಮತ್ತೊಮ್ಮೆ ಮುಖಾಮುಖಿಯಾಗುವ ಸಾಧ್ಯತೆಯಿದೆ. ಏಷ್ಯಾಕಪ್‌ ಫೈನಲ್‌ ಪಂದ್ಯಕ್ಕೆ ಕೊಲಂಬೊದ ಪ್ರೇಮದಾಸ ಸ್ಟೇಡಿಯಂ ಸಾಕ್ಷಿಯಾಗಲಿದೆ.

'ಒಂದು ಶನಿವಾರ ನನಗೆ ಕೊಡ್ತಿಯಾ..?': ಪತ್ನಿ ಧನಶ್ರೀನ ಹೀಗೆ ಪ್ರಪೋಸ್ ಮಾಡಿ ಪಟಾಯಿಸಿದ ಚಹಲ್!

ಏಷ್ಯಾಕಪ್‌ ಟೂರ್ನಿಯ ಆತಿಥ್ಯದ ಹಕ್ಕನ್ನು ಪಾಕಿಸ್ತಾನ ಪಡೆದುಕೊಂಡಿತ್ತು. ಆದರೆ ರಾಜತಾಂತ್ರಿಕ ಬಿಕ್ಕಟ್ಟಿನಿಂದಾಗಿ, ಭಾರತ ಕ್ರಿಕೆಟ್ ತಂಡವು ಪಾಕಿಸ್ತಾನದಲ್ಲಿ ಏಷ್ಯಾಕಪ್ ಆಡಲು ಹಿಂದೇಟು ಹಾಕಿತ್ತು. ಹೀಗಾಗಿ ಈ ಬಾರಿಯ ಏಷ್ಯಾಕಪ್ ಟೂರ್ನಿಯನ್ನು ಹೈಬ್ರೀಡ್‌ ಮಾದರಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಅದರಂತೆ 4 ಪಂದ್ಯಗಳನ್ನು ಪಾಕಿಸ್ತಾನದಲ್ಲಿ ಹಾಗೂ ಉಳಿದ 9 ಪಂದ್ಯಗಳನ್ನು ಶ್ರೀಲಂಕಾದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.

ಮುಂಬರುವ ಅಕ್ಟೋಬರ್ ಹಾಗೂ ನವೆಂಬರ್‌ನಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು, ಈ ಬಾರಿಯ ಏಷ್ಯಾಕಪ್ ಟೂರ್ನಿಯನ್ನು ಏಕದಿನ ಮಾದರಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಏಕದಿನ ವಿಶ್ವಕಪ್ ಟೂರ್ನಿಗೆ ಅರ್ಹತೆಗಿಟ್ಟಿಸಿಕೊಂಡಿರುವ ಆತಿಥೇಯ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ಹಾಗೂ ಆಫ್ಘಾನಿಸ್ತಾನ ತಂಡಗಳು ಏಷ್ಯಾಕಪ್ ಟೂರ್ನಿಯನ್ನು ವಿಶ್ವಕಪ್‌ ಟೂರ್ನಿಗೆ ಪೂರ್ವ ತಯಾರಿ ರೂಪದಲ್ಲಿ ಬಳಸಿಕೊಳ್ಳುವ ಸಾಧ್ಯತೆಯಿದೆ.