ಬೆಂಗಳೂರು(ಡಿ.02): ದೇಶೀಯವಾಗಿ ನಡೆಯಲಿರುವ ಎಲ್ಲಾ ಕ್ರಿಕೆಟ್‌ ಟೂರ್ನಿಗಳನ್ನು ನಡೆಸಲು ಕರ್ನಾಟಕ ರಾಜ್ಯ ಕ್ರಿಕೆಟ್‌ ಮಂಡಳಿ (ಕೆಸ್‌ಸಿಎ), ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಬಿಸಿಸಿಐಗೆ ಸಲಹೆ ನೀಡಿದೆ. ಕೊರೋನಾ ಕಾಲದಲ್ಲಿ ದೇಶೀಯ ಟೂರ್ನಿ ಆಯೋಜನೆಗೆ ಇತ್ತೀಚೆಗಷ್ಟೇ ಬಿಸಿಸಿಐ ಎಲ್ಲಾ ರಾಜ್ಯ ಕ್ರಿಕೆಟ್‌ ಸಂಸ್ಥೆಗಳಿಗೆ ಸಲಹೆ ಕೇಳಿತ್ತು. ಈ ಪ್ರಕಾರ ಕೆಎಸ್‌ಸಿಎ ಮಂಗಳವಾರ ಬಿಸಿಸಿಐಗೆ ಸಲಹಾ ಸೂಚನೆಗಳ ಪಟ್ಟಿಯನ್ನು ರವಾನಿಸಿದೆ.

ಟಿ20 ಮತ್ತು ರಣಜಿ ಟ್ರೋಫಿಯನ್ನು ಮೊದಲು ಆಯೋಜಿಸಬಹುದಾಗಿದೆ. ಆ ಬಳಿಕ ವಿಜಯ್‌ ಹಜಾರೆ ಟ್ರೋಫಿ ಟೂರ್ನಿಯನ್ನು ನಡೆಸಬಹುದು. ಹಾಗೆ ಎಲ್ಲಾ ವಯೋಮಾನದ ಪುರುಷ ಮತ್ತು ಮಹಿಳಾ ಟೂರ್ನಿಗಳನ್ನು ನಡೆಸಬಹುದಾಗಿದೆ ಎಂದು ಕೆಎಸ್‌ಸಿಎ ಹೇಳಿದೆ. ಇದರಲ್ಲಿ ದುಲೀಪ್‌ ಟ್ರೋಫಿ. ಇರಾನಿ ಟ್ರೋಫಿ ಮತ್ತು ದೇವಧರ್‌ ಟ್ರೋಫಿಗಳನ್ನು ಕೈ ಬಿಡಬಹುದಾಗಿದೆ ಎನ್ನಲಾಗಿದೆ.

ಆರಂಭದಲ್ಲಿ ಸೂಚಿಸಿರುವ ಎಲ್ಲಾ ಟೂರ್ನಿಗಳನ್ನು ನಡೆಸಲೇಬೇಕಿದೆ. ಒಂದೊಮ್ಮೆ ಟೂರ್ನಿ ಆಯೋಜನೆ ಸಾಧ್ಯವಾಗದಿದ್ದರೆ, ಆಟಗಾರರು, ವಯೋಮಾನದ ಕ್ರಿಕೆಟಿಗರು, ಅಂಪೈರ್‌ಗಳು, ಸ್ಕೋರರ್‌ಗಳು, ವಿಡಿಯೋ ಅನಾಲಿಸ್ಟ್‌, ತರಬೇತುದಾರರು, ಸಹಾಯಕ ಸಿಬ್ಬಂದಿಗಳು ಮತ್ತು ಇತರರಿಗೆ ಹೆಚ್ಚಿನ ನಷ್ಟ ಉಂಟಾಗಲಿದೆ ಎಂದು ಕೆಎಸ್‌ಸಿಎ ಖಜಾಂಚಿ ಮತ್ತು ವಕ್ತಾರ ವಿನಯ್‌ ಮೃತ್ಯುಂಜಯ ಹೇಳಿದ್ದಾರೆ.

ಕೊಹ್ಲಿ ಸಾಧನೆಗೆ ಮತ್ತೊಂದು ಗರಿ; ಸಚಿನ್ ವಿಶ್ವದಾಖಲೆ ವಿರಾಟ್ ಪಾಲು..!

ಬಿಸಿಸಿಐ ಆಯೋಜಿಸುವ ದೇಶೀಯ ಟೂರ್ನಿಯ ಪಂದ್ಯಗಳನ್ನು ನಡೆಸಲು ಕೆಎಸ್‌ಸಿಎ ಉತ್ಸುಕವಾಗಿದೆ. ಎಲ್ಲಾ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 8 ರಿಂದ 10 ಮೈದಾನಗಳಲ್ಲಿ ಪಂದ್ಯಗಳನ್ನು ನಡೆಸಲು ಸಿದ್ಧತೆ ಮಾಡಿಕೊಳ್ಳಲಿದೆ ಎನ್ನಲಾಗಿದೆ.