ವೆಲ್ಲಿಂಗ್ಟನ್‌(ಡಿ.11): ನ್ಯೂಜಿಲೆಂಡ್‌ ಹಾಗೂ ವೆಸ್ಟ್‌ಇಂಡೀಸ್‌ ನಡುವಿನ 2ನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯ ಶುಕ್ರವಾರದಿಂದ ಆರಂಭವಾಗಿದ್ದು, ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಲು ಅವಕಾಶ ಪಡೆದ ನ್ಯೂಜಿಲೆಂಡ್ ಬೃಹತ್ ಮೊತ್ತದತ್ತ ದಾಪುಗಾಲು ಇಡುತ್ತಿದೆ.

ಮೊದಲ 60 ಓವರ್ ಮುಕ್ತಾಯದ ವೇಳೆಗೆ ನ್ಯೂಜಿಲೆಂಡ್ ತಂಡ 5 ವಿಕೆಟ್ ಕಳೆದುಕೊಂಡು 205 ರನ್ ಬಾರಿಸಿದ್ದು, ಹೆನ್ರಿ ನಿಕೋಲಸ್ ಅಜೇಯ 71 ಬಾರಿಸಿ ಶತಕದತ್ತ ದಾಪುಗಾಲಿಡುತ್ತಿದ್ದಾರೆ. 

ಇಂಗ್ಲೆಂಡ್ ತಂಡದ ಭಾರತ ಪ್ರವಾಸ; ಟೆಸ್ಟ್, ಏಕದಿನ,ಟಿ20 ವೇಳಾಪಟ್ಟಿ ಪ್ರಕಟ!

ಮೊದಲ ಪಂದ್ಯದಲ್ಲಿ ಇನ್ನಿಂಗ್ಸ್‌ ಹಾಗೂ 134 ರನ್‌ಗಳಿಂದ ಗೆದ್ದು 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿರುವ ನ್ಯೂಜಿಲೆಂಡ್‌, ಈ ಪಂದ್ಯದಲ್ಲೂ ಜಯಿಸಿ ಸರಣಿ ಕ್ಲೀನ್‌ ಸ್ವೀಪ್‌ ಮಾಡುವ ಗುರಿ ಹೊಂದಿದೆ. ಜೊತೆಗೆ ಪಂದ್ಯ ಗೆದ್ದರೆ ಕಿವೀಸ್‌ಗೆ 60 ಅಂಕ ದೊರೆಯಲಿದ್ದು, ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಮೇಲೇರಲು ಅನುಕೂಲವಾಗಲಿದೆ. 

ಮೊದಲ ಟೆಸ್ಟ್‌ನಲ್ಲಿ ದ್ವಿಶತಕ ಬಾರಿಸಿದ್ದ ಕೇನ್‌ ವಿಲಿಯಮ್ಸನ್‌ ತಂದೆಯಾಗುವ ಖುಷಿಯಲ್ಲಿದ್ದು ಈ ಪಂದ್ಯವನ್ನು ತಪ್ಪಿಸಿಕೊಂಡಿದ್ದಾರೆ.