ರಾವಲ್ಪಿಂಡಿ(ಫೆ.08): ವಿಶ್ವ ಕ್ರಿಕೆಟ್‌ನಲ್ಲಿ ಟೆಸ್ಟ್ ಕ್ರಿಕೆಟ್‌ ಪಂದ್ಯಗಳು ದಿನದಿಂದ ದಿನಕ್ಕೆ ರೋಚಕತೆ ಹೆಚ್ಚುವಂತೆ ಮಾಡಿದ್ದು, ಗಾಬಾ ಟೆಸ್ಟ್, ವೆಸ್ಟ್‌ ಇಂಡೀಸ್‌ ಹಾಗೂ ಬಾಂಗ್ಲಾದೇಶ ನಡುವಿನ ಟೆಸ್ಟ್‌ ಪಂದ್ಯಗಳು ರೋಚಕವಾಗಿ ಮುಕ್ತಾಯವಾದ ಬೆನ್ನಲ್ಲೇ ಇದೀಗ ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಪಂದ್ಯವೂ ರೋಚಕವಾಗಿ ಅಂತ್ಯವಾಗಿದೆ. ದಕ್ಷಿಣ ಆಫ್ರಿಕಾ ವಿರುದ್ದ 95 ರನ್‌ಗಳ ಜಯ ದಾಖಲಿಸುವ ಮೂಲಕ ಪಾಕಿಸ್ತಾನ ತಂಡ 2-0 ಅಂತರದಲ್ಲಿ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್‌ ಮಾಡಿದೆ.

ಹೌದು, ಪಾಕಿಸ್ತಾನ ನೀಡಿದ್ದ 370 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಆರಂಭಿಕ ಬ್ಯಾಟ್ಸ್‌ಮನ್‌ ಏಯ್ಡನ್‌ ಮಾರ್ಕ್‌ರಮ್‌(108) ಆಕರ್ಷಕ ಶತಕ ಬಾರಿಸುವ ಮೂಲಕ ಹರಿಣಗಳ ಪಾಳಯದಲ್ಲಿ ಗೆಲುವಿನ ಆಸರೆ ಮೂಡಿಸಿದರು. ಒಂದು ಹಂತದಲ್ಲಿ 241 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಗೆಲುವಿನತ್ತ ಮುಖಮಾಡಿದ್ದ ದಕ್ಷಿಣ ಆಫ್ರಿಕಾ ತಂಡ ಆ ಬಳಿಕ 274 ರನ್‌ ಬಾರಿಸುವಷ್ಟರಲ್ಲೇ ಸರ್ವಪತನ ಕಾಣುವ ಮೂಲಕ ನಾಟಕೀಯ ಕುಸಿತ ಕಂಡು 95 ರನ್‌ಗಳ ರೋಚಕ ಸೋಲು ಕಂಡಿತು. 

ರೋಚಕ ಘಟ್ಟದತ್ತ ಪಾಕ್‌-ಆಫ್ರಿಕಾ ಎರಡನೇ ಟೆಸ್ಟ್‌..!

ಪಾಕಿಸ್ತಾನ ಪರ ಹಸನ್‌ ಅಲಿ 5 ವಿಕೆಟ್ ಪಡೆದರೆ, ಶಾಹೀನ್ ಅಫ್ರಿದಿ 4 ಹಾಗೂ ಯಾಸಿರ್ ಶಾ ಒಂದು ವಿಕೆಟ್‌ ಪಡೆಯುವ ಮೂಲಕ ಹರಿಣಗಳ ಸೋಲಿಗೆ ಕಾರಣರಾದರು. 

ದಕ್ಷಿಣ ಆಫ್ರಿಕಾ ಹಾಗೂ ಪಾಕಿಸ್ತಾನ ನಡುವಿನ ಮೊದಲ ಟೆಸ್ಟ್ ಪಂದ್ಯವನ್ನು ಪಾಕಿಸ್ತಾನ 7 ವಿಕೆಟ್‌ಗಳಿಂದ ಜಯಿಸಿತ್ತು, ಇದೀಗ ಎರಡನೇ ಟೆಸ್ಟ್ ಪಂದ್ಯವನ್ನು 95 ರನ್‌ಗಳಿಂದ ಗೆಲ್ಲುವ ಮೂಲಕ ಟೆಸ್ಟ್ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಇನ್ನು 3 ಪಂದ್ಯಗಳ ಟಿ20 ಸರಣಿ ಫೆಬ್ರವರಿ 11ರಿಂದ ಆರಂಭವಾಗಲಿದ್ದು, ಚುಟುಕು ಪಂದ್ಯಗಳ ಸರಣಿ ಯಾರ ಪಾಲಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.