ರಾವಲ್ಪಿಂಡಿ(ಫೆ.08): ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ನಡುವಿನ 2ನೇ ಟೆಸ್ಟ್‌ ರೋಚಕ ಘಟ್ಟ ತಲುಪಿದೆ. ಗೆಲುವಿಗೆ 370 ರನ್‌ಗಳ ಗುರಿ ಬೆನ್ನತ್ತಿರುವ ದಕ್ಷಿಣ ಆಫ್ರಿಕಾ 4ನೇ ದಿನದಂತ್ಯಕ್ಕೆ 2ನೇ ಇನ್ನಿಂಗ್ಸ್‌ನಲ್ಲಿ 1 ವಿಕೆಟ್‌ ನಷ್ಟಕ್ಕೆ 127 ರನ್‌ ಗಳಿಸಿದ್ದು, ಕೊನೆ ದಿನವಾದ ಸೋಮವಾರ 243 ರನ್‌ ಗಳಿಸಬೇಕಿದೆ. 

ಮೂರನೇ ದಿನದಾಟದಲ್ಲಿ 6 ವಿಕೆಟ್‌ ಕಳೆದುಕೊಂಡು ಕೇವಲ 129 ರನ್‌ ಗಳಿಸಿ ಸಂಕಷ್ಟದಲ್ಲಿದ್ದ ಪಾಕಿಸ್ತಾನ ತಂಡಕ್ಕೆ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ರಿಜ್ವಾನ್‌ ಆಸರೆಯಾದರು. ರಿಜ್ವಾನ್‌ ಬರೋಬ್ಬರಿ 204 ಎಸೆತಗಳನ್ನು ಎದುರಿಸಿ ಅಜೇಯ 115 ರನ್‌ ಬಾರಿಸಿದರೆ, ಮತ್ತೊಂದು ತುದಿಯಲ್ಲಿ ನೌಮನ್ ಅಲಿ 45  ರನ್‌ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾದರು. ಇದರೊಂದಿಗೆ ತಂಡದ ಮೊತ್ತವನ್ನು ಮುನ್ನೂರರ ಸಮೀಪ ಕೊಂಡೊಯ್ಯುವಲ್ಲಿ ಯಶಸ್ವಿಯಾದರು.

ಮೇಯ​ರ್ಸ್‌ ಆಕರ್ಷಕ ದ್ವಿಶತಕ: ವಿಂಡೀಸ್‌ಗೆ ರೋಚಕ ಜಯ

ಇನ್ನು ಗೆಲ್ಲಲು 370 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ ಕೂಡಾ ದಿಟ್ಟ ಆರಂಭವನ್ನೇ ಪಡೆದಿದೆ. ಹರಿಣಗಳ ಪಡೆ ಆರಂಭದಲ್ಲೇ ಡೀನ್‌ ಎಲ್ಗಾರ್‌(17) ವಿಕೆಟ್‌ ಕಳೆದುಕೊಂಡಿತಾದರೂ ಆ ಬಳಿಕ ಜತೆಯಾದ ಮಾರ್ಕರಮ್‌ ಹಾಗೂ ರಾಸ್ಸಿ ಡುಸೇನ್‌ ಜೋಡಿ ಎರಡನೇ ವಿಕೆಟ್‌ಗೆ ಮುರಿಯದ 94 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. 

ಪಾಕಿಸ್ತಾನ ಈ ಪಂದ್ಯ ಗೆದ್ದು 2-0ಯಲ್ಲಿ ಸರಣಿ ಕ್ಲೀನ್‌ ಸ್ವೀಪ್‌ ಮಾಡಲು ಎದುರು ನೋಡುತ್ತಿದ್ದರೆ, ದ.ಆಫ್ರಿಕಾ ಸಮಬಲ ಸಾಧಿಸಲು ಹೋರಾಟ ನಡೆಸುತ್ತಿದೆ.

ಸ್ಕೋರ್‌: 

ಪಾಕಿಸ್ತಾನ 272 ಹಾಗೂ 298 
ದ.ಆಫ್ರಿಕಾ 201 ಹಾಗೂ 127/1
(* ನಾಲ್ಕನೇ ದಿನದಾಟದಂತ್ಯದ ವೇಳೆಗೆ)