ಮೂರನೇ ಏಕದಿನ ಪಂದ್ಯದಲ್ಲಿ ಹರ್ಷಿತ್ ರಾಣಾ ಅವರ ಮಾರಕ ಬೌಲಿಂಗ್ ದಾಳಿಗೆ (4 ವಿಕೆಟ್) ಆಸ್ಟ್ರೇಲಿಯಾ ತಂಡವು 236 ರನ್‌ಗಳಿಗೆ ಸರ್ವಪತನ ಕಂಡಿದೆ. ಮ್ಯಾಟ್ ರೆನ್‌ಶೋ ಅವರ ಅರ್ಧಶತಕದ ಹೊರತಾಗಿಯೂ ಆಸೀಸ್ ಕುಸಿತ ಕಂಡಿದ್ದು, ಭಾರತಕ್ಕೆ ಗೆಲ್ಲಲು ಸಾಧಾರಣ ಗುರಿ ನೀಡಿದೆ.

ಸಿಡ್ನಿ: ಹರ್ಷಿತ್ ರಾಣಾ ಮಾರಕ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ತಂಡವು ಮೂರನೇ ಏಕದಿನ ಪಂದ್ಯದಲ್ಲಿ ಕೇವಲ 236 ರನ್‌ಗಳಿಗೆ ಸರ್ವಪತನ ಕಂಡಿದೆ. ಈ ಮೂಲಕ ಭಾರತಕ್ಕೆ ಗೆಲ್ಲಲು ಸಾಧಾರಣ ಗುರಿ ಸಿಕ್ಕಿದೆ. ಹರ್ಷಿತ್ ರಾಣಾ 4 ವಿಕೆಟ್ ಕಬಳಿಸುವ ಮೂಲಕ ಆಸೀಸ್ ಬ್ಯಾಟಿಂಗ್ ಬೆನ್ನೆಲುಬು ಮುರಿಯುವಲ್ಲಿ ಯಶಸ್ವಿಯಾದರು.

ಉತ್ತಮ ಆರಂಭ ಪಡೆದ ಆಸ್ಟ್ರೇಲಿಯಾ

ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಮಿಚೆಲ್ ಮಾರ್ಷ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಆಸೀಸ್‌ಗೆ ಆರಂಭಿಕರಾದ ಟ್ರ್ಯಾವಿಸ್ ಹೆಡ್ ಹಾಗೂ ಮಿಚೆಲ್ ಮಾರ್ಷ್ ಉತ್ತಮ ಆರಂಭ ಒದಗಿಸಿಕೊಟ್ಟರು. ಮೊದಲ ವಿಕೆಟ್‌ಗೆ ಈ ಜೋಡಿ 56 ಎಸೆತಗಳಲ್ಲಿ 61 ರನ್‌ಗಳ ಜತೆಯಾಟವಾಡಿದರು. ಈ ಜೋಡಿ ಬೇರ್ಪಡಿಸುವಲ್ಲಿ ಸಿರಾಜ್ ಯಶಸ್ವಿಯಾದರು. ಹೆಡ್ 29 ರನ್ ಬಾರಿಸಿ ಪ್ರಸಿದ್ದ್ ಕೃಷ್ಣಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇನ್ನು 41 ರನ್ ಗಳಿಸಿದ್ದ ಮಿಚೆಲ್ ಮಾರ್ಷ್‌ಗೆ ಅಕ್ಷರ್ ಪಟೇಲ್ ಪೆವಿಲಿಯನ್ ಹಾದಿ ತೋರಿಸಿದರು.

ಇನ್ನು ಕಳೆದ ಪಂದ್ಯದ ಹೀರೋ ಮ್ಯಾಥ್ಯೂ ಶಾರ್ಟ್ 30 ರನ್ ಗಳಿಸಿ ವಾಷಿಂಗ್ಟನ್ ಸುಂದರ್‌ಗೆ ವಿಕೆಟ್ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ಅತ್ಯಂತ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಮ್ಯಾಟ್ ರೆನ್‌ಶೋ ಚೊಚ್ಚಲ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ರೆನ್‌ಶೋ 58 ಎಸೆತಗಳನ್ನು ಎದುರಿಸಿ 2 ಬೌಂಡರಿ ಸಹಿತ 56 ರನ್ ಗಳಿಸಿ ಸುಂದರ್‌ಗೆ ಎರಡನೇ ಬಲಿಯಾದರು.

ಇನ್ನುಳಿದಂತೆ ವಿಕೆಟ್ ಕೀಪರ್ ಬ್ಯಾಟರ್ ಅಲೆಕ್ಸ್ ಕ್ಯಾರಿ(24) ಹಾಗೂ ಕೂಪರ್ ಕಾನೋಲಿ(23) ಹೆಚ್ಚುಹೊತ್ತು ಕ್ರೀಸ್‌ನಲ್ಲಿ ನೆಲೆಯೂರಲು ಹರ್ಷಿತ್ ರಾಣಾ ಅವಕಾಶ ನೀಡಲಿಲ್ಲ. ಕೊನೆಯಲ್ಲಿ ನೇಥನ್ ಎಲ್ಲಿಸ್ 16 ರನ್‌ಗಳ ಕಾಣಿಕೆ ನೀಡಿ ಪ್ರಸಿದ್ದ್ ಕೃಷ್ಣಗೆ ವಿಕೆಟ್ ಒಪ್ಪಿಸಿದರು.

ಭಾರತದ ಬೌಲರ್‌ಗಳ ಸಂಘಟಿತ ಪ್ರದರ್ಶನ:

ಮೊದಲೆರಡು ಪಂದ್ಯಗಳಲ್ಲಿ ಸಂಘಟಿತ ಬೌಲಿಂಗ್ ಪ್ರದರ್ಶನ ತೋರಲು ವಿಫಲವಾಗಿದ್ದ ಭಾರತದ ಬೌಲರ್‌ಗಳು ಮೂರನೇ ಏಕದಿನ ಪಂದ್ಯದಲ್ಲಿ ಅತ್ಯಂತ ಶಿಸ್ತುಬದ್ದ ದಾಳಿ ನಡೆಸಿ ಗಮನ ಸೆಳೆದರು. ವೇಗಿ ಹರ್ಷಿತ್ ರಾಣಾ 39 ರನ್ ನೀಡಿ 4 ವಿಕೆಟ್ ಪಡೆದರೆ, ವಾಷಿಂಗ್ಟನ್ ಸುಂದರ್ 2, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಪ್ರಸಿದ್ದ್ ಕೃಷ್ಣ ಹಾಗೂ ಮೊಹಮ್ಮದ್ ಸಿರಾಜ್ ತಲಾ ಒಂದೊಂದು ವಿಕೆಟ್ ಪಡೆದರು.