* ಐಪಿಎಲ್ 2022 ರ ಮೊದಲು ಲಖನೌ ಸೂಪರ್ ಜೈಂಟ್ಸ್‌ನಿಂದ ಕರೆ ಬಂದಿತ್ತು * ಕೆ ಎಲ್ ರಾಹುಲ್ ಜೊತೆಗಿನ ಗೆಳೆತನದಿಂದಾಗಿ ಲಖನೌ ಸೇರಲು ಬಯಸಿದ್ದ ಪಾಂಡ್ಯ *  ಲಖನೌ ಆಫರ್ ನೀಡಿದ ನಂತರ ಗುಜರಾತ್ ತಂಡದ ನಾಯಕತ್ವ ವಹಿಸಲು ಆಶಿಶ್ ನೆಹ್ರಾ ಮನವಿ

- ಆತ್ಮ ವೈ ಆನಂದ್, ಪತ್ರಿಕೋದ್ಯಮ ವಿದ್ಯಾರ್ಥಿ, ಮೈಸೂರು ಮಹಾಜನ ಕಾಲೇಜ್ 

ಅಹಮದಾಬಾದ್‌(ಏ.15): ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರು ‘ಗುಜರಾತ್ ತಂಡಕ್ಕೆ ಸೇರುವ ಮೊದಲು ಲಖನೌ ಸೂಪರ್ ಜೈಂಟ್ಸ್‌ನಿಂದ ಕೂಡಿಕೊಳ್ಳಲು ಕರೆ ಬಂದಿತ್ತು. ಇನ್ನು ತಾವು ಕೂಡಾ ಕೆಎಲ್ ರಾಹುಲ್ ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದರಿಂದ ಲಖನೌ ಸೇರಲು ಸಿದ್ದನಿದ್ದೆ’ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.

15ನೇ ಆವೃತ್ತಿಯ ಐಪಿಎಲ್‌ ಟೂರ್ನಿಗೆ ನೂತನ ತಂಡಗಳಾಗಿ ಗುಜರಾತ್ ಟೈಟನ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ಸೇರ್ಪಡೆಗೊಂಡಿದ್ದವು. ಈ ಎರಡು ತಂಡಗಳು ತಾವಾಡಿದ ಪಾದಾರ್ಪಣೆ ಆವೃತ್ತಿಯಲ್ಲಿಯೇ ಅದ್ಭುತ ಪ್ರದರ್ಶನ ತೋರುವ ಮೂಲಕ ಗಮನ ಸೆಳೆದಿದ್ದವು. 2022 ರಲ್ಲಿ ಲಖನೌ ತಂಡಕ್ಕೆ ಕೆ ಎಲ್ ರಾಹುಲ್ ಅವರನ್ನು ನಾಯಕರನ್ನಾಗಿ ಆಯ್ಕೆಮಾಡಿದ ನಂತರ ಫ್ರಾಂಚೈಸಿಯು ಹಾರ್ದಿಕ್ ಪಾಂಡ್ಯ ಅವರನ್ನೂ ಸಹ ತಂಡಕ್ಕೆ ಸೇರಿಸಿಕೊಳ್ಳುವ ಇರಾದೆ ಹೊಂದಿತ್ತು. ಆದರೆ ಇದೆಲ್ಲದರ ನಡುವೆ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು ತಂಡದ ನಾಯಕನಾಗಿ ಹಾರ್ದಿಕ್ ಅವರನ್ನು ನೇಮಿಸಿಕೊಂಡಿತ್ತು.

‘ಒಂದು ವೇಳೆ ಆಶಿಶ್ ನೆಹ್ರಾ ನನ್ನನ್ನು ಸಂಪರ್ಕಿಸದಿದ್ದಲ್ಲಿ ನಾನು ಗುಜರಾತ್ ತಂಡದಲ್ಲಿ ಇರುತ್ತಿರಲಿಲ್ಲ’ ಎಂದು ಪಾಂಡ್ಯ ಹೇಳುವ ಮೂಲಕ ಕುತೂಹಲಕಾರಿ ಸಂಗತಿಯೊಂದನ್ನು ಬಿಚ್ಚಿಟ್ಟಿದ್ದಾರೆ. "ಐಪಿಎಲ್‌ನಲ್ಲಿ ಇನ್ನೊಂದು ಹೊಸ ಫ್ರಾಂಚೈಸಿಯಾದ ಲಖನೌ ಸೂಪರ್ ಜೈಂಟ್ಸ್ ನಿಂದ ನನಗೆ ಕರೆ ಬಂದಿತ್ತು. ನನ್ನ ಸ್ನೇಹಿತನಾದ ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸುತ್ತಿದ್ದರಿಂದ ಲಖನೌ ತಂಡವನ್ನು ಸೇರಿಕೊಳ್ಳುವ ಸನಿಹದಲ್ಲಿದ್ದೆ” ಎಂದು ಹಾರ್ದಿಕ್‌ ಪಾಂಡ್ಯ, ಗೌರವ್ ಕಪೂರ್ ಪಾಡ್‌ಕಾಸ್ಟ್ ನಲ್ಲಿ ತಿಳಿಸಿದ್ದಾರೆ.

IPL 2023 ಕುಗ್ಗಿರುವ ಡೆಲ್ಲಿಯನ್ನು ಬಗ್ಗುಬಡಿಯುತ್ತಾ ಆರ್‌ಸಿಬಿ?

ಇಂಡಿಯನ್ ಪ್ರೀಮಿಯರ್ ಲೀಗ್ ನ 15ನೇ ಆವೃತ್ತಿಯಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡವು ಅದ್ಭುತ ಪ್ರದರ್ಶನ ನೀಡಿ ತಾವಡಿದ ಮೊದಲ ಆವೃತ್ತಿಯಲ್ಲೇ ಚಾಂಪಿಯನ್ ಆಗಿತ್ತು. ತಂಡದ ಯಶಸ್ಸಿಗೆ ಪ್ರಮುಖ ಕಾರಣವೆಂದರೆ ನಾಯಕ ಹಾರ್ದಿಕ್ ಪಾಂಡ್ಯ. ಆಲ್ರೌಂಡರ್‌ ಹಾರ್ದಿಕ್ ಸುಮಾರು ಆರು ತಿಂಗಳ ವಿರಾಮದ ನಂತರ ಕ್ರಿಕೆಟ್‌ಗೆ ಮರಳಿದ್ದ ಅವರು ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿದರು. ಇದಾದ ಬಳಿಕ ಭಾರತ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ನಾಯಕನಾಗಿ ತಂಡವನ್ನು ಸಹ ಮುನ್ನಡೆಸುತ್ತಿದ್ದಾರೆ.

ಗುಜರಾತ್ ಟೈಟನ್ಸ್‌ ತಂಡದ ಮುಖ್ಯ ಕೋಚ್ ಆಶಿಶ್ ನೆಹ್ರಾ ಅವರ ಫೋನ್ ಕರೆ ತನ್ನ ಮನಸ್ಸನ್ನು ಹೇಗೆ ಬದಲಾಯಿಸಿತು ಎಂಬುದನ್ನು ವಿವರಿಸಿರುವ ಪಾಂಡ್ಯ, ‘ನೆಹ್ರಾ ಅವರು ನನ್ನ್ನನ್ನು ತಂಡಕ್ಕೆ ಸೇರುವಂತೆ ಮನವೊಲಿಸಲು ಪ್ರಯತ್ನಿಸಿದರು, ಅವರು ನನಗೆ ಕರೆಮಾಡಿ ಗುಜರಾತ್ ತಂಡವನ್ನು ಮುನ್ನಡೆಸುವಂತೆ ಹೇಳಿದರು, ನನಗೆ ನೆಹ್ರಾ ಅವರು ತುಂಬಾ ಚಿರಪರಿಚಿತವಾದ್ದರಿಂದ ನಾನು ಗುಜರಾತ್ ತಂಡವನ್ನು ಸೇರಿದೆ’ ಎಂದು ಪಾಂಡ್ಯ ಹೇಳಿದ್ದಾರೆ.

16ನೇ ಆವೃತ್ತಿಯ IPL ಟೂರ್ನಿಯಲ್ಲೂ ಸಹ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್‌ ತಂಡ ಭರ್ಜರಿ ಆರಂಭವನ್ನು ಮಾಡಿದ್ದು, ಆಡಿರುವ ನಾಲ್ಕು ಪಂದ್ಯದಲ್ಲಿ ಮೂರನ್ನು ಜಯಿಸುವ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇದೀಗ ಗುಜರಾತ್ ಟೈಟಾನ್ಸ್ ತಂಡವು ಏಪ್ರಿಲ್‌ 16ರಂದು ತವರಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ.