ನಿಶ್ಚಿತಾರ್ಥ, ಮಗು ಆದ ಮೂರು ವರ್ಷಗಳ ಬಳಿಕ ಟೀಮ್‌ ಇಂಡಿಯಾ ಆಲ್ರೌಂಡರ್‌ ಹಾರ್ದಿಕ್‌ ಪಾಂಡ್ಯಗೆ ಮದುವೆಯಾಗುವ ಆಸೆಯಾಗಿದೆಯಂತೆ..! ಹೌದು ಪತ್ನಿ ನತಾಶಾ ಸ್ಟಾಂಕೋವಿಕ್‌ರನ್ನು ಸಾಂಪ್ರದಾಯಿಕವಾಗಿ ಮದುವೆಯಾಗಲು ಅವರು ನಿರ್ಧಾರ ಮಾಡಿದ್ದು, ಉದಯ್‌ಪುರದಲ್ಲಿ ಮದುವೆ ನಡೆಯಲಿದೆ. ನಾಳೆಯಿಂದ ಮದುವೆಯ ಕಾರ್ಯಗಳು ಆರಂಭವಾಗಲಿದೆ. 

ನವದೆಹಲಿ (ಫೆ. 12): ಟೀಮ್‌ ಇಂಡಿಯಾ ಕ್ರಿಕೆಟಿಗ ಹಾರ್ದಿಕ್‌ ಪಾಂಡ್ಯ ಮದುವೆಯಾಗಲು ನಿರ್ಧಾರ ಮಾಡಿದ್ದಾರಂತೆ..! ನಿಮಗೆ ನೆನಪಿರಲಿ ಹಾರ್ದಿಕ್ ಪಾಂಡ್ಯ ಈಗಾಗಲೇ ತನ್ನ ಪತ್ನಿ(!) ನತಾಶಾ ಸ್ಟಾಂಕೋವಿಕ್‌ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ಮೂರು ವರ್ಷ ಕಳೆದಿವೆ. ಇವರಿಬ್ಬರ ಪುತ್ರ ಅಗಸ್ತ್ಯ ಪಾಂಡ್ಯಗೆ ಮುಂದಿನ ಜುಲೈನಲ್ಲಿ ಮೂರು ವರ್ಷ ತುಂಬಲಿದೆ. ಈ ಎಲ್ಲದರ ನಡುವೆ ಹಾರ್ದಿಕ್‌ ಪಾಂಡ್ಯಗೆ ಗೆಳತಿ ನತಾಶಾ ಸ್ಟಾಂಕೋವಿಕ್‌ರನ್ನು ಸಾಂಪ್ರದಾಯಿಕವಾಗಿ ವಿವಾಹವಾಗಬೇಕು ಎಂದು ಅನಿಸಿದೆ. ಅದರಂತೆ ರಾಜಸ್ಥಾನದ ಉದಯ್‌ಪುರದಲ್ಲಿ ದೊಡ್ಡ ಮಟ್ಟದಲ್ಲಿ ಸಿದ್ಧತೆಗಳು ನಡೆದಿವೆ. ಫೆ. 13 ರಿಂದ ಅಂದರೆ ನಾಳೆಯಿಂದ ಮದುವೆಯ ಕೆಲಸಗಳು ನಡೆಯಲಿದ್ದು, ವ್ಯಾಲಂಟೈನ್ಸ್‌ ಡೇ ದಿನದಂದು ಇಬ್ಬರೂ ಅದ್ದೂರಿಯಾಗಿ ವಿವಾಹವಾಗಲಿದ್ದಾರೆ.

ಮೂಲಗಳನ್ನು ನಂಬುವುದಾದರೆ, ನತಾಶಾ ಹಾಗೂ ಹಾರ್ದಿಕ್ ಪಾಂಡ್ಯ ಈಗಾಗಲೇ ರಿಜಿಸ್ಟರ್‌ ಮದುವೆಯಾಗಿದ್ದಾರೆ. ಇದರಲ್ಲಿ ಅವರ ಕುಟುಂಬದ ಆಪ್ತರಷ್ಟೇ ಭಾಗಿಯಾಗಿದ್ದರು. ಆದರೆ, ಇತ್ತೀಚೆಗೆ ಕೆಎಲ್‌ ರಾಹುಲ್‌ ಬಹಳ ಅದ್ದೂರಿಯಾಗಿ ಸಾಂಪ್ರದಾಯಿಕವಾಗಿ ವಿವಾಹವಾಗಿದ್ದಾರೆ. ಅದರ ಬೆನ್ನಲ್ಲಿಯೇ ಅಕ್ಷರ್‌ ಪಟೇಲ್‌ ಕೂಡ ಚಂದನೆಯ ಕಾರ್ಯಕ್ರಮದಲ್ಲಿ ಗೆಳತಿಯ ಕೈಹಿಡಿದಿದ್ದಾರೆ. ಇವೆಲ್ಲವನ್ನೂ ಕಂಡು ಹಾರ್ದಿಕ್‌ ಪಾಂಡ್ಯಗೂ ತಾವು ಕೂಡ ಇದೇ ರೀತಿ ಮದುವೆಯಾಗಿದ್ದರೆ ಒಳ್ಳೆಯದು ಎಂದನಿಸಿದೆ. ಅದಕ್ಕಾಗಿ ಅದ್ದೂರಿಯಾಗಿ ಮದುವೆಯ ಪ್ಲ್ಯಾನ್‌ ಮಾಡಿದ್ದಾರಂತೆ!

2020ರ ಮೇ ತಿಂಗಳಲ್ಲಿ ವಿವಾಹವಾಗಿದ್ದ ಹಾರ್ದಿಕ್‌ ಪಾಂಡ್ಯ: ಪತ್ರಿಕಾ ವರದಿಗಳ ಪ್ರಕಾರ, ಹಾರ್ದಿಕ್‌ ಪಾಂಡ್ಯ ಹಾಗೂ ನತಾಶಾ ಸ್ಟಾಂಕೋವಿಕ್‌ 2020ರ ಮೇ 31 ರಂದು ರಿಜಿಸ್ಟರ್‌ ಮುದುವೆ ಆಗಿದ್ದರು. ಇದು ಕರೋನಾ ಕಾಲದ ಮದುವೆಯಾಗಿದ್ದರಿಂದ ಕುಟುಂಬದ ಆಪ್ತರಷ್ಟೇ ಕಾರ್ಯಕ್ರಮದಲ್ಲಿದ್ದರು ಎಂದು ಅವರ ಸ್ನೇಹಿತನೊಬ್ಬ ತಿಳಿಸಿದ್ದ. ಅದಾದ ಬಳಿಕವೇ ತಾವು ದಂಪತಿಗಳು ಎಂದು ಈ ಜೋಡಿ ಹೇಳಿತ್ತು. ಜುಲೈ 30 ರಂದು ನತಾಶಾ ಸ್ಟಾಂಕೋವಿಕ್‌, ಪುತ್ರ ಅಗಸ್ತ್ಯನಿಗೆ ಜನ್ಮ ನೀಡಿದ್ದರು. ಇಲ್ಲಿಯವರೆಗೂ ಮಗನ ಪಾಲನೆಯಲ್ಲಿಯೇ ತೊಡಗಿದ್ದ ಹಾರ್ದಿಕ್‌ ಪಾಂಡ್ಯ, ಈ ಅದ್ದೂರಿಯಾಗಿ ವಿವಾಹವಾಗುವ ನಿರ್ಧಾರ ಮಾಡಿದ್ದಾರೆ.

ಭಾವೀ ಪತ್ನಿಯೊಂದಿಗೆ ಹೋಳಿಯಾಚರಿಸಿದ ಹಾರ್ದಿಕ್ ಪಾಂಡ್ಯ

ಫೆಬ್ರವರಿ 13 ರಿಂದ ಮದುವೆಯ ಶಾಸ್ತ್ರಗಳು ಪ್ರಾರಂಭವಾಗಲಿವೆ: ವರದಿಗಳನ್ನು ನಂಬುವುದಾದರೆ, ನತಾಶಾ-ಹಾರ್ದಿಕ್ ಅವರ ವಿವಾಹದ ಆಚರಣೆಗಳು ಫೆಬ್ರವರಿ 13 ರಿಂದ ಆರಂಭವಾಗಲಿದೆ. ಫೆಬ್ರವರಿ 16 ರವರೆಗೆ ಇದು ನಡೆಯಲಿದೆ ಎಂದು ವರದಿಯಾಗಿದೆ. ದಂಪತಿಗಳು ತಮ್ಮ ಮದುವೆಗೆ ಸಂಪೂರ್ಣ ಬಿಳಿ ಥೀಮ್ ಅನ್ನು ಇಟ್ಟುಕೊಂಡಿದ್ದಾರೆ ಎಂದು ಹೇಳಲಾಗಿದೆ. ಮದುವೆಯಲ್ಲಿ ಅರಿಶಿನ, ಮೆಹಂದಿ ಮತ್ತು ಸಂಗೀತದ ಆಚರಣೆಗಳನ್ನು ಇಡಲಾಗುತ್ತದೆ. ಕಳೆದ ವರ್ಷ ನವೆಂಬರ್‌ನಿಂದ ಈ ಜೋಡಿ ಮದುವೆ ತಯಾರಿಯಲ್ಲಿ ತೊಡಗಿಕೊಂಡಿದ್ದರು ಎನ್ನಲಾಗಿದೆ.

ಸೋಶಿಯಲ್‌ ಮೀಡಿಯಾದಲ್ಲಿ ಜ್ಯೂನಿಯರ್‌ ಹಾರ್ದಿಕ್‌ ಪಾಂಡ್ಯನ ಫೋಟೋ ವೈರಲ್‌!

ಮದುವೆ ಸಮಾರಂಭದಲ್ಲಿ ನತಾಶಾ ಬಿಳಿ ಗೌನ್ ಅನ್ನು ಧರಿಸಿ ಬರಲಿದ್ದಾರೆ ಎಂದು ಹೇಳಲಾಗಿದೆ. ಆದರೆ, ಮದುವೆಗೆ ಸಂಬಂಧಿಸಿದ ಅಧಿಕೃತ ಘೋಷಣೆ ಇನ್ನೂ ಹೊರಬಿದ್ದಿಲ್ಲ.