* 24ನೇ ವಸಂತಕ್ಕೆ ಕಾಲಿರಿಸಿದ ರಿಷಭ್ ಪಂತ್* ರಿಷಭ್ ಪಂತ್ ಹುಟ್ಟುಹಬ್ಬಕ್ಕೆ ಶುಭ ಕೋರಿದ ಹಿರಿ-ಕಿರಿಯ ಕ್ರಿಕೆಟಿಗರು* ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪ್ಲೇ ಆಫ್‌ಗೇರಿದೆ
ಬೆಂಗಳೂರು(ಅ.04): ಭಾರತ ಕ್ರಿಕೆಟ್ ತಂಡದ ಸ್ಪೋಟಕ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್, ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡದ ನಾಯಕ ರಿಷಭ್ ಪಂತ್ ಸೋಮವಾರ(ಅ.04)ವಾದ ಇಂದು ತಮ್ಮ 24ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಡೆಲ್ಲಿ ಡ್ಯಾಶಿಂಗ್ ಆಟಗಾರನಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.
2017ರಲ್ಲಿ ಇಂಗ್ಲೆಂಡ್ ವಿರುದ್ದ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಟಿ20 ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ರಿಷಭ್ ಪಂತ್ ಇದಾದ ಬಳಿಕ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಭಾರತದ ನಂ.1 ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿ ಬೆಳೆದು ನಿಂತಿದ್ದಾರೆ. ಇಲ್ಲಿಯವರೆಗೆ ರಿಷಭ್ ಪಂತ್ (Rishabh Pant) 25 ಟೆಸ್ಟ್,18 ಏಕದಿನ ಹಾಗೂ 33 ಟಿ20 ಪಂದ್ಯಗಳನ್ನಾಡಿದ್ದಾರೆ.
ರಿಷಭ್ ಪಂತ್ ಟೀಂ ಇಂಡಿಯಾಗೆ (Team India) ಎಂಟ್ರಿ ಕೊಟ್ಟಾಗ ಅವರೆದುರು ದೈತ್ಯ ಪ್ರತಿಭೆ ಮಹೇಂದ್ರ ಸಿಂಗ್ ಧೋನಿ (MS Dhoni) ಮೊದಲ ಆಯ್ಕೆಯ ವಿಕೆಟ್ ಕೀಪರ್ ಎನಿಸಿದ್ದರು. ಧೋನಿ ಅವರಂತಹ ದಿಗ್ಗಜ ಆಟಗಾರನ ಸ್ಥಾನವನ್ನು ತುಂಬುವುದು ಪಂತ್ ಪಾಲಿಗೆ ಅಗ್ನಿ ಪರೀಕ್ಷೆಯಾಗಿತ್ತು. ವಿಕೆಟ್ ಕೀಪಿಂಗ್ ಮಾಡುವ ವೇಳೆ ಕ್ಯಾಚ್ ಕೈಚೆಲ್ಲಿದರೆ, ಸ್ಟಂಪಿಂಗ್ ಮಿಸ್ ಮಾಡಿದರೆ, ಮೈದಾನದಲ್ಲಿದ್ದ ಪ್ರೇಕ್ಷಕರು ಧೋನಿ.. ಧೋನಿ... ಎಂದು ಘೋಷಣೆ ಕೂಗುವ ಮೂಲಕ ಮುಜುಗರವನ್ನುಂಟು ಮಾಡುತ್ತಿದ್ದರು. ಇನ್ನು ವೃತ್ತಿ ಜೀವನದ ಆರಂಭದಲ್ಲಿ ಪಂತ್ ಸ್ಥಿರ ಬ್ಯಾಟಿಂಗ್ ಪ್ರದರ್ಶನ ತೋರಲು ಎಡವುತ್ತಿದ್ದರು. ಹೀಗಿದ್ದೂ ಪಂತ್‌ಗೆ ಹೆಚ್ಚಿನ ಅವಕಾಶವನ್ನು ನೀಡಿದ್ದರಿಂದ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾರೆ.
ಅದರಲ್ಲೂ 2019ರ ಬಳಿಕ ಧೋನಿ ಟೀಂ ಇಂಡಿಯಾದಿಂದ ದೂರ ಉಳಿದಿದ್ದರಿಂದ ಪಂತ್ ಟೀಂ ಇಂಡಿಯಾ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿ ಮೂರು ಮಾದರಿಯ ಕ್ರಿಕೆಟ್‌ನಲ್ಲೂ ಆಯ್ಕೆ ಮಾಡಲಾಯಿತು. ಇದಾದ ಬಳಿಕ ಆಸ್ಟ್ರೇಲಿಯಾ ವಿರುದ್ದ ಸಿಡ್ನಿ ಟೆಸ್ಟ್ ಹಾಗೈ ಗಾಬಾ ಟೆಸ್ಟ್‌ನಲ್ಲಿ ಕೆಚ್ಚೆದೆಯ ಪ್ರದರ್ಶನ ತೋರುವ ಮೂಲಕ ಟೀಂ ಇಂಡಿಯಾ ಆಸೀಸ್ ನೆಲದಲ್ಲಿ ಸತತ ಎರಡನೇ ಟೆಸ್ಟ್ ಸರಣಿ ಗೆಲ್ಲುವಲ್ಲಿ ಪಂತ್ ಪ್ರಮುಖ ಪಾತ್ರ ವಹಿಸಿದ್ದರು.
IPL 2021 ಅಗ್ರಸ್ಥಾನಕ್ಕಾಗಿಂದು ಚೆನ್ನೈ ವರ್ಸಸ್ ಡೆಲ್ಲಿ ಕದನ
2021ನೇ ಸಾಲಿನ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಭುಜದ ಗಾಯಕ್ಕೆ ಒಳಗಾಗಿದ್ದರಿಂದ ಡೆಲ್ಲಿ ಫ್ರಾಂಚೈಸಿ ರಿಷಭ್ ಪಂತ್‌ಗೆ ನಾಯಕ ಪಟ್ಟ ಕಟ್ಟಿತು. ಫ್ರಾಂಚೈಸಿ ನಂಬಿಕೆ ಉಳಿಸಿಕೊಳ್ಳುವಂತ ಪ್ರದರ್ಶನವನ್ನು ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ತೋರಿದೆ. ಆಡಿದ 12 ಪಂದ್ಯಗಳ ಪೈಕಿ 9 ಗೆಲುವು ಹಾಗೂ 3 ಸೋಲುಗಳೊಂದಿಗೆ 18 ಅಂಕ ಗಳಿಸಿದ್ದು, ಚೆನ್ನೈ ಬಳಿಕ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪ್ಲೇ ಆಫ್‌ಗೇರಿದ ಎರಡನೇ ತಂಡ ಎನ್ನುವ ಗೌರವಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಪಾತ್ರವಾಗಿದೆ.
ರಿಷಭ್ ಪಂತ್ ಹುಟ್ಟುಹಬ್ಬಕ್ಕೆ ಬಿಸಿಸಿಐ ಸೇರಿದಂತೆ ಟೀಂ ಇಂಡಿಯಾ ಸಹಾ ಆಟಗಾರರು ಟ್ವೀಟ್ ಮೂಲಕ ಜನ್ಮದಿನದ ಶುಭಾಶಯ ಕೋರಿದ್ದಾರೆ.
